ತುಮಕೂರು: ಗ್ರಾಮಗಳ ಜನ,ಜಾನುವಾರುಗಳ ಬದುಕಿಗೆ ತೊಂದರೆ ನೀಡುವ ಮತ್ತು ಪರಿಸರ ಹಾಳು ಮಾಡುವ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಬಾರದು ಈಗ ಕಲ್ಲು ಗಣಿಗಾರಿಕೆ ಗೆ ನೀಡಿರುವ ಗುತ್ತಿಗೆ ಅನುಮತಿ ಪತ್ರವನ್ನು ವಾಪಸ್ ಪಡೆಯಬೇಕು ಎಂದು ನವ ಕರ್ನಾಟಕ ರೈತರ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕಲ್ಲುಗಣಿ ಬಾಧಿತ ಪ್ರದೇಶವಾಗಿರುವ ತಾಲೂಕಿನ ಕೋರಾ ಹೋಬಳಿ ಅಹೋಬಲ ಅಗ್ರಹಾರ ಸ.ನಂ.172ರ ವಾಪ್ತಿಯಲ್ಲಿ ಬರುವ ಓಬಲೇಶ್ವರ ಗುಡ್ಡದ 7 ಎಕರೆ ಪ್ರದೇಶದಲ್ಲಿ ಯೇ ಗ್ರಾಮಸ್ಥರು ಒಟ್ಟಿಗೆ ಸೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರದೇಶದಲ್ಲಿ ಎಂ.ಸ್ಯಾಂಡ್ ತಯಾರಿಸುವ ಉದ್ದೇಶಕ್ಕಾಗಿ ತುಮಕೂರಿನ ಮೆ. ಶ್ರೀ ಧನಲಕ್ಷ್ಮೀ ನ್ಪೋನ್ ಕ್ರಷರ್ ಇವರಿಗೆ ನೀಡಲಾದ ಕಲ್ಲು ಗಣಿಗಾರಿಕೆ ಗಣಿ ಗುತ್ತಿಗೆಯ ನಿರಾಪೇಕ್ಷಣಾ ಅನುಮತಿ ಪತ್ರವನ್ನು ನೀಡಿದ್ದು, ಇದು ಅವೈಜ್ಞಾನಿಕವಾಗಿ ನೀಡಿರುವ ಅನುಮತಿ ಪತ್ರ ಇದನ್ನು ಹಿಂಪಡೆಯುವಂತೆ ನವ ಕರ್ನಾಟಕ ರೈತ ಸಂಘ ಹಾಗೂ ಚಿನ್ನವಾರನಹಳ್ಳಿ ಅನ್ನದಾನ ಶಾಸ್ತ್ರಿಪಾಳ್ಯ, ಮುದ್ದರಾಮಯ್ಯನಪಾಳ್ಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಿದರು.
ಈ ವಿವಾದಿತ ಪ್ರದೇಶದಲ್ಲಿ ಹೆಚ್ಚು ಪರಿಶಿಷ್ಟ ಜಾತಿ ಮತ್ತು ವರ್ಗದ ಮತ್ತು ಹಿಂದುಳಿದ ವರ್ಗದ ಬಡ ರೈತರ ಕೃಷಿ ಜಮೀನುಗಳಿದ್ದು ಈ ಗ್ರಾಮಗಳ ರೈತರು ತಮ್ಮ ಜಾನುವಾರುಗಳು, ಮೇಕೆ, ಕುರಿ, ಹಸು ಸಾಕಾಣಿಕೆಗೆ ಈ ಗುಡ್ಡವನ್ನೇ ಅವಲಂಬಿಸಿದ್ದಾರೆ. ಈ ಎಲ್ಲಾ ಗ್ರಾಮಗಳು ಈ ಗುಡ್ಡದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಸುಮಾರು 400 ಅಡಿ ಅಂತರದಲ್ಲಿ ಚನ್ನಮುದ್ದನಹಳ್ಳಿ ಕೆರೆಯಿದೆ. ಗಣಿ ಚಟುವಟಿಕೆಗೆ ಅನುಮತಿ ನೀಡಿದ್ದಲ್ಲಿ ಕೆರೆಯ ನೀರು ಕಲುಷಿತಗೊಂಡು ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಾಗುತ್ತದೆ ಎಂದು ತಿಳಿಸಿದ್ದಾರೆ.
ರೈತರು ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಈ ಗಣಿಗಾರಿಕೆ ಕ್ರಷರ್‌ನಿಂದ ಬರುವ ಕಲ್ಲಿನ ಪುಡಿ, ಧೂಳು ರೈತರ ಬೆಳೆ ಮೇಲೆ ಕೂರುವುದಿರಂದ ಬೆಳೆ ಹಾಣಿಯಾಗುವುದಲ್ಲದೆ, ಜಾನುವಾರುಗಳಿಗೆ ಮೇವು ಸಹ ಇಲ್ಲದಂತಾಗುತ್ತದೆ. ಗಣಿಗಾರಿಕೆ ಸಂದರ್ಭದಲ್ಲಿ ಡೈನಾಮೆಂಟ್ ಇಟ್ಟು ಕಲ್ಲು ಸೀಳುವ ಕೆಲಸ ನಡೆಯುತ್ತದೆ. ಶಬ್ದ ಮಾಲಿನ್ಯ ಮತ್ತು ಕಲ್ಲು ಚೂರುಗಳ ಸಿಟಿತದಿಂದ ಸ್ಥಳಿಯರಿಗೆ ತೊಂದರೆಯಾಗುವ ಸಂಭವವಿದೆ ಎಂದಿದ್ದಾರೆ. ಇದೆಲ್ಲಾ ಗೊತ್ತಿದ್ದೂ ತಮಕೂರು ತಹಸೀಲ್ದಾರ್ ಅವರು ನೀಡಿರುವ ಸ್ಥಳ ಪರಿಶೀಲನಾ ವರದಿಯಲ್ಲಿ ಸಮಂಜಸವಾಗಿರುವುದಿಲ್ಲ ಎಂದು ಉಲ್ಲೇಖೀಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಿಂದಾಲಿ, ಪಂಚಾಯಿತಿ ವ್ಯಾಪ್ತಿಯಿಂದ ಅನುಮತಿ ಪಡೆಯದೇ ಜಲ್ಲಿ ಕ್ರಷರ್ ನಡೆಸಲು ಮುಂದಾಗಿದಾರೆ ಗ್ರಾಮಸ್ಥರು ದೂರಿದ್ದಾರೆ. ಗಣಿಗಾರಿಕೆಯನ್ನು ರದ್ದುಪಡಿಸದೇ ಹೋದರೆ, ಮುಂದಿನ ದಿನಗಳಲ್ಲಿ ಜಿಲ್ಲಾ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿ ಧರಣಿ ಸತ್ಯಾಗ್ರಹ ನಡೆಸಲಾ ಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ರೈತ ಮುಖಂಡರಾದ ಪುಟ್ಟಸಿದ್ದಯ್ಯ, ಬಿ.ಸಿ. ಕೃಷ್ಣಮೂರ್ತಿ, ಸಿ.ಕೆ. ಕುಮಾರ್, ಮಧು, ನಾಗಪ್ಪ, ರುದ್ರೇಶ್, ರಾಮಯ್ಯ, ಸುಜಾತ, ಯಶೋಧಮ್ಮ, ನವಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ.ಜಗದೀಶ್, ರಾಜ್ಯಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ರಾಧಿಕಾ ಸೇರಿದಂತೆ ಗ್ರಾಮಸ್ಥರಿದ್ದರು.
ಗಣಿಗಾರಿಕೆ ಎತ್ತಿನಹೊಳೆ ಯೋಜನೆಗೆ ತೊಡಕು : ಈ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆ ಹಾದು ಹೋಗುವುದರಿಂದ ಈ ಗ್ರಾಮಸ್ಥರ ಮನವಿ ಮೇರೆಗೆ ಗುಡ್ಡವನ್ನು ಪರಿಶಿಲಿಸಿ ಗುಡ್ಡದಡಿಯಲ್ಲಿ ಕೊರೆಯಲಾದ ಸುರಂಗ ಮಾರ್ಗವು ಈ ವಿವಾದಿತ ಸ್ಥಳದಿಂದ 350 ಮೀ. ಅಂತರದಲ್ಲಿದೆ. ಈ ಸ್ಥಳದಲ್ಲಿ ಗಣಿಗಾರಿಕೆ ಮಾಡಲು ಆರಂಭಿಸಿದರೆ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯ ಕುಡಿವ ನೀರಿನ ಯೋಜನೆಯ ಸುರಂಗ ಮಾರ್ಗಕ್ಕೆ ಹಾನಿ ಉಂಟಾಗುತ್ತದೆ ಎಂದು ಮುಖ್ಯ ಇಂಜಿನಿಯರ್ ನೀಡಿರುವ ಪತ್ರದಲ್ಲಿ ಗ್ರಾಮಸ್ಥರು ತಿಳಿಸಿದ್ದಾರೆ.