ಭಟ್ಕಳ: ತಾಲೂಕಿನ ಬಸ್ತಿ ಕಾಯ್ಕಿಣಿಯಲ್ಲಿ ಉತ್ತರಕೊಪ್ಪಕ್ಕೆ ಹೋಗುವ ರಸ್ತೆಗೆ ಅಂಡರಪಾಸ್ ಮಾಡದೇ ಹೆದ್ದಾರಿ ನಿರ್ಮಿಸಲು ಕೊಡುವುದಿಲ್ಲ ಎಂದು ಸಾರ್ವಜನಿಕರು ಕಾಮಗಾರಿ ತಡೆದು ಪ್ರತಿಭಟನೆ ಮಾಡಿದರು.
ತಾಪಂ ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ಕಾಯ್ಕಿಣಿ-ಉತ್ತರ ಕೊಪ್ಪ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ಜನ ಸಂಚಾರವಿದ್ದು, ರೈತರು, ವಿದ್ಯಾರ್ಥಿಗಳು, ಸಾರಿಗೆ ಬಸ್ಸುಗಳು, ವಿವಿಧ ವಾಹನಗಳು ಇದೇ ರಸ್ತೆಯನ್ನು ಬಳಸಿ ಹಳ್ಳಿಗೆ ಹೋಗುವುದರಿಂದ ಅಂಡರ್‌ಪಾಸ್ ಅನಿವಾರ್ಯವಾಗಿದೆ ಎಂದರು.
ಈಗಾಗಲೇ ತಾಪಂ, ಗ್ರಾಪಂನಿಂದ ಅಂಡರಪಾಸ್ ಮಾಡಬೇಕೆಂದು ಸಾಕಷ್ಟು ಬಾರಿ ಠರಾವು ಮಾಡಿ ಕಳುಹಿಸಲಾಗಿದೆ. ಕಳೆದ ವರ್ಷ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಅಂಡರಪಾಸ್ ಮಾಡದೇ ಕಾಯ್ಕಿಣಿ ಬಸ್ತಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ತಿಳಿಸಲಾಗಿತ್ತು ಎಂದರು.
ತಾಪಂ ಮಾಜಿ ಸದಸ್ಯ ವಿಷ್ಣು ದೇವಾಡಿಗ ಮಾತನಾಡಿ, ಬಸ್ತಿ ಕಾಯ್ಕಿಣಿಯಲ್ಲಿ ಅಂಡರಪಾಸ್ ಮಾಡುವ ಕುರಿತು ಭರವಸೆ ಕೊಟ್ಟಿದ್ದ ಅಧಿಕಾರಿಗಳು ಇಂದು ಯಾರಿಗೂ ತಿಳಿಸದೇ, ಅಂಡರಪಾಸ್ ಕಾಮಗಾರಿ ಮಾಡದೇ ತರಾತುರಿಯಲ್ಲಿ ಹೆದ್ದಾರಿ ಕಾಮಗಾರಿ ಮುಗಿಸಲು ಮುಂದಾಗಿದ್ದಾರೆ.
ಅಂಡರಪಾಸ್ ಮಾಡದೇ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದರು. ಸ್ಥಳಕ್ಕಾಗಮಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಕೆ.ಎಸ್., ಐಆರ್‌ಬಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಸಿ ಚರ್ಚಿಸುವುದಾಗಿ ಹೇಳಿದ್ದಲ್ಲದೇ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸುವುದಾಗಿ ಹೇಳಿದರು.
ಸ್ಥಳಕ್ಕೆ ತಹಶೀಲ್ದಾರ್ ಡಾ| ಸುಮಂತ ಬಿ.ಇ.,, ಮಾವಳ್ಳಿ ಕಂದಾಯ ನಿರೀಕ್ಷಕರು ಆಗಮಿಸಿದ್ದರು. ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯರಾದ ಭಾಸ್ಕರ ನಾಯ್ಕ, ವಸಂತ ನಾಯ್ಕ, ನಿವೃತ್ತ ಅಂಚೆ ಮಾಸ್ತರ್ ವಿನಾಯಕ, ಪ್ರಮುಖರಾದ ಚಂದ್ರಕಾಂತ ನಾಯ್ಕ, ದೀಪಕ ನಾಯ್ಕ, ರಾಜು ನಾಯ್ಕ, ವಿಷ್ಣು ಆಚಾರಿ, ರಾಜು ಕುಪ್ಪ ನಾಯ್ಕ, ವಿಶ್ವನಾಥ ಮಡಿವಾಳ, ಮಂಜು ಗೊಂಡ, ಲಕ್ಷ್ಮಣ ನಾಯ್ಕ, ಪರಮೇಶ್ವರ ನಾಯ್ಕ, ವೆಂಕಟೇಶ ದೇವಾಡಿಗ ಸೇರಿದಂತೆ ಹಲವರಿದ್ದರು.