ಚಿಕ್ಕೋಡಿ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಮತ್ತು ಚಿಂಚಣಿ ಬಳಿ ಅಳವಡಿಸಿರುವ ಟೋಲ್ ಸಂಗ್ರಹ ಘಟಕಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಕಬ್ಬೂರ ಪಟ್ಟಣದ ಹತ್ತಿರ ಇರುವ ಟೋಲ್ ಸಂಗ್ರಹ ಹತ್ತಿರ 3 ಗಂಟೆಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದರು.
ಈ ವೇಳೆ ರಾಜ್ಯ ರೈತ ಸಂಘದ ರಾಜ್ಯ ವಕ್ತಾರ ತ್ಯಾಗರಾಜ್ಯ ಕದಂ ಮಾತನಾಡಿ, ಚಿಕ್ಕೋಡಿ ತಾಲೂಕಿನ ಕೇವಲ 25 ಕಿ.ಮೀ ಅಂತರದಲ್ಲಿ ಎರಡು ಕಡೆಗೆ ಟೋಲ್ ಸಂಗ್ರಹಣಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಇದರಿಂದ ನೆರೆ ಮತ್ತು ಬರ ಸಂಕಷ್ಟದಲ್ಲಿರುವ ಜನತೆ ಟೋಲ್ ಸಂಗ್ರಹದಿಂದ ಸಾಮಾನ್ಯ ಜನರಿಗೆ ಹೊರೆಯಾಗಿದೆ. ಸರ್ಕಾರ ಕೂಡಲೇ ಟೋಲ್ ಸಂಗ್ರಹಣಾ ಕೇಂದ್ರಗಳನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಟೋಲ್ ಸಂಗ್ರಹಣಾ ಕೇಂದ್ರ ಆರಂಭಿಸಬೇಕಾದರೂ ಅದಕ್ಕೊಂದು ನಿಯಮವಿದೆ. ಆ ನಿಯಮದ ಪ್ರಕಾರ ಮಾಡಬೇಕಿತ್ತು. ಆದರೆ ಈಗ ಕೇವಲ 25.ಕಿ.ಮೀ, ಅಂತರದಲ್ಲಿ ಮಾಡಿರುವ ಟೋಲ್ ಸಂಗ್ರಹಣಾ ಕೇಂದ್ರಗಳು ಅವೈಜ್ಞಾನಿಕವಾಗಿವೆ ಎಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಡಾ| ಸಂತೋಷ ಬಿರಾದಾರ ಸರ್ಕಾರದ ಮುಂದಿನ ಆದೇಶ ಬರುವವರಿಗೂ ಟೋಲ್ ಸಂಗ್ರಹ ಬಂದ್ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ವಾಪಸ್ ಪಡೆದುಕೊಂಡರು.
ರಾಜ್ಯ ರೈತ ಸಂಘದ ಕಾರ್ಯದರ್ಶಿ ಭೀಮಶಿ ಘಡಾರಿ, ರಾಜ್ಯ ಸಂಚಾಲಕ ಗಣಪತಿ ಇಳಗೇರಿ, ಸತ್ಯಪ್ಪ ಮಲ್ಲಾಪೂರೆ, ಮಂಜುನಾಥ ಪರಗೌಡರ,ಲಕ್ಷ್ಮಣ ಪೂಜೇರಿ, ಭರಮು ಖೇಮಲಾಪೂರೆ, ಮಲ್ಲಪ್ಪಾ ಅಂಗಡಿ,ಬಾಬು ಹಿರೆವಾಡಿ,ಆನಂದ ಪಾಶ್ಚಾಪೂರೆ,ಹನುಮಂತ ಹನುಮನ್ನವರ, ಪರಸಪ್ಪಾ ಕರಿಕಟ್ಟಿ, ರೈತ ಸಂಘದ ಸದಸ್ಯರು, ಲಾರಿ ಸಂಘದ ಮಾಲೀಕರು ಚಾಲಕರು ಇದ್ದರು.