ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಯರನ್ನು ಗಡಿಪಾರು ಮಾಡಲು ರಾಜ್ಯಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ರಾಷ್ಟ್ರೀಯ ಹಿಂದೂ ಆಂದೋಲನ ಸಮಿತಿ ಶನಿವಾರ ಮೌರ್ಯಸರ್ಕಲ್‌ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ 40 ಸಾವಿರ ಬಾಂಗ್ಲಾದೇಶಿಗರು ಅಕ್ರಮವಾಗಿ ನೆಲೆಸಿದ್ದು, ಅವರನ್ನು ಗಡಿಪಾರು ಮಾಡಬೇಕು ಎಂದು ಈ ಹಿಂದೆ ಎಚ್.ಡಿ ಕುಮಾರಸ್ವಾಮಿ ವರದಿ ಬಿಡುಗಡೆ ಮಾಡಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದು ಬಾಂಗ್ಲಾದೇಶಿಗರ ಗಡಿಪಾರಿಗೆ ಕ್ರಮ ವಹಿಸಲಿ ಎಂದು ಒತ್ತಾಯಿಸಿದರು.
ಬಾಂಗ್ಲಾ ಪ್ರಜೆಗಳು ಅಪರಾಧ ಕೃತ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರಕರಣವೊಂದರಲ್ಲಿ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಂಗ್ಲಾ ಮುಸ್ಲಿಂರನ್ನು ಪೊಲೀಸರು ಬಂಧಿಸಿದ್ದರು. ಹೀಗಾಗಿ, ರಾಜ್ಯದ ಸುರಕ್ಷತೆ ದೃಷ್ಟಿಯಿಂದ ಕೂಡಲೇ ಬಾಂಗ್ಲಾ ಪ್ರಜೆಗಳನ್ನು ಗಡಿಪಾರು ಮಾಡಲು ಸರ್ಕಾರ ಮುಂದಾಗಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಸ್ಸಾಂನಲ್ಲಿ 40 ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿಗರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವ್ಯವಸ್ಥಿತ ಸಂಚುಗಳನ್ನು ರೂಪಿಸುತ್ತಿದ್ದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಬಾಂಗ್ಲಾ ವಾಸಿಗಳನ್ನು ದೇಶಬಿಟ್ಟು ಹೊರಗಟ್ಟಬೇಕಿದೆ ಎಂದು ಹೇಳಿದರು.
“ಲವ್ ರಾತ್ರಿ’ ಚಿತ್ರದ ಹೆಸರು ಬದಲಿಸಿ: ಹಿಂದೂಗಳ ಪವಿತ್ರ ನವರಾತ್ರಿ ಹಬ್ಬದ ಹೆಸರಿಗೆ ಅಪಮಾನ ಮಾಡಲು, ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದಲೇ ಹಿಂದಿ ಸಿನಿಮಾಗೆ “ಲವ್ ರಾತ್ರಿ’ ಎಂದು ಹೆಸರಿಡಲಾಗಿದೆ. ಹೀಗಾಗಿ, ನಟ ಸಲ್ಮಾನ್ ಖಾನ್ ನಿರ್ಮಾಣದ ಲವ್ ರಾತ್ರಿ ಚಿತ್ರದ ಹೆಸರನ್ನು ಚಿತ್ರ ರಿಲೀಸ್‌ಗೂ ಮುನ್ನ ಬದಲಾಯಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.