Advertisement

ಟ್ಯಾಂಕರ್‌ ನೀರಿಗೆ ಬೇಡಿಕೆ: ಕೊರ್ಗಿ ಸಾಗಿನಗುಡ್ಡೆಯಲ್ಲಿ ನೀರಿನ ಸಮಸ್ಯೆ

03:08 PM Mar 27, 2024 | Team Udayavani |

ತೆಕ್ಕಟ್ಟೆ: ಕೊರ್ಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಾಗಿನಗುಡ್ಡೆಯಲ್ಲಿ ಪರಿಶಿಷ್ಟ ಕಾಲಿನಿಯ ನಿವಾಸಿಗಳು ಸೇರಿದಂತೆ ಸುಮಾರು 50 ಮನೆಗಳಿಗೆ ಕುಡಿಯುವ ನೀರಿಗೆ ತತ್ವಾರ ಎದುರಾಗಿದ್ದು, ಗ್ರಾ.ಪಂ.ನಿಂದ ಸರಬರಾಜಾಗುವ ಪ್ರಮುಖ ಬಾವಿ ಹಾಗೂ
ಮೆಕ್ಕೆಮನೆ ಮದಗದಲ್ಲಿನ ಅಂತರ್ಜಲ ಮಟ್ಟವು ಸಂಪೂರ್ಣ ಬತ್ತಿಹೋಗಿದ್ದರಿಂದ ಬಿಸಿಲ ಬೇಗೆ ಒಂದೆಡೆಯಾದರೆ ಮತ್ತೊಂದೆಡೆಯಲ್ಲಿ ಎಪ್ರಿಲ್‌, ಮೇ ತಿಂಗಳನ್ನು ಹೇಗೆ ಎದುರಿಸುವುದು ಎನ್ನುವ ಆತಂಕ ಸ್ಥಳೀಯ ನಿವಾಸಿಗಳನ್ನು ಕಾಡತೊಡಗಿದೆ.

Advertisement

ನಳ್ಳಿ ನೀರು: ಅಸಮರ್ಪಕ ಪೂರೈಕೆ ಇಲ್ಲಿನ ಹೊಸಮಠ ಜನತಾ ಕಾಲನಿಯಲ್ಲಿ ಜಲ ಜೀವನ ಮಿಷನ್‌ ಅಡಿಯಲ್ಲಿ ನಿರ್ಮಾಣವಾದ ಬೃಹತ್‌ ಬಾವಿಯಿಂದ ಮುಂಜಾನೆ ಗ್ರಾ.ಪಂ. ಪೂರೈಕೆ ಮಾಡುತ್ತಿದೆ. ಬಾವಿಯಲ್ಲಿನ ನೀರಿನ ಮಟ್ಟ ಸಂಪೂರ್ಣ ಕುಸಿತಗೊಂಡ ಹಿನ್ನೆಲೆ ಈ ಪರಿಸರದ ಸಾಗಿನಗುಡ್ಡೆ, ಚಾರುಕೊಟ್ಟಿಗೆ ಹಾಗೂ ಹೊಸ ಮಠದ 50ಕ್ಕೂ ಅಧಿಕ ಮನೆಗಳಿಗೆ ನಳ್ಳಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎನ್ನುವುದು ಸ್ಥಳೀಯರಾದ ಶ್ರೀದೇವಿ ಅವರ ಅಭಿಪ್ರಾಯ.

ಸಮಸ್ಯೆಗಳು
ಹೊಸಮಠ ಜನತಾ ಕಾಲನಿಯ ಸುತ್ತಮುತ್ತಲ ಭಾಗದಲ್ಲಿ ಈಗಿರುವ ಸುಮಾರುನಾಲ್ಕೈದು ಕೊಳವೆಬಾವಿಗಳು ಕೂಡ ನಿಷ್ಪ್ರಯೋಜಕವಾಗಿದೆ. ಕೊರ್ಗಿ ಸಾಗಿನಗುಡ್ಡೆಯಲ್ಲಿ ಸುಮಾರು 25 ವರ್ಷದ ಹಳೆಯ ಶಿಲೆಕಲ್ಲು ಬಾವಿಯ ಕೆಸರು ಕಾಣುವಷ್ಟು ನೀರಿದೆ. ಆದರೆ ಬಾವಿ ಶಿಥಿಲಗೊಂಡಿದ್ದು ಅಪಾಯದ ಸ್ಥಿತಿಯಲ್ಲಿದೆ.

ಹೂಳು ತೆಗೆಯುವ ಕಾರ್ಯ
ಈ ಹಿಂದೆ ಸಾಗಿನಗುಡ್ಡೆ ಪರಿಸರದಲ್ಲಿ ಜಲ ಜೀವನ ಮಿಷನ್‌ ಅಡಿಯಲ್ಲಿ ನಿರ್ಮಾಣವಾದ ಬೃಹತ್‌ ಬಾವಿಯ ಅಂತರ್ಜಲ ಸಂಪೂರ್ಣ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರಾದ ಗೋಪಾಲ ಶೆಟ್ಟಿ, ನಿಶ್ಚಿತ್‌ ಶೆಟ್ಟಿ ಗ್ರಾ.ಪಂ. ಸದಸ್ಯರಾದ ದಿನೇಶ್‌ ಮೊಗವೀರ ಚಾರುಕೊಟ್ಟಿಗೆ, ಪ್ರಮೋದ ಕೆ.ಶೆಟ್ಟಿ ಹಾಗೂ ಪಾರ್ವತಿ ಅವರು ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸುವ ನಿಟ್ಟಿನಿಂದ ತಮ್ಮ ಸ್ವಂತ ಖರ್ಚಿನಲ್ಲೇ ಬಾವಿಯಲ್ಲಿ ಶೇಖರಣೆಯಾದ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಶಾಶ್ವತ ಪರಿಹಾರ ಅಗತ್ಯ

Advertisement

ಕುರುವಾಡಿ ಮದಗಕ್ಕೆ ವಾರಾಹಿ ಕಾಲುವೆ ನೀರು ಹರಿಸುವ ಮಹತ್ವದ ಕಾರ್ಯವಾದಲ್ಲಿ ಸುತ್ತಮುತ್ತಲಿನ ಕಾಳಾವರ, ಕೊರ್ಗಿ, ಕೆದೂರು ಹಾಗೂ ಶಾನಾಡಿ ಗ್ರಾಮಗಳಲ್ಲಿನ ಅಂತರ್ಜಲ ಮಟ್ಟ ಸಂಪೂರ್ಣ ವೃದ್ಧಿಯಾಗಿ, ಗ್ರಾಮದ ನೀರಿನ ಸಮಸ್ಯೆಗಳಿಗೆ ಶ್ವತವಾದ ಪರಿಹಾರ ಕಂಡುಕೊಳ್ಳಬಹುದು ಎಂದು ಕೊರ್ಗಿ ಗ್ರಾ.ಪಂ. ಸದಸ್ಯ ದಿನೇಶ್‌ ಮೊಗವೀರ ಚಾರುಕೊಟ್ಟಿಗೆ ಆಗ್ರಹಿಸಿದ್ದಾರೆ.

*ಟಿ.ಲೋಕೇಶ್‌ ಆಚಾರ್ಯ, ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next