Advertisement

ಟ್ಯಾಂಕರ್‌ ನೀರು: 8 ಪಂ.ನಲ್ಲಷ್ಟೇ ಆರಂಭ

12:11 AM May 15, 2020 | Sriram |

ಕುಂದಾಪುರ: ಪ್ರತಿ ವರ್ಷದಂತೆ ಈ ಬಾರಿಯೂ ಉಡುಪಿ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಆರಂಭವಾಗಿ ದಿನಗಳೇ ಕಳೆದರೂ ಇನ್ನೂ ಟ್ಯಾಂಕರ್‌ ನೀರು ಪೂರೈಕೆಗೆ ಮಾತ್ರ ಮುಂದಾಗಿಲ್ಲ. ಜಿಲ್ಲೆಯಲ್ಲಿ ಈವರೆಗೆ ಕೇವಲ 8 ಗ್ರಾ.ಪಂ.ಗಳಲ್ಲಿ ಮಾತ್ರ ಟ್ಯಾಂಕರ್‌ ನೀರು ಪೂರೈಕೆ ಆರಂಭವಾಗಿದ್ದು, ಇನ್ನೂ 58 ಗ್ರಾ.ಪಂ.ಗಳಲ್ಲಿ ಬೇಡಿಕೆಯಿದೆ.

Advertisement

ಉಡುಪಿ ಜಿಲ್ಲೆಯ 158 ಗ್ರಾ.ಪಂ.ಗಳ ಪೈಕಿ ಪ್ರಸ್ತುತ ಕುಂದಾಪುರದ 6 ಹಾಗೂ ಉಡುಪಿಯ 2 ಗ್ರಾ.ಪಂ.ಗಳು ಸೇರಿ ಒಟ್ಟು 8 ಗ್ರಾ.ಪಂ.ಗಳಲ್ಲಿ ಟ್ಯಾಂಕರ್‌ ನೀರು ಪೂರೈಕೆ ಆರಂಭವಾಗಿದೆ. ಇನ್ನು ಉಡುಪಿಯ 23, ಕುಂದಾಪುರದ 29 ಹಾಗೂ ಕಾರ್ಕಳ ತಾಲೂಕಿನ 6 ಗ್ರಾ.ಪಂ.ಗಳಲ್ಲಿ ನೀರಿನ ಸಮಸ್ಯೆಯಿದ್ದು, ಟ್ಯಾಂಕರ್‌ ನೀರಿಗೆ ಬೇಡಿಕೆ ಬಂದಿದೆ. ಆದರೆ ಟೆಂಡರ್‌ ಕರೆದರೂ ಗುತ್ತಿಗೆದಾರರು ಆಸಕ್ತಿ ತೋರದ ಕಾರಣ ಮತ್ತಷ್ಟು ಟ್ಯಾಂಕರ್‌ ನೀರು ಪೂರೈಕೆ ವಿಳಂಬವಾಗುವ ಸಾಧ್ಯತೆಯಿದೆ.

ಯಾವೆಲ್ಲ ಗ್ರಾ.ಪಂ.
ಕುಂದಾಪುರದ ಕಾವ್ರಾಡಿ, ಹೊಂಬಾಡಿ – ಮಂಡಾಡಿ, ಬೇಳೂರು, ಅಂಪಾರು, ಹೆಂಗವಳ್ಳಿ, ಉಳ್ಳೂರು -74, ಉಡುಪಿಯ ಕೊಕ್ಕರ್ಣೆ ಹಾಗೂ ಕುರ್ಕಾಲು ಗ್ರಾ.ಪಂ.ಗಳಲ್ಲಿ ಮಾತ್ರ ಈಗ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿದೆ. ಕುಂದಾಪುರ – ಬೈಂದೂರಿನ ತಲ್ಲೂರು, ಹೆಮ್ಮಾಡಿ,
ಕಟ್ ಬೇಲ್ತೂರು, ಹಕ್ಲಾಡಿ, ಹೊಸಾಡು, ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ, ಯಡ್ತರೆ, ಮತ್ತಿತರ ಗ್ರಾ.ಪಂ.ಗಳಲ್ಲಿ ನೀರಿನ ಸಮಸ್ಯೆ ಆರಂಭವಾಗಿದ್ದು, ಕೆಲವೆಡೆಗಳಲ್ಲಿ ಬೇರೆ ದಾರಿ ಕಾಣದೇ ಪಂಚಾಯತ್‌ಗಳೇ ತಮ್ಮ ಅನುದಾನ ಬಳಸಿ ನೀರು ಪೂರೈಕೆಗೆ ಮುಂದಾಗಿವೆ.

ನೀರು ಸಿಗುತ್ತಿಲ್ಲ
ಸರಿಯಾಗಿ ನೀರು ಪೂರೈಸುವವರಿಗೆ ಆ್ಯಪ್‌, ಜಿಪಿಎಸ್‌ ಸಮಸ್ಯೆಯಿಲ್ಲ. ಆದರೆ ನಮಗೆ 1 ಲೀ. ನೀರಿಗೆ ಸರಕಾರ 13 ಪೈಸೆ ಕೊಡುತ್ತದೆ.ನಾವು ಖಾಸಗಿಯವರಿಗೆ ನೀರಿಗಾಗಿ ಲೀ.ಗೆ 15 ಪೈಸೆ ಕೊಡುತ್ತೇವೆ. ಇನ್ನು ಟ್ಯಾಂಕರ್‌ ಡೀಸೆಲ್‌ ಇನ್ನಿತರ ಖರ್ಚುಗಳೆಲ್ಲ ಸೇರಿದರೆ ಜಾಸ್ತಿಯಾಗುತ್ತದೆ. ಅದಕ್ಕಿಂತಲೂ ಪ್ರಮುಖವಾಗಿ ಈಗ ಖಾಸಗಿಯವರು ಕೂಡ ನೀರು ಕೊಡಲು ಒಪ್ಪುತ್ತಿಲ್ಲ. ಅವರ ಮನೆಯ ಬಾವಿ ಬತ್ತುತ್ತದೆಯೆಂದು ಹಿಂದೆ ಸರಿಯುತ್ತಾರೆ.

ಉತ್ತಮ ನೀರಿರುವ ಖಾಸಗಿ ಬಾವಿಗಳಲ್ಲಿ ನೀರು ಕೊಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಲಿ. ಆಗ ಈ ಸಮಸ್ಯೆ ಇರುವುದಿಲ್ಲ. ಎನ್ನುತ್ತಾರೆ ಗುತ್ತಿಗೆದಾರರು.

Advertisement

ಟೆಂಡರ್‌ಗೆ ನಿರಾಸಕ್ತಿ
ಈ ಬಾರಿ ಆಯಾಯ ಪಂಚಾಯತ್‌ಗಳ ಬದಲು ಟ್ಯಾಂಕರ್‌ ನೀರು ಪೂರೈಕೆ ಹೊಣೆಯನ್ನು ಸರಕಾರ ತಹಶೀಲ್ದಾರ್‌ಗೆ ವಹಿಸಿದೆ. ಇದರಂತೆ ತಹಶೀಲ್ದಾರರೇ ನೀರಿಗೆ ದರ ನಿಗದಿ ಮಾಡುತ್ತಿದ್ದಾರೆ. ಹಿಂದೆ ಪಂಚಾಯತ್‌ ವತಿಯಿಂದಲೇ ನಿರ್ವಹಣೆ ಮಾಡುತ್ತಿದ್ದಾಗ ಗುತ್ತಿಗೆದಾರರಿಗೆ ಲೀ.ಗೆ 25 – 30 ಪೈಸೆ ಕೊಡಲಾಗುತ್ತಿತ್ತು. ಆದರೆ ಈಗಿನ ಲೆಕ್ಕಾಚಾರ ಪ್ರಕಾರ ಲೀ.ಗೆ ಇಂತಿಷ್ಟು ಪೈಸೆ ಅಂತ ಕೊಡದೆ 3 ಸಾವಿರ ಲೀ.ನ ಟ್ಯಾಂಕರ್‌ಗೆ 900 ರೂ. ಕೊಡಲಾಗುತ್ತದೆ. ಇದಲ್ಲದೆ 3 ಕಿ.ಮೀ. ಗೆ 415 ರೂ. ಹೀಗೆ ಬೇರೆ ಬೇರೆ ಲೆಕ್ಕಾಚಾರದಲ್ಲಿ ಕೊಡಲಾಗುತ್ತಿದೆ. ಇದೆಲ್ಲ ಒಟ್ಟಾರೆ ಲೆಕ್ಕ ಹಾಕಿದರೆ ಲೀ.ಗೆ 12-13 ಪೈಸೆ ಮಾತ್ರ ಸಿಗುತ್ತದೆ ಎನ್ನುವುದು ಗುತ್ತಿಗೆದಾರರ ವಾದ. ಆದರೆ ಲೀ.ಗೆ 20 ಪೈಸೆ ಹಾಗೂ ಇತರೆ ಶೇ.10 ಸೇರಿದರೆ ಜಾಸ್ತಿಯಾಗುತ್ತದೆ ಎನ್ನುವುದಾಗಿ ತಹಶೀಲ್ದಾರರು ಹೇಳುತ್ತಾರೆ.

6 ಕಡೆ ಸಮಸ್ಯೆ
ಈಗಾಗಲೇ 8 ಪಂಚಾಯತ್‌ಗಳಲ್ಲಿ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ 58 ಗ್ರಾ.ಪಂ.ಗಳಲ್ಲಿ ಬೇಡಿಕೆಯಿದ್ದು, ಈ ಪೈಕಿ 52 ಕಡೆ ಪೂರೈಕೆಗೆ ಅನುಮೋದನೆ ನೀಡಲಾಗಿದೆ. 6 ಕಡೆಗಳಲ್ಲಿ ಸಮಸ್ಯೆಯಿದೆ . ಲೀಟರ್‌ಗೆ ಪೈಸೆ ಲೆಕ್ಕದ ಬದಲು ಕಿ. ಮೀ. ಹಾಗೂ ಟ್ಯಾಂಕರ್‌ ಲೆಕ್ಕದಲ್ಲಿ ಹಣ ಪಾವತಿಸಲಾಗುತ್ತದೆ. ಆದರೆ ಕೆಲವರು ಜಿಪಿಎಸ್‌ ಆ್ಯಪ್‌ಗಾಗಿ ಹಿಂದೆ ಸರಿದಿರಬಹುದು
-ಕಿರಣ್‌ ಫಡ್ನೇಕರ್‌,
ಜಿ.ಪಂ. ಉಪ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next