Advertisement
ಮುಂಗಾರು ಬೆಳೆಯ ಕಟಾವು ಈಗಷ್ಟೇ ಕೆಲವೆಡೆ ನಡೆಯುತ್ತಿದೆ. ಯಂತ್ರದ ಅಲಭ್ಯತೆ, ಕಾರ್ಮಿಕರ ಅಲಭ್ಯತೆ, ಬಿತ್ತನೆ ವಿಳಂಬ ಹೀಗೆ ನಾನಾ ಕಾರಣ ಗಳಿಂದ ಇನ್ನೂ ಕೆಲವು ಕಡೆ ಕಟಾವು ನಡೆದೇ ಇಲ್ಲ. ಕೆಲವೆಡೆಯಷ್ಟೇ ಪೂರ್ಣಗೊಂಡಿದೆ. ಮುಂಗಾರು ಹಂಗಾಮಕ್ಕೆ ಉಡುಪಿ ಜಿಲ್ಲೆಯಲ್ಲಿ 2,590 ಕ್ವಿಂ. ಭತ್ತದ ಬಿತ್ತನೆ ಬೀಜವನ್ನು ಕೃಷಿ ಇಲಾಖೆ ಮೂಲಕ ವಿತರಿಸಲಾಗಿದೆ. ಈ ಬಾರಿ ಉಡುಪಿ ಜಿಲ್ಲೆಯಲ್ಲಿ 35,754 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ ಉಡುಪಿ ತಾಲೂಕಿನಲ್ಲಿ 15,500 ಹೆ., ಕುಂದಾಪುರದಲ್ಲಿ 14,000 ಹೆ. ಹಾಗೂ ಕಾರ್ಕಳ ತಾಲೂಕಿನಲ್ಲಿ 6,500 ಹೆ. ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು.
Related Articles
Advertisement
ಆದರೆ ಈ ಬಾರಿ ಲಾಕ್‌ಡೌನ್ ಕಾರಣದಿಂದ ಅನೇಕರು ಕೃಷಿ, ಬೇಸಾಯ ಆರಂಭಿಸಿದ್ದಾರೆ. ತಾತ್ಕಾಲಿಕವಾಗಿ ಕೃಷಿ ಉದ್ಯೋಗ ಕೈಗೊಂಡ ಅನೇಕರು ಊರಿನಲ್ಲೇ ಇದ್ದು ಕೃಷಿ ಚಟುವಟಿಕೆಗೆ ಅನುಕೂಲ ಆಗಿದ್ದು ಹಡಿಲು ಬಿದ್ದ ಭೂಮಿಯಲ್ಲಿ ಹಸುರು ಬೆಳೆ ಬೆಳೆಯಲು ನೆರವಾಗಿದೆ.
ಆದ್ದರಿಂದ ಮುಂಗಾರಿನ ಕೃಷಿ ಹಂಗಾಮದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಜತೆಗೆ ಈ ಬಾರಿ ಹವಾಮಾನ ವೈಪರೀತ್ಯ, ಚಂಡಮಾರುತ ಮೊದಲಾದ ಕಾರಣಗಳಿಂದ ಹಿಂಗಾರು ವಿಳಂಬವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಹವಾಮಾನ ಇಲಾಖೆ ಸೂಚಿಸಿದೆ.
ಕಾರ್ಕಳ: ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ವಿತರಣೆ : ಕಾರ್ಕಳ ತಾಲೂಕಿನಲ್ಲಿ ಹಿಂಗಾರು ಬೀಜಗಳ ವಿತರಣೆ ಈಗಾಗಲೆ ಆರಂಭವಾಗಿದೆ. ಕಾರ್ಕಳ ರೈತ ಸಂಪರ್ಕ ಕೇಂದ್ರಕ್ಕೆ 10 ಕ್ವಿಂಟಾಲ್ ಮತ್ತು ಅಜೆಕಾರು ರೈತ ಸಂಪರ್ಕ ಕೇಂದ್ರಕ್ಕೆ 15 ಕ್ವಿಂಟಾಲ್ ಜ್ಯೋತಿ ತಳಿಯ ಬೀಜ ಬಂದಿದ್ದು ದಾಸ್ತಾನು ಇರಿಸಲಾಗಿದೆ. ಹಿಂಗಾರು ಬಿತ್ತನೆ ಬೀಜ ಬಂದ ದಿನಂದಿಂದಲೇ ರೈತರಿಗೆ ವಿತರಿಸಲಾಗುತ್ತಿದೆ ಎಂದು ತಾಲೂಕು ಕೃಷಿ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಬೇಡಿಕೆ : ಕೃಷಿ ಇಲಾಖೆಯಲ್ಲಿ ಸೋಮವಾರದಿಂದ ಬಿತ್ತನೆ ಬೀಜ ವಿತರಣೆ ಆರಂಭವಾಗಿದೆ. ಆರಂಭದ ಎರಡು ದಿನಗಳಲ್ಲೇ ಬರೋಬ್ಬರಿಬೇಡಿಕೆ ಬಂದಿದೆ. ಹೆಚ್ಚುವರಿ ಬೀಜಕ್ಕೆ ಬೇಡಿಕೆ ಸಲ್ಲಿಸಬೇಕಾದ ಪರಿಸ್ಥಿತಿ ಬಂದರೂ ಬರಬಹುದು.
ಏಕೆಂದರೆ ಮೊದಲ ಎರಡು ದಿನಗಳಲ್ಲಿ ಈ ಪ್ರಮಾಣದ ಬೇಡಿಕೆ ಈ ಹಿಂದೆ ಬಂದುದಿಲ್ಲ ಎನ್ನುತ್ತಾರೆ ಇಲಾಖೆಯವರು. ಲಾಕ್‌ಡೌನ್ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಂಬಯಿಯಂತಹ ಕಡೆ ತೆರವಾಗದ ಕಾರಣ ಉದ್ಯೋಗಾರ್ಥಿಗಳು ಇಲ್ಲೇ ಬಾಕಿಯಾಗಿದ್ದಾರೆ. ಹಾಗಾಗಿ ಹಿಂಗಾರು ಬೆಳೆಗೂ ಇದು ಪ್ರೇರಣೆಯಾಗಿದೆಯೇ ಎಂಬ ಸಂಶಯ ಇದೆ.
ಆದರೆ ನೀರಾವರಿ ಸೌಕರ್ಯ ಇಲ್ಲದೇ ಹಿಂಗಾರು ಬೆಳೆ ಅಸಾಧ್ಯವಾದ ಕಾರಣ, ನೀರಾವರಿ ಇದ್ದವರು ಉತ್ಸಾಹದಲ್ಲಿ ಹಿಂಗಾರಿಗೆ ಮನ ಮಾಡಿದರೇ ಎಂದು ಗೊತ್ತಾಗಬೇಕಿದೆ. ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಬಿತ್ತನೆಗೆ ಬೀಜ ತೆಗೆದಿಡುವವರ ಸಂಖ್ಯೆ ಕಡಿಮೆಯಾದ ಕಾರಣ ಇಲಾಖೆ ಮೂಲಕ ವಿತರಣೆಯಾಗುವ ಬೀಜಕ್ಕೆ ಬೇಡಿಕೆ ಬಂದುದು ಎಂಬ ಸಮ ಜಾಯಿಶಿಯೂ ಇದೆ.
ನೀರಿನ ಸಮಸ್ಯೆಯಾಗದು : ಎರಡು ವರ್ಷಗಳ ಹಿಂದೆ ನೀರಿಲ್ಲದೆ, ಬಿತ್ತನೆ ಮಾಡಿ ಒಂದೂವರೆ ತಿಂಗಳಲ್ಲೆ ಸುಟ್ಟುಹೋಗಿದೆ. ಆದರೆ ಕಳೆದ ವರ್ಷ ನೀರಿನ ಸಮಸ್ಯೆ ಆಗಿರಲಿಲ್ಲ. ಈ ವರ್ಷ ಎರಡನೆ ಬೆಳೆಗೆ ನೀರಿನ ಸಮಸ್ಯೆ ಬಾರದು ಎನ್ನುವುದು ನನ್ನ ಅನಿಸಿಕೆ. ಆದರೆ ಹುಳಬಾಧೆ ಬರಬಹುದು. –ರಾಘವೇಂದ್ರ ಹಾಲಾಡಿ ಕೃಷಿಕ
ವಿತರಿಸಲಾಗುವುದು : ಎಷ್ಟೇ ಬೇಡಿಕೆ ಬಂದರೂ ವಿತರಿಸಲಾಗುವುದು. ಇಲಾಖೆಯಲ್ಲಿ ಬಿತ್ತನೆ ಬೀಜದ ಕೊರತೆಯಿಲ್ಲ, ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹ ಇದೆ. ಈಗಾಗಲೇ ಜ್ಯೋತಿ ಹಾಗೂ ಜಯ ತಳಿಯ ಬೀಜಗಳು 140 ಕ್ವಿಂ.ಗಳಷ್ಟು ಪ್ರಮಾಣದಲ್ಲಿ ಜಿಲ್ಲೆಗೆ ಬಂದಿದ್ದು 5 ಕ್ವಿಂ. ಉದ್ದು ತರಿಸಲಾಗಿದೆ. ಭತ್ತದ ಕೃಷಿಗೆ ಬೇಕಾದ ಎಲ್ಲ ಪ್ರೋತ್ಸಾಹ ನೀಡಲಾಗುವುದು. – ಡಾ| ಎಚ್. ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು ಉಡುಪಿ ಜಿಲ್ಲೆ
– ವಿಶೇಷ ವರದಿ