Advertisement

ಸಿದ್ದು ಹಲಸಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌

03:57 PM May 30, 2019 | Suhan S |

ಬೆಂಗಳೂರು: ತುಮಕೂರಿನ ಒಂದು ಸಣ್ಣ ಹಳ್ಳಿ ಚೇಲೂರಿನ ‘ಸಿದ್ದು’ ತಳಿಯ ಹಲಸಿನ ಗಿಡಗಳಿಗಾಗಿ ಈಗ ಮಾರುಕಟ್ಟೆಯಲ್ಲಿ ಅಕ್ಷರಶಃ ನೂಕುನುಗ್ಗಲು ಉಂಟಾಗಿದ್ದು, ರಾಜ್ಯದಲ್ಲಿ ಬೇಡಿಕೆ ಪ್ರಮಾಣ ಒಂದು ಲಕ್ಷದ ಗಡಿ ದಾಟಿದೆ. ಹಾಗೊಂದು ವೇಳೆ ಈ ಬೇಡಿಕೆ ಪೂರೈಸಲು ಸಾಧ್ಯವಾದಲ್ಲಿ ಒಂದು ಕೋಟಿ ರೂ. ಆದಾಯ ಬರಲಿದೆ!

Advertisement

‘ಸಿದ್ದು’ ಹಲಸು ದಿನದಿಂದ ದಿನ್ಕಕೆ ಹೆಚ್ಚುತ್ತಿರುವ ಜನಪ್ರಿಯತೆಯ ಪರಿಣಾಮ ರಾಜ್ಯಾದ್ಯಂತ ನಿರೀಕ್ಷೆ ಮೀರಿ ಬೇಡಿಕೆ ಕಂಡುಬರುತ್ತಿರುವುದರಿಂದ ಅದನ್ನು ಪೂರೈಸಲು ಸ್ವತಃ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್‌) ವಿಜ್ಞಾನಿಗಳು ಮತ್ತು ತಾಯಿ ಮರದ ಮಾಲೀಕ ಪರಮೇಶ್‌ ಅವರಿಗೆ ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಬೇಡಿಕೆ ಒಂದು ಲಕ್ಷ ಇದ್ದರೆ, ಆ ಪೈಕಿ ಕೇವಲ ಶೇ. 10ರಷ್ಟು ಅಂದರೆ ಹತ್ತು ಸಾವಿರ ಗಿಡಗಳನ್ನು ಪೂರೈಸಲಿಕ್ಕೆ ಸಾಧ್ಯವಾಗುತ್ತಿದೆ.

ಎರಡು ವರ್ಷಗಳ ಹಿಂದಷ್ಟೇ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್‌) ‘ಸಿದ್ದು’ ತಳಿಯನ್ನು ಅಭಿವೃದ್ಧಿಪಡಿಸಿತ್ತು. ಇದರ ತಾಯಿ ಮರ ಇರುವುದು ಚೇಲೂರಿನ ಪರ ಮೇಶ್‌ ಅವರ ಜಮೀನಿನಲ್ಲಿ (ಪರಮೇಶ್‌ ತಂದೆ ಹೆಸರೇ ಸಿದ್ದು). ಹೆಚ್ಚಿದ ಬೇಡಿಕೆಯಿಂದಾಗಿ ಐದು ಸಾವಿರ ರೂ.ಗಳಿಗೆ ಒಂದು ಗಿಡ ಮಾರಾಟ ಆಗು ತ್ತಿದ್ದು, ಕೇವಲ ಒಂದೇ ವರ್ಷದಲ್ಲಿ ಪರಮೇಶ್‌ ಅವರಿಗೆ 9 ಲಕ್ಷ ರೂ. ಆದಾಯ ಹರಿದುಬಂದಿದೆ.

ಯಾಕೆ ಅಚ್ಚುಮೆಚ್ಚು?: ಜನರಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹಾಗೂ ಆ ಗುಣಗಳು ಹಲಸಿನಲ್ಲಿ ಅಧಿಕ ಇರುವುದರಿಂದ ಬೇಡಿಕೆ ಕೇಳಿಬರುತ್ತಿದೆ. ಅದರಲ್ಲೂ ಸಿದ್ದು ವಿಶೇಷ ಗುಣಗಳಿಂದ ಗಮನ ಸೆಳೆದಿದೆ. ಉಳಿದ ಹಲಸಿಗೆ ಹೋಲಿಸಿದರೆ ‘ಸಿದ್ದು’ ಸ್ವಲ್ಪ ಭಿನ್ನ. ಇದು ಹೆಚ್ಚು ಸಿಹಿಯಾಗಿದೆ. ಚಿಕ್ಕ ಗಾತ್ರದ್ದಾಗಿದ್ದು, ಅಬ್ಬಬ್ಟಾ ಎಂದರೆ 20 ತೊಳೆಗಳನ್ನು ಹೊಂದಿದೆ. ಇದರಿಂದ ತೆಗೆದುಕೊಂಡುಹೋಗಲು ತುಂಬಾ ಸುಲಭ. ಹಾಗಾಗಿ, ನಗರವಾಸಿಗಳಿಗೆ ಈ ಹಣ್ಣು ಅಚ್ಚುಮೆಚ್ಚು.

ಅಲ್ಲದೆ, ಟೊಮೆಟೊದಲ್ಲಿ ಕಂಡುಬರುವ ಐಕೋಪೇನ್‌ ಮತ್ತು ಕಾರೋಟೆನ್‌ ಎಂಬ ಅಂಶಗಳನ್ನು ಇದು ಹೊಂದಿದೆ. ಈ ಎಲ್ಲ ಹಿನ್ನೆಲೆಯಲ್ಲಿ ತಾಯಿ ಮರದಿಂದ ಕಸಿ ಮಾಡಿ ತಳಿಯನ್ನು ಅಭಿವೃದ್ಧಿಪಡಿಸಲಾಯಿತು. ಈಗ ಅದು ಅಲ್ಪಾವಧಿಯಲ್ಲೇ ನಿರೀಕ್ಷೆ ಮೀರಿ ಬೇಡಿಕೆ ಸೃಷ್ಟಿಸಿದೆ. ಆದರೆ, ಹತ್ತು ಸಾವಿರ ಗಿಡಗಳನ್ನು ಮಾತ್ರ ಪೂರೈಸಲು ಸಾಧ್ಯವಿದೆ ಎಂದು ಐಐಎಚ್ಆರ್‌ನ (ಸಿಎಚ್ಇಎಸ್‌ ಹಿರೇಹಳ್ಳಿ) ಡಾ.ಜಿ. ಕರುಣಾಕರನ್‌ ‘ಉದಯವಾಣಿ’ಗೆ ತಿಳಿಸಿದರು.

Advertisement

ಕಳೆದ ಒಂದು ವರ್ಷದಲ್ಲಿ ಐದು ಸಾವಿರ ಗಿಡಗಳನ್ನು ಮಾರಾಟ ಮಾಡಲಾಗಿದೆ. ಈ ಮಧ್ಯೆ ಇತ್ತೀಚಿನ ದಿನಗಳಲ್ಲಿ ದುಬೈ, ಅಮೆರಿಕ, ಆಸ್ಟ್ರೇಲಿಯದಲ್ಲಿ ನೆಲೆಸಿರುವ ನೂರಕ್ಕೂ ಹೆಚ್ಚು ಭಾರತೀಯ ಅನಿವಾಸಿಗಳು ‘ಸಿದ್ದು’ ಗಿಡಗಳಿಗೆ ಬೇಡಿಕೆ ಇಟ್ಟಿದ್ದಾರೆ.

ಅವರೆಲ್ಲಾ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಜಮೀನು ಹೊಂದಿದವರಾಗಿದ್ದಾರೆ. ಅಲ್ಲಿ ಬೆಳೆಯಲು ಐದು-ಹತ್ತು ಗಿಡಗಳನ್ನು ಕೇಳುತ್ತಿದ್ದಾರೆ. ಅಷ್ಟೇ ಅಲ್ಲ, ಆಸ್ಟ್ರೇಲಿಯ ಈ ತಳಿಯ ಪೇಟೆಂಟ್‌ಗೆ ಮನವಿ ಮಾಡಿತ್ತು. ಆದರೆ, ಐಐಎಚ್ಆರ್‌ ಅದನ್ನು ನಿರಾಕರಿಸಿದೆ ಎಂದು ಮಾಹಿತಿ ನೀಡಿದರು.

ವರ್ಷದಲ್ಲಿ ಒಂಬತ್ತು ಲಕ್ಷ ಆದಾಯ: ‘ಈ ಮೊದಲು ನಾನು ಹಲಸಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೆ. ಆದರೆ, ಐಐಎಚ್ಆರ್‌ ಎರಡು ವರ್ಷಗಳ ಹಿಂದೆ ಈ ಮರದ ವಿಶೇಷತೆಗಳನ್ನು ಗುರುತಿಸಿ, ಕಸಿ ಮಾಡಿ ಈ ತಳಿ ಅಭಿವೃದ್ಧಿಪಡಿಸಿತು.

ಕಸಿ ಮಾಡುವ ಬಗ್ಗೆಯೂ ನನಗೆ ತರಬೇತಿ ನೀಡಿತು. ನಂತರ ಗಿಡಗಳನ್ನು ಮಾರಾಟ ಮಾಡಲು ಆರಂಭಿಸಿದೆ. ಪರಿಣಾಮ ಕಳೆದ ಒಂದು ವರ್ಷದಲ್ಲೇ ನಾಲ್ಕೂವರೆ ಸಾವಿರ ಗಿಡಗಳನ್ನು ಮಾರಾಟ ಮಾಡಿದ್ದೇನೆ. ಒಂಬತ್ತು ಲಕ್ಷ ರೂ. ಆದಾಯ ಬಂದಿದೆ’ ಎಂದು ಮಾಲಿಕ ಚೇಲೂರಿನ ಪರಮೇಶ್‌ ಸಂತಸ ವ್ಯಕ್ತಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next