ಸಿಂಧನೂರು: ನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿರುವ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ಪ್ರಗತಿಪರ ಸಂಘಟನೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನೆ ಪ್ರಮುಖ ವೃತ್ತ, ರಸ್ತೆಗಳಲ್ಲಿ ಸಂಚರಿಸಿತು. ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಕಸಾಪ ತಾಲೂಕು ಅಧ್ಯಕ್ಷೆ ಸರಸ್ವತಿ ಪಾಟೀಲ ಮಾತನಾಡಿ, ಬಾಲಕಿ ತಂದೆಯೊಡನೆ ಸಿದ್ರಾಂಪುರ ಗ್ರಾಮಕ್ಕೆ ಹೋಗುತ್ತಿರುವಾಗ ದಾರಿ ಮಧ್ಯೆ ಬಾಳೆಗಿಡ ಕ್ಯಾಂಪ್ ಬಳಿ ಅಪರಿಚಿತ ಬೈಕ್ ಸವಾರನೊಬ್ಬ ಬಾಲಕಿ ತಂದೆಗೆ ಕಂಠಪೂರ್ತಿ ಮದ್ಯ ಕುಡಿಸಿ, ಊರಿಗೆ ಬಿಡುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಮಾಡಿದ್ದು, ಇದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ವಿದ್ಯಾರ್ಥಿನೀಯರಾದ ಶಿಲ್ಪಾ ಹಾಗೂ ಅಂಜಲಿ ಮಾತನಾಡಿ ಮಹಿಳೆಯರು ಭಯದ ವಾತವರಣದಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರಕಾರ ಇಂತಹ ಕೃತ್ಯಗಳ ತಡೆಗೆ ಕಠಿಣ ಶಿಕ್ಷೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಮನುಜಮತ ಬಳಗದ ತಾಲೂಕು ಅಧ್ಯಕ್ಷ ಡಿ.ಎಚ್.ಕಂಬಳಿ ಮಾತನಾಡಿ, ಘಟನೆ ನಡೆದು 13 ದಿನಗಳಾದರೂ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ರಾಜಕೀಯ ಪ್ರಭಾವದಿಂದಾಗಿ ಕೆಲ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುವ ಮುನ್ನವೇ ಮರೆಯಾಗುತ್ತಿವೆ ಎಂದು ಆರೋಪಿಸಿದರು.
ವಿವಿಧ ಸಂಘಟನೆ ಮುಖಂಡರಾದ ಚಂದ್ರಶೇಖರ ಗೊರೇಬಾಳ, ನಾಗರಾಜ ಪೂಜಾರಿ, ಬಸವರಾಜ ಎಕ್ಕಿ, ಹಂಸರಾಜ, ಗೋವಿಂದರಾಜ, ಕೆ.ಜಿಲಾನಿಪಾಷಾ, ಜಹಿರುದ್ದೀನ್ ವಕೀಲ, ಬಸವರಾಜ ಬಾದರ್ಲಿ, ಚಾಂದ್ ಪಾಷಾ ಜಾಗೀರದಾರ, ಸಮದ್ ಚೌದ್ರಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.