ರಾಮನಗರ: ಕನಕಪುರ ತಾಲೂಕಿನ ಸಾತನೂರು ಹೋಬಳಿ ಕಬ್ಟಾಳು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವಂತೆ ಗ್ರಾಮದ ನಿವಾಸಿಗಳು ಸಂಸದ ಡಿ.ಕೆ.ಸುರೇಶ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಅದೇ ಗ್ರಾಮದ ನಿವಾಸಿ ಸಿ.ವಿನಯ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಕಬ್ಟಾಳಮ್ಮ ನೆಲೆಸಿರುವ ಪುಣ್ಯ ಕ್ಷೇತ್ರ ಕಬ್ಟಾಳು. ಗ್ರಾಮದಲ್ಲಿ 15 ಸಾವಿರಕ್ಕೂ ಅಧಿಕ ಜನ ಸಂಖ್ಯೆ ಇದೆ. ದಿನನಿತ್ಯ ಸಹಸ್ರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ಕೊಡುತ್ತಾರೆ.
ಇನ್ನೊಂದೆಡೆ ಈ ಭಾಗದಲ್ಲಿ ಅಪಘಾತಗಳು ಸಹ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ತುರ್ತು ಚಿಕಿತ್ಸೆ ಅಗತ್ಯವಾದಲ್ಲಿ 5 ಕಿ.ಮೀ. ದೂರದ ವೆಂಕಟರಾಯನ ದೊಡ್ಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ 7 ಕಿ.ಮೀ. ದೂರ ಇರುವ ಸಾತನೂರಿನ ಸಮುದಾಯ ಅರೋಗ್ಯ ಕೇಂದ್ರಕ್ಕೆ ದೌಡಾಯಿಸಬೇಕಾಗಿದೆ ಎಂದು ತಿಳಿಸಿದರು.
ತುರ್ತುನಲ್ಲಿ ಪ್ರತಿ ನಿಮಿಷವೂ ಮುಖ್ಯ: ತುರ್ತು ಪರಿಸ್ಥಿತಿಯಲ್ಲಿ ಪ್ರತಿ ನಿಮಿಷವೂ ಮುಖ್ಯವಾಗಿದೆ. ಅಲ್ಲದೆ, ಕಬ್ಟಾಳಮ್ಮ ದೇವಾಲಯದ ಭಕ್ತರು ನೆರೆಹೊರೆಯ ಜಿಲ್ಲೆಯವರೂ ಇದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಅವರು ಆಸ್ಪತ್ರೆಗಾಗಿ ಪರದಾಡುವ ಸಂದರ್ಭವಿರುತ್ತದೆ.
ಹೀಗಾಗಿ ಕಬ್ಟಾಳು ಗ್ರಾಮದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಕನಕಪುರ ತಹಶೀಲ್ದಾರರಿಗೆ, ಜಿಲ್ಲಾಡಳಿತಕ್ಕೆ, ಜಿಲ್ಲಾ ಪಂಚಾಯ್ತಿ ಸದಸ್ಯ ಶಂಕರ್, ತಾಲೂಕು ಪಂಚಾಯ್ತಿ ಅಧ್ಯಕ್ಷ ಧನಂಜಯ ಮತ್ತು ಸಂಸದರ ಗಮನ ಸೆಳೆದಿರುವುದಾಗಿ ತಿಳಿಸಿದರು.
ಆರೋಗ್ಯ ಇಲಾಖೆ ನಿಯಮ ಏನು?: ಈ ಮಧ್ಯೆ ಗುರುತಿಸಿಕೊಳ್ಳಲು ಇಚ್ಚಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಕಬ್ಟಾಳು ಗ್ರಾಮಕ್ಕೆ ಪಿಎಚ್‌ಸಿ ಸಿಗೋದು ಅನುಮಾನ ಎಂದು ಪ್ರತಿಕ್ರಿಯಿಸಿದ್ದಾರೆ. ಪಿಎಚ್‌ಸಿಗಳ ನಡುವಿನ ಅಂತರ ಕನಿಷ್ಠ 8 ಕಿ.ಮೀ. ಇರಬೇಕು ಎಂದು ಮೂಲಗಳು ತಿಳಿಸಿವೆ. ವೆಂಕಟರಾಯನ ದೊಡ್ಡಿ ಮತ್ತು ಸಾತನೂರು ಆಸ್ಪತ್ರೆಗಳು ಕಬ್ಟಾಳಿನಿಂದ 8 ಕಿ.ಮೀ. ಒಳಗೆ ಇರುವುದರಿಂದ ಆ ಗ್ರಾಮಕ್ಕೆ ಪಿ.ಎಚ್.ಸಿ ಸಿಗೋದು ಅನುಮಾನ ಎಂದು ಗೊತ್ತಾಗಿದೆ.