ದೋಟಿಹಾಳ: ಗ್ರಾಮದ ಸಂಯುಕ್ತ ಪಪೂ ಕಾಲೇಜು ವಿಭಾಗದ ಪ್ರೌಢಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಒಂದೊಂದು ತರಗತಿಯಲ್ಲಿ ಎರಡು ನೂರಕ್ಕಿಂತ ಹೆಚ್ಚು ಮಕ್ಕಳಿದ್ದಾರೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ನಮಗೆ ಪ್ರತ್ಯೇಕ ಬಾಲಕಿಯರ ಪ್ರೌಢಶಾಲೆ ಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಸದ್ಯ ರಾಜ್ಯ ಸರಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಪ್ರೌಢಶಾಲೆಗಳನ್ನು ಆರಂಭಿಸಲು ಮುಂದಾಗಿದ್ದು, ಗ್ರಾಮದ ಪ್ರೌಢಶಾಲೆಯಲ್ಲಿ 352 ಮತ್ತು ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ 56 ಹೆಣ್ಣು ಮಕ್ಕಳು ಇದು. ಸುಮಾರು 410ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಪ್ರೌಢಶಾಲೆಯಲ್ಲಿದ್ದಾರೆ. ಹೀಗಾಗಿ ಇದನ್ನು ಪ್ರತ್ಯೇಕಿಸಿ ಬಾಲಕಿಯರ ಪ್ರೌಢಶಾಲೆ ಮಂಜೂರ ಮಾಡಬೇಕು ಎಂಬುವುದು ಗ್ರಾಮಸ್ಥರ ಒತ್ತಾಯವಾಗಿದೆ.
2015ರಲ್ಲಿ ಬಾಲಕಿಯರ ಪ್ರತ್ಯೇಕ ಪ್ರೌಢಶಾಲೆಗಾಗಿ ಎಸ್‌ಡಿಎಂಸಿ, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು 3-4 ದಿನಗಳ ಕಾಲ ಹೋರಾಟ ಮಾಡಿದ್ದರು. ಆಗಿನ ಡಿಡಿಪಿಐ ಶ್ಯಾಮಸುಂದರ ಅವರು ಗ್ರಾಮಕ್ಕೆ ಪ್ರತ್ಯೇಕ ಬಾಲಕಿಯರ ಪ್ರೌಢಶಾಲೆ ಪ್ರಸ್ತಾವನೆಯಲ್ಲಿದ್ದು, ಮುಂದಿನ ವರ್ಷ ಮಂಜೂರಾಗುವುದು ಎಂದು ಮಾಹಿತಿ ಪತ್ರ ನೀಡಿದ್ದರು ಹೀಗಾಗಿ ಆಗ ಪ್ರತಿಭಟನೆ ಕೈಬೀಡಲಾಗಿತ್ತು. ಆದರೆ ಈ ವರ್ಷ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರೌಢಶಾಲೆ ಆರಂಭಿಸಲು ಸರಕಾರ ಮುಂದಾಗಿದ್ದು, ಈ ಬಾರಿ ನಮ್ಮ ಗ್ರಾಮದ ಪ್ರೌಢಶಾಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿರುವುದಿಂದ ಪ್ರತ್ಯೇಕ ಬಾಲಕಿಯರ ಪ್ರೌಢಶಾಲೆ ಮಂಜೂರು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೋಬಳಿ ಹೋರಾಟ ಸಮಿತಿ ಅಧ್ಯಕ್ಷ ರಾಜೇಸಾಬ್ ಯಲಬುರ್ಗಿ ಹೇಳಿದ್ದಾರೆ.
ಸದ್ಯ ಗ್ರಾಮದ ಪ್ರೌಢಶಾಲೆಯಲ್ಲಿ 710ಕ್ಕೂ ಹೆಚ್ಚು ಮಕ್ಕಳು ಮತ್ತು ಪ್ರಾಥಮಿಕ ಶಾಲೆಯ 8ನೇ ತರಗತಿಯಲ್ಲಿ 110ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಇದರಲ್ಲಿ 400ಕ್ಕೂ ಹೆಚ್ಚು ಹೆಣ್ಣು ಮಕ್ಕಳಿದ್ದಾರೆ. ಬಾಲಕಿಯರ ಪ್ರೌಢಶಾಲೆ ಜಾಗದ ಮತ್ತು ಕಟ್ಟಡದ ಕೊರತೆ ಇಲ್ಲ. ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಪ್ರೌಢಶಾಲೆ ಸುಮಾರು 13ಕ್ಕೂ ಹೆಚ್ಚು ಕೊಠಡಿಗಳು ಸದ್ಯ ಖಾಲಿ ಬಿದ್ದಿವೆ. ಇಲ್ಲಿ ಬಾಲಕಿಯರ ಪ್ರೌಢಶಾಲೆ ಆರಂಭ ಮಾಡಲು ಸೂಕ್ತ ಜಾಗವಾಗಿದೆ. ಹೀಗಾಗಿ ಜನಪ್ರತಿನಿಧಿ ಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಪ್ರತ್ಯೇಕ ಬಾಲಕಿಯರ ಪ್ರೌಢಶಾಲೆ ಮಂಜೂರಾತಿಗೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಕಳಕಳಿಯಾಗಿದೆ.
ನಮ್ಮ ಗ್ರಾಮಕ್ಕೆ ಪ್ರತ್ಯೇಕ ಬಾಲಕಿಯರ ಪ್ರೌಢಶಾಲೆ ಮಂಜೂರು ಮಾಡಲೇಬೇಕು. ಇಲ್ಲದ್ದಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಪ್ರತ್ಯೇಕ ಬಾಲಕಿಯರ ಪ್ರೌಢಶಾಲೆ ಬಹುದಿನದ ಬೇಡಿಕೆಯಾಗಿದೆ. ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ 14ಕ್ಕೂ ಹೆಚ್ಚು ಕೊಠಡಿಗಳು ಉಪಯೋಗ ಇಲ್ಲದೇ ಬಿಕೋ ಎನ್ನುತ್ತೀವೆ. ಇಲ್ಲಿ ಬಾಲಕಿಯರ ಪ್ರೌಢಶಾಲೆ ಆರಂಭಿಸಲು ಯೋಗ್ಯವಾಗಿದೆ. –
ರಾಜೇಸಾಬ ಯಲಬುರ್ಗಿ, ದೋಟಿಹಾಳ ಹೋಬಳಿ ಹೋರಾಟ ಸಮಿತಿ ಅಧ್ಯಕ್ಷ
ತಾಲೂಕಿನಲ್ಲಿ ಹೊಸ ಪ್ರೌಢಶಾಲೆಗಳ ಮಂಜೂರಾತಿಗೆ ಇಲಾಖೆಯವರು ಮಾಹಿತಿ ಕೇಳಿದ್ದಾರೆ. ದೋಟಿಹಾಳ ಗ್ರಾಮದ ಬಾಲಕಿಯರ ಪ್ರೌಢಶಾಲೆ ಬಗ್ಗೆ ನಮ್ಮಗೆ ಮಾಹಿತಿ ಇದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಇಲಾಖೆಗೆ ವರ ದಿ ನೀಡುತ್ತೇವೆ. ಸುರೇಂದ್ರ ಕಾಂಬ್ಳೆ, ಕ್ಷೇತ್ರ ಶಿಕ್ಷಣಾಧಿ ಕಾರಿ ತಾಲೂಕಿನಲ್ಲಿ ಸುಮಾರು 8ಕ್ಕೂ ಹೆಚ್ಚು ಪ್ರೌಢಶಾಲೆಗಳ ಆರಂಭಿಸಲು ಸರಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ. ಇದರಲ್ಲಿ ದೋಟಿಹಾಳ ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದ್ದ ಬಾಲಕಿಯರ ಪ್ರೌಢಶಾಲೆ ಹೆಸರು ಇದೆ. –
ಅಮರೇಗೌಡ ಪಾಟೀಲ್ ಬಯ್ನಾಪೂರ, ಶಾಸಕ
-ಮಲ್ಲಿಕಾರ್ಜುನ ಮೆದಿಕೇರಿ