ಕಾಗವಾಡ: ಉಗಾರ ಖುರ್ದ ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ಅಂತ್ಯವಿಧಿ ಮಂಡಳ ಸ್ಥಾಪಿಸಿ ಮೃತರ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಆದರೆ, ಕೃಷ್ಣೆಯ ಪ್ರವಾಹಕ್ಕೆ ಜಲಾವೃತಗೊಂಡು ಹಾನಿಗೊಂಡಿರುವ ಇಲ್ಲಿನ ಮುಕ್ತಿಧಾಮ ಇಂಧನ ಚಿತಾಗಾರ ಸ್ಥಗಿತಗೊಂಡಿದೆ. ಕೂಡಲೇ ದುರಸ್ತಿ ಕಾರ್ಯ ಕೈಗೊಂಡು ಚಿತಾಗಾರ ಮತ್ತೆ ಆರಂಭಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಈ ಮುಕ್ತಿಧಾಮ ಇಂಧನ ಚಿತಾಗಾರ ನಿರ್ಮಿಸಲಾಗಿತ್ತು. ಇದಕ್ಕೆ ಅಂದಿನ ಶಾಸಕ ರಾಜು ಕಾಗೆ 10 ಲಕ್ಷ ರೂ. ಅನುದಾನ ನೀಡಿದ್ದರು. ಒಂದು ವರ್ಷದ ಹಿಂದೆ ಇದರ ಉದ್ಘಾಟನೆಯೂ ನೆರವೇರಿತ್ತು. ಆದರೆ ಅಂತ್ಯವಿಧಿ ಗಾಗಿ ಬಳಿಸುವ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಸ್ಥಗಿತಗೊಳಿಸಿದೆ. ಈ ಕುರಿತು ಮನವಿ ಮಾಡಿದರೂ ಸ್ಪಂದಿಸಿಲ್ಲ.
ಮೂರು ತಿಂಗಳ ಹಿಂದೆ ಸಂಭವಿಸಿದ ಕೃಷ್ಣೆಯ ಮಹಾಪೂರಕ್ಕೆ ಮುಕ್ತಿಧಾಮ ಇಂಧನ ಚಿತಾಗಾರನೀರಿನಲ್ಲಿ ಮುಳುಗಿತ್ತು. ಇದರಿಂದ ವಿದ್ಯುತ್ ಮೋಟಾರ್‌ಗಳು ನಾಶವಾಗಿವೆ. ಉಗಾರ ಪಟ್ಟಣ 25 ಸಾವಿರ ಜನಸಂಖ್ಯೆ ಹೊಂದಿದೆ. ಪ್ರತಿ ತಿಂಗಳು ಸುಮಾರು 15 ಜನರು ಮರಣ ಹೊಂದುತ್ತಾರೆ. ಇದರದಾಖಲೆ ಕಳೆದ 20 ವರ್ಷಗಳಿಂದ ಸಂಗ್ರಹಿಸುತ್ತಾ ಬಂದಿದ್ದೇನೆ. ಇಲ್ಲಿಯ ಜನರಿಗೆ ಸಹಾಯವಾಗಲಿ ಎಂದು ನಿರಂತರ ಸೇವೆ ನೀಡುತ್ತಿದ್ದರೂ ಅಧಿಕಾರಿಗಳ ಸ್ಪಂದನೆ ಇಲ್ಲದಾಗಿದೆ ಎಂದು ಅಂತ್ಯವಿಧಿ ಮಂಡಳದ ಅಧ್ಯಕ್ಷ ಮಹಾದೇವ ಕಳೆ ಹೇಳಿದರು.
ನಿಸ್ವಾರ್ಥ ಸೇವೆ ಸಲ್ಲಿಸುವ ಶಿರಗಾಂವಕರ ಬಂಧುಗಳು ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮವಾಗಿ 40 ಲಕ್ಷ ರೂ. ವೆಚ್ಚದ ಮುಕ್ತಿಧಾಮ ಇಂಧನ ಚಿತಾಗಾರ ಶಿರಗಾಂವಕರ ಬಂಧುಗಳು ನಿರ್ಮಿಸಿದ್ದಾರೆ. ಇದನ್ನು ಉಗಾರ ಪುರಸಭೆದವರು ನಿರ್ವಹಣೆಗೆ ಮುಂದೆ ಬರುತ್ತಿಲ್ಲ. ಪ್ರವಾಹದಲ್ಲಿ ಮುಳುಗಡೆವಾಗಿದ್ದರಿಂದ 3.50 ಲಕ್ಷ ರೂ. ದುರುಸ್ತಿಗೊಳಿಸಲು ವೆಚ್ಚವಾಗುತ್ತದೆ. ಇತ್ತ ಸರ್ಕಾರಿ ಅಧಿಕಾರಿಗಳು ಗಮನ ಹರಿಸಬೇಕು. ನೂತನ ಶಾಸಕ ಶ್ರೀಮಂತ ಪಾಟೀಲ ಅವರ ಗಮನಕ್ಕೆ ತರುತ್ತೇನೆಂದು ಗ್ರಾಪಂ ಮಾಜಿ ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದರು.