ಹರಿಹರ: ಗ್ರಾಮೀಣ ಪ್ರದೇಶದ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ನೀಡಬೇಕಾದ ಬಾಕಿ ಅನುದಾನವನ್ನು ರಾಜ್ಯ ಸರಕಾರ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ತಾಪಂ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಎಚ್.ಎಚ್.ಬಸವರಾಜ್ ಬೆಳ್ಳೂಡಿ ಆಗ್ರಹಿಸಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ನಿರ್ವಸತಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ಅಂಬೇಡ್ಕರ್ ವಸತಿ ಯೋಜನೆಯಲ್ಲಿ 1.75 ಲಕ್ಷ ರೂ., ಬಸವ ಯೋಜನೆಯಲ್ಲಿ 1.35 ಲಕ್ಷ ರೂ., ದೇವರಾಜ್ ಅರಸ್ ಯೋಜನೆಯಲ್ಲಿ 2.68 ಲಕ್ಷ ರೂ., ಪ್ರಧಾನ ಮಂತ್ರಿ ಅವಾಸ್ ವಸತಿ ಯೋಜನೆಯಡಿ 1.35 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ ಎಂದರು. ಈ ಪೈಕಿ ಅಂಬೇಡ್ಕರ್ ಯೋಜನೆ
ಫಲಾನುಭವಿಗಳಿಗೆ 20 ತಿಂಗಳಿಂದ, ಬಸವ ಯೋಜನೆಗೆ 4 ತಿಂಗಳು ಹಾಗೂ ಇತರೆ ಯೋಜನೆಗಳ ಫಲಾನುಭವಿಗಳಿಗೂ ನಾಲ್ಕು ಹಂತಗಳಲ್ಲಿ ನೀಡುವ ಅನುದಾನ ಈವರೆಗೂ ಬಿಡುಗಡೆ ಆಗದಿರುವುದರಿಂದ ಬಡ ಫಲಾನುಭವಿಗಳಿಗೆ ತೀವ್ರ ತೊಂದರೆಯಾಗಿದೆ ಎಂದರು.
ಫಲಾನುಭವಿಗಳ ಖಾತೆ ಲಾಕ್: ವಸತಿ ಯೋಜನೆಗಳ ಫಲಾನುಭವಿಗಳಿಗೆ ಬೆಂಗಳೂರಿನ ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುದಾನ ಬಿಡುಗಡೆಯಾಗಬೇಕಿದೆ. ಗ್ರಾಪಂ ಮತ್ತು ತಾಪಂ ಅ ಧಿಕಾರಿಗಳು ಫಲಾನುಭವಿಗಳ ಖಾತೆ ಲಾಕ್ ಮಾಡಲಾಗಿದ್ದು, ಯಾವಾಗ ಒಪನ್ ಆಗುತ್ತವೋ ಗೊತ್ತಿಲ್ಲ, ಅಲ್ಲಿವರೆಗೂ ನಿಮ್ಮ ಖಾತೆಗೆ ಅನುದಾನ ಜಮೆಯಾಗುವುದಿಲ್ಲ ಎಂದು ಹೇಳುವ ಮೂಲಕ ಸ್ವಂತ ಮನೆ ಹೊಂದುವ ಬಡವರ ಕನಸಿಗೆ ಕಲ್ಲು ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಸ್ವಂತ ಸೂರು ಹೊಂದುವ ಕನಸು ಇರುತ್ತದೆ. ಇದಕ್ಕಾಗಿಯೆ ರಾಜ್ಯ, ಕೇಂದ್ರ ಸರಕಾರಗಳು ವಸತಿ ಯೋಜನೆಗಾಗಿ ಬೃಹತ್ ಮೊತ್ತದ ಅನುದಾನ ನಿಗದಿ ಮಾಡಿರುತ್ತದೆ. ಆದರೆ ಆಯ್ಕೆಯಾದ ಫಲಾನುಭವಿಗಳು ಅನುದಾನ ಬಾರದೆ ಅತಂತ್ರರಾಗಿರುವುದು ಬಿಜೆಪಿ ಸರಕಾರಗಳ ಜನವಿರೋಧಿ ನೀತಿ ಬಿಂಬಿಸುತ್ತದೆ ಎಂದರು.
ರಾಜನಹಳ್ಳಿ ಗ್ರಾಪಂ ಅಧ್ಯಕ್ಷ ಮಹಾಂತೇಶ್ ಮಾತನಾಡಿ, ಗ್ರಾಪಂ ವಾ¤ಪ್ತಿಯಲ್ಲಿಯ ಫಲಾನುಭವಿಗಳ ಮನೆಗಳನ್ನು ಜಿಪಿಎಸ್ ಮಾಡಿಸಲಾಗಿದ್ದರೂ ಅನುದಾನ ಬಂದಿಲ್ಲ. ಫಲಾನುಭವಿಗಳಿಗೆ ಉತ್ತರ ಕೊಡುವುದು ಕಷ್ಟವಾಗಿದೆ. ಅಧಿಕಾರಿಗಳಿಗೆ ಕೇಳಿದರೆ ನಿಗಮದಿಂದಲೆ ಖಾತೆ ಲಾಕ್ ಆಗಿದೆ ಎನ್ನುತ್ತಾರೆ. ಹಾಗಾದರೆ ಫಲಾನುಭವಿಗಳ ಪರಿಹಾರ ಒದಗಿಸುವವರಾರು ಎಂದು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಹನಗವಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ ಹನಗವಾಡಿ, ಸದಸ್ಯ ಹರಗನಹಳ್ಳಿ ರಾಜು, ಉಮೇಶ್ ಸಾರಥಿ ಇತರರಿದ್ದರು.