ವಿಜಯಪುರ: ಎಸ್‌ಎಂಎನ್ ಕ್ರೆಡಿಟ್ ಸೌಹಾರ್ದದಲ್ಲಿ ಜಿಲ್ಲೆಯ ಸಾವಿರಾರು ಜನರು ಕೋಟ್ಯಂತರ ಹಣ ತೊಡಗಿಸಿ ತೊಂದರೆಗೀಡಾಗಿದ್ದಾರೆ. ನಮ್ಮ ಹೋರಾಟದ ಪ್ರತಿಫಲವಾಗಿ ಸರ್ಕಾರ ವಿಜಯಪುರ ಸಹಾಯಕ ಆಯುಕ್ತರನ್ನು ಸಕ್ಷಮ ಪ್ರಾಧಿಕಾರಿ ಎಂದು ನೇಮಿಸಿದ್ದು, ಕಳೆದ ಒಂದೂವರೆ ವರ್ಷದಿಂದ ನೊಂದ ಠೇವಣಿದಾರರಿಗೆ ಹಣ ಮರುಪಾವತಿ ಆಗಿಲ್ಲ. ಇದೀಗ ಸಕ್ಷಮ ಪ್ರಾಧಿಕಾರ ಸರ್ಕಾರ ಮರಳಿ ಪಡೆದಿರುವ ಮಾಹಿತಿ ಇದೆ. ಹೀಗಾಗಿ ಕೂಡಲೇ ನಮ್ಮ ಹಣ ಮರುಪಾವತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸುನೀಲಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಅರವಿಂದ ಕುಲಕರ್ಣಿ ಮನವಿ ಸಲ್ಲಿಸಿ ಮಾತನಾಡಿ, ಈ ಸಮಸ್ಯೆಯಿಂದ ಬ್ಯಾಂಕ್‌ನಲ್ಲಿ ಹಣ ಇರಿಸಿದ್ದ ಗ್ರಾಹಕರಿಗೆ ಆರ್ಥಿಕ ವಂಚನೆಯಾಗಿದೆ. ಇದರಿಂದ ನೊಂದವರಲ್ಲಿ ಹಲವರು ಮೃತಪಟ್ಟಿದ್ದು, ಹಣ ಮರುಪಾವತಿ ಇನ್ನೂ ವಿಳಂಬದಿಂದಾಗಿ ನೊಂದಿರುವ ಇನ್ನಷ್ಟು ಗ್ರಾಹಕರು ಆರ್ಥಿಕ ಸಂಕಷ್ಟದಿಂದ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಸಮಸ್ಯೆ ನಿವೇದಿಸಿದರು.
ಕಳೆದೊಂದು ವಾರದಿಂದ ಸಕ್ಷಮ ಪ್ರಾಧಿಕಾರ ಸರ್ಕಾರ ವಾಪಸ್ ಪಡೆದುಕೊಂಡಿದೆ ಎಂಬುದು ತಿಳಿದು ಬಂದಿದೆ. ಸರ್ಕಾರ ಯಾವ ಕಾರಣಕ್ಕೆ ಸಕ್ಷಮ ಪ್ರಾಧಿಕಾರಿ ಹುದ್ದೆ ನೇಮಿಸಿ ಈಗ ಸರ್ಕಾರವೇ ಸದರಿ ಹುದ್ದೆಯಿಂದ ಕಡಿಮೆ ಮಾಡಿದೆ ಎಂಬುದು ಗ್ರಾಹಕರಿಗೆ ತಿಳಿಯದಾಗಿದೆ. ಗ್ರಾಹಕರಿಗೆ ಸರ್ಕಾರದ ಇಂಥ ನಡೆಯಿಂದ ಮತ್ತಷ್ಟು ತೊಂದರೆ ಉಂಟಾಗಲಿದೆ. ಕೂಡಲೇ ಸರ್ಕಾರ ಸಕ್ಷಮ ಪ್ರಾಧಿಕಾರಿ ನೇಮಿಸಿ ಹಣ ಮರುಪಾವತಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಾಲ ಪಡೆದ 3374 ಸಾಲಗಾರರಲ್ಲಿ ಕೇವಲ 374 ಸಾಲಗಾರರಿಗೆ ನೋಟಿಸ್ ನೀಡಲು ತಯಾರಿ ಮಾಡಿದೆ. ಇತರೆ 3 ಸಾವಿರ ಸಾಲಗಾರರಿಗೆ ಈವರೆಗೂ ನೋಟಿಸ್ ನೀಡಿಲ್ಲ. ಈ ಬಗ್ಗೆ ಸಕ್ಷಮ ಪ್ರಾಧಿಕಾರಿಯಾಗಿದ್ದ ಸಹಾಯಕ ಆಯುಕ್ತರನ್ನು ಕೇಳಿದರೆ ನನಗೆ ಸದ್ಯ ಸಕ್ಷಮ ಪ್ರಾಧಿಕಾರಿ ಅಧಿಕಾರವಿಲ್ಲ. ಸರ್ಕಾರ ಹುದ್ದೆ ಹಿಂಪಡೆದಿದೆ. ನನಗೂ ಎಸ್‌ಎಂಎನ್ ಕ್ರೆಡಿಟ್ ಸೌಹಾರ್ದ ಸಹಕಾರಿಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ ಎಂದು ವಿವರಿಸಿದರು.
ತಕ್ಷಣ ನೊಂದ ಗ್ರಾಹಕರಿಗೆ ಹಣ ಮರು ಪಾವತಿಗೆ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಜಿಲ್ಲಾಡಳಿತ ಕಚೇರಿ ಎದುರು ಉಪವಾಸ ಸತ್ಯಗ್ರಹ ಪ್ರಾರಂಭಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ಈ ವೇಳೆ ಎಸ್.ಜಿ. ಸಂಗೊಂದಿಮಠ, ಐ.ಬಿ. ಸಾರವಾಡ, ಕೆ.ಡಿ. ನರಗುಂದ, ಬಿ.ಪಿ. ಖಂಡೇಕರ ಸೇರಿದಂತೆ ಇತರರಿದ್ದರು.