ಶಿವಮೊಗ್ಗ: ಹಳೇ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಶಿವಮೊಗ್ಗ ತಾಲೂಕು ಘಟಕದ ವತಿಯಿಂದ ಜಾಗೃತಿ ಜಾಥಾ ನಡೆಸಿ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಯಿತು. ನೂತನ ಪಿಂಚಣಿ ಯೋಜನೆ ಅತ್ಯಂತ ಕೆಟ್ಟದ್ದಾಗಿದ್ದು, ಸರ್ಕಾರಿ ನೌಕರರ ನಿವೃತ್ತಿ ಜೀವನಕ್ಕೆ ಮಾರಕವಾಗಿದೆ. ನಿವೃತ್ತಿ ಜೀವನದ ಸಮಯದಲ್ಲಿ ಅತ್ಯಂತ ಹೀನ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.
ಎನ್‌ಪಿಎಸ್ ರದ್ದುಗೊಳಿಸುವುದು ಕೇಂದ್ರ ಸರ್ಕಾರದ ನಿರ್ಧಾರ ಹಾಗೂ ರಾಜ್ಯ ಸರ್ಕಾರಗಳಿಗೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಇತ್ತು. ಆದರೆ 2022ರ ರಾಜ್ಯ ಬಜೆಟ್‌ನಲ್ಲಿ ರಾಜಸ್ತಾನ ಹಾಗೂ ಚತ್ತೀಸ್ ಘಡ, ಜಾರ್ಖಂಡ್, ಪಂಜಾಬ್ ರಾಜ್ಯ ಸರ್ಕಾರಗಳು ಎನ್‌ಪಿಎಸ್ ರದ್ದು ಮಾಡಿ ಆದೇಶಿಸಿವೆ. ಪ್ರಸ್ತುತ ಹಿಮಾಚಲ ಪ್ರದೇಶದ ಹೊಸ ಸರ್ಕಾರ ಎನ್‌ಪಿಎಸ್ ರದ್ದತಿ ಮಾಡುವ ಘೋಷಣೆ ಮಾಡಿದ್ದು, ಈಗ ರಾಜ್ಯದಲ್ಲಿಯೂ ನೂತನ ಪಿಂಚಣಿ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಅನುಷ್ಠಾನ ಗೊಳಿಸಬೇಕು ಎಂದು ಆಗ್ರಹಿಸಿದರು.
ನಾಲ್ಕು ಲಕ್ಷ ಎನ್‌ಪಿಎಸ್ ನೌಕರರು ಹಾಗೂ ಅವಲಂಬಿತ ಕುಟುಂಬ ಸದಸ್ಯರು ರಾಜ್ಯಮಟ್ಟದಲ್ಲಿ ಡಿ.19 ರಿಂದ ಬೃಹತ್ ಅನಿರ್ಧಿಷ್ಟ ಅವಧಿ ಹೋರಾಟ ನಡೆಸಲಿದ್ದೇವೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು. ಹಳೇ ಪಿಂಚಣಿ ಯೋಜನೆ ಅನುಷ್ಠಾನ ಮಾಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿ ಮೇಯರ್ ಎಸ್.ಶಿವಕುಮಾರ್ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ ಶಾಸಕರಾದ ಕೆ.ಎಸ್. ಈಶ್ವರಪ್ಪ ಹಾಗೂ ಆಯನೂರು ಮಂಜುನಾಥ ಅವರಿಗೆ ಮನವಿ ಸಲ್ಲಿಸಲಾಯಿತು.ಶಿವಮೊಗ್ಗ ತಾಲೂಕಿನ ಎಲ್ಲಾ ಇಲಾಖೆಯ ಸುಮಾರು ಒಂದೂವರೆ ಸಾವಿರ ನೌಕರರು ಭಾಗವಹಿಸಿದ್ದರು.
ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್. ರಾಘವೇಂದ್ರ, ತಾಲೂಕು ಅಧ್ಯಕ್ಷ ಎಸ್.ಪ್ರಭಾಕರ್, ತಾಲೂಕು ಗೌರವ ಅಧ್ಯಕ್ಷ ಡಾ| ನಾಗರಾಜ್ ಪರಿಸರ, ಗೋವಿಂದರಾಜು, ಡಾ| ಹಾಲಮ್ಮ, ಶರತ್ ಕುಮಾರ್, ಕಿರಣ್ ಜಿ.ಜೆ, ವಿಜಯ್ ಕುಮಾರ್ ಬಿಟಿ, ಹೂವ್ಯಾ ನಾಯ್ಕ, ರಂಗನಾಥ ಇತರರು ಪಾಲ್ಗೊಂಡಿದ್ದರು.
ಹಳೇ ಪಿಂಚಣಿ ಹೋರಾಟ ಅತ್ಯಂತ ನ್ಯಾಯಸಮ್ಮತ. ವಿಧಾನ ಮಂಡಲದ ಕಲಾಪದಲ್ಲಿ ಧ್ವನಿ ಎತ್ತುವ ಕೆಲಸ ನಾನು ಮಾಡುತ್ತೇನೆ. ನೌಕರರ ಬದುಕನ್ನು ಸಂಕಷ್ಟಕ್ಕೆ ದೂಡುವ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಲು ಸಂಪೂರ್ಣ ಶ್ರಮಿಸುತ್ತೇನೆ.
ಆಯನೂರು ಮಂಜುನಾಥ್,
ವಿಧಾನ ಪರಿಷತ್ ಶಾಸಕ
ಬೆಂಗಳೂರಿನ ಫ್ರೀಡಂಡಂ ಪಾರ್ಕಿನ ಬದಲು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅಲ್ಲಿ ಎಲ್ಲರೂ ಇರುತ್ತಾರೆ. ಅಲ್ಲಿಗೆ ಬಂದು ಮುಖ್ಯಮಂತ್ರಿಗಳಿಗೆ ಮನವಿ ನೀಡಿ ನಾವು ಸದಾ ನಿಮ್ಮ ಜೊತೆಗೆ ಇರುತ್ತೇವೆ. ನಿಮ್ಮ ಸಮಸ್ಯೆ ಬಗ್ಗೆ ಖಂಡಿತವಾಗಿಯೂ ಸದನದಲ್ಲಿ ಗಮನ
ಸೆಳೆಯುತ್ತೇವೆ.
ಕೆ.ಎಸ್. ಈಶ್ವರಪ್ಪ, ಶಾಸಕರು