ಅಥಣಿ: ಶಾಶ್ವತ ನೀರಿನ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕೃಷ್ಣಾ ನದಿ ನೀರು ಹೋರಾಟ ಸಮಿತಿಯಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ 5ನೇ ದಿನಕ್ಕೆ ಕಾಲಿರಿಸಿತು.
ಇದೇ ವೇಳೆ ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಕೃಷ್ಣಾ ನದಿ ಹೋರಾಟ ಸಮಿತಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಸುನೀಲ ಸಂಕ ಮಾತನಾಡಿ, ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ನೀರಿನ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳು ಮುಂದಾಗಬೇಕು. ಜನರ ನೋವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮುಟ್ಟಿಸಿ ನೀರಿಗಾಗಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಸಾಹಿತಿ ದೀಪಕ ಸಿಂಧೆ ಮಾತನಾಡಿ, ಪ್ರತಿ ವರ್ಷವು ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಲು ಲಕ್ಷಾಂತರ ಗ್ಯಾಲನ್ ನೀರು ಬಳಸುತ್ತಿದ್ದು, ಮಾನವೀಯತೆ ದೃಷ್ಟಿಯಿಂದ ಬರಗಾಲದ ಸಂದರ್ಭದಲ್ಲಿ ಕುಡಿಯುವ ನೀರು ಉಚಿತವಾಗಿ ಪೂರೈಕೆೆ ಮಾಡಬೇಕಿತ್ತು. ಆದರೆ ಯಾವುದೇ ಸಕ್ಕರೆ ಕಾರ್ಖಾನೆಗಳು ಆ ಕೆಲಸ ಮಾಡಿಲ್ಲ. ಅಷ್ಟೆ ಅಲ್ಲದೆ ಜೀವ ಜಲವಾದ ಕುಡಿಯುವ ನೀರಿನ್ನು ದುರುಪಯೋಗ ಪಡಿಸಿಕೊಂಡು ಕೆಲ ಗುತ್ತಿಗೆದಾರರು ಮತ್ತು ಖಾಸಗಿ ಟ್ಯಾಂಕರ್ ಮಾಲೀಕರು ನೀರಿನ ಮಾರಾಟ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
Advertisement
ಪ್ರತಿಭಟನಾ ಸ್ಥಳಕ್ಕೆ ಕೌಲಗುಡ್ಡದ ಅಮರೇಶ್ವರ ಮಹಾರಾಜರು ಆಗಮಿಸಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕು. ಶಾಂತಿಯುತವಾಗಿ ನಡೆಯುತ್ತಿರುವ ಪಕ್ಷಾತೀತ ಮತ್ತು ಜಾತ್ಯಾತೀತ ಹೋರಾಟ ಜನಸಾಮಾನ್ಯರಿಗೂ ಎನ್ನುವುದನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಿಸಬೇಕು. ನಾಡು-ನುಡಿ ನೆಲ ಜಲ ವಿಷಯದಲ್ಲಿ ಹೋರಾಟಗಳಿಗೆ ಮಠಾಧೀಶರು ಯಾವಾಗಲು ಬೆಂಬಲಿಸಿದ್ದೇವೆ. ಶೀಘ್ರವೇ ಶಾಶ್ವತ ನೀರನ ಪರಿಹಾರ ಕಲ್ಪಿಸಿದೆ ಹೋದರೆ ಈ ಭಾಗದ ಸಮಸ್ತ ಮಠಾಧೀಶರು ಕೃಷ್ಣಾ ನದಿ ನೀರು ಹೋರಾಟ ಸಮಿತಿ ಕೈಗೊಂಡಿರುವ ಅಹೋ ರಾತ್ರಿ ಧರಣಿಗೆ ಬೆಂಬಲಿಸುವ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
Related Articles
Advertisement
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಬಸನಗೌಡ ಪಾಟೀಲ, ವಿಜಯಕುಮಾರ ಅಡಹಳ್ಳಿ, ವೆಂಕಟೇಶ ದೇಶಪಾಂಡೆ, ರಮೇಶ ಬಾದವಾಡಗಿ , ಶಿವು ಅಪರಾಜ, ರಾಕೇಶ ಮೈಗೂರ, ಚಿದಾಂದ ಶೇಗುಣಶಿ, ರವಿ ಪೂಜಾರಿ,ಪ್ರಶಾಂತ ನಂದೇಶ್ವರ, ರಾವಸಾಬ ಜಕನೂರ, ವಿಜಯ ಕನಮಡಿ, ಭೀಮು ಕಾಂಬಳೆ, ಪ್ರಕಾಶ ಕಾಂಬಳೆ, ಸಂಜು ತೋರಿ, ಸುಭಾಷ ಕಾಂಬಳೆ, ಸುಶಾಂತ ಪಟ್ಟಣ, ಭರಮಾ ನಾಯಕ, ಮಾದೇವ ಮಡಿವಾಳರ, ಮಹಾಂತೇಶ ಬಾಡಗಿ ಇದ್ದರು.