Advertisement

Mangoes: ಹೊರ ರಾಜ್ಯಗಳ ಮಾವಿನ ಹಣ್ಣಿನ ದರ್ಬಾರ್‌!

10:21 AM May 14, 2024 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಹಣ್ಣಿನ ರಾಜ ಮಾವು ಲಗ್ಗೆಯಿಟ್ಟಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ ಜೋರಾಗಿದೆ. ಹೊರ ರಾಜ್ಯದ ಶೇ.70 ಮಾವು ಸಿಲಿಕಾನ್‌ ಸಿಟಿಯ ಮಾರುಕಟ್ಟೆಯನ್ನು ತಲುಪಿದೆ. ನಗರದ ವಿವಿಧ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿರುವ ವಿವಿಧ ತಳಿಯ ಮಾವಿನ ಹಣ್ಣುಗಳು ಗ್ರಾಹಕರನ್ನು ಸೆಳೆಯುತ್ತಿವೆ.

Advertisement

ಏಪ್ರಿಲ್‌ 2ನೇ ವಾರದಲ್ಲಿ ಆಗಮಿಸ ಬೇಕಾದ ಮಾವು 15 ದಿನ ತಡವಾಗಿ ಮರುಕಟ್ಟೆಯನ್ನು ಪ್ರವೇಶಿಸಿದೆ. ದುಬಾರಿಯಾದರೂ ಪರವಾಗಿಲ್ಲ ಮಾವಿನ ಹಣ್ಣನ್ನು ಸವಿಬೇಕು ಎನ್ನುವ ಕಾತುರದಲ್ಲಿ ಜನರಿದ್ದಾರೆ.

ಹೊರರಾಜ್ಯ ದರ್ಬಾರ್‌: ಪ್ರಸಕ್ತವಾಗಿ ರಾಜ್ಯದಲ್ಲಿ ಮಾವಿನ ಆಫ್ ಸೀಜನ್‌ ಇದೆ. ಜತೆಗೆ ಉಷ್ಣಾಂಶದಲ್ಲಿನ ವ್ಯತ್ಯಾಸದಿಂದ ಮಾವು ಇಳುವರಿಯಲ್ಲಿ ಶೇ.50 ಕುಂಠಿತ ವಾಗಿದೆ. ಇನ್ನೂ ಕೆಲವಡೆ ಮಾವು ತಡವಾಗಿ ಕಾಯಿ ಕಚ್ಚಿರುವುದರಿಂದ ಮಾರುಕಟ್ಟೆಗೆ ಬರಲು ಇನ್ನೆರಡು ವಾರಗಳು ಬೇಕು. ಇದೀಗ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ಇತರೆಡೆಗಳಿಂದ ಬಂದಿರುವ ಮಾವು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮುಂದಿನ ಎರಡು ವಾರದಲ್ಲಿ ಕರ್ನಾಟಕದ ಮಾವು ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಕಡಿಮೆ ಸಿಹಿ-ಕಡು ಬಣ್ಣ: ಮಾರುಕಟ್ಟೆಯಲ್ಲಿ ಪ್ರಸ್ತುತ ಲಭ್ಯವಿರುವ ಶೇ.70 ಮಾವಿನ ಹಣ್ಣಿನಲ್ಲಿ ಸಿಹಿ ಪ್ರಮಾಣ ಕಡಿಮೆಯಿದೆ. ಆದರೆ, ಬಣ್ಣ ಹಾಗೂ ಪರಿಮಳ ಮಾತ್ರ ಗಾಢವಾಗಿದೆ. ಮಳೆಯ ಮುನ್ಸೂಚನೆ ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ ಎನ್ನುವ ನಿಟ್ಟಿನಲ್ಲಿ ಎಳೆಯ ಕಾಯಿ ಕಟಾವು ಮಾಡಿ, ರಾಸಾಯನಿಕ ಬಳಸಿ ಹಣ್ಣು ಮಾಡಲಾಗುತ್ತದೆ. ಇದರಿಂದಾಗಿ ಮಾವಿನ ಹಣ್ಣಿನಲ್ಲಿ ಸಿಹಿ ಅಂಶ ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯಾವೆಲ್ಲಾ ಹಣ್ಣುಗಳು ಬಂದಿವೆ?: ಪ್ರಸ್ತುತ ಸಿಂಧೂರಿ, ರಸಪೂರಿ, ಬಾದಾಮಿ, ಮಲ್ಗೊàವಾ, ತೋತಾಪುರಿ, ರಸಪುರಿ, ಮಲ್ಲಿಕಾ, ಆಪೂಸ್‌, ನೀಲಂ, ಆಮ್ರಪಾಲಿ, ಕೇಸರ್‌, ರಸ್‌ಪೂರಿ ಸೇರಿದಂತೆ ವಿವಿಧ ತಳಿಯ ಮಾವು ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೊರ ರಾಜ್ಯದಿಂದ ಬಂದಿರುವ ಮಾವಿನ ಪ್ರಮಾಣ ಶೇ.30ರಷ್ಟು ಕಡಿಮೆ ಇದೆ.

Advertisement

ಬೇಡಿಕೆ- ಬೆಲೆ ಏರಿಕೆ!: ಪ್ರಸ್ತುತ ಮಾರುಕಟ್ಟೆಯಲ್ಲಿ ಮಾವಿನ ಬೇಡಿಕೆ ಹೆಚ್ಚಿದೆ. ಬೇಡಿಕೆಗೆ ತಕ್ಕಂತೆ ಮಾವು ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ವರ್ಷ ಒಂದು ಟನ್‌ ಬಾದಾಮಿಗೆ 20 ಸಾವಿರ ರೂ. ಇತ್ತು. ಆದರೆ ಈ ಬಾರಿ 40 ರಿಂದ 45 ಸಾವಿರ ರೂ.ಗೆ ಏರಿಕೆಯಾಗಿದೆ. ಇದೀಗ ಮಾರುಕಟ್ಟೆಯಲ್ಲಿ ರಸಪುರಿ 150 ರೂ., ಬಾದಾಮಿ 200 ರೂ., ಮಲ್ಲಿಕಾ 250 ರೂ., ಅಲ್ಫಾ 180 ರೂ., ಬಾಗೈನ್ಪಲ್ಲಿ 150 ರೂ., ಅಲ್ಫಾನ್ಸೋ 300 ರೂ., ಮಾಲ್ಗೊàಬಾ 350 ರೂ., ತೋಪಾಪುರಿ 100 ರೂ. ಹಾಗೂ ಇತರೆ ಮಾವಿನ ಹಣ್ಣು ಒಂದು ಕೆ.ಜಿ.ಗೆ ಕನಿಷ್ಠ 100ರಿಂದ 500 ರೂ. ವರೆಗೆ ದರ ನಿಗದಿಯಾಗಿದೆ.

ಮಾವಿನ ಹಣ್ಣಿನಿಂದ ಮಾಡುವ ಐಸ್ಕ್ರೀಂ, ಜ್ಯೂಸ್‌, ತಿಂಡಿ- ತಿನಿಸು, ಮಾವಿನ ಹಣ್ಣಿನ ಗೊಜ್ಜು, ಹುಳಿ ಸಾರು ಸೇರಿದಂತೆ ವಿವಿಧ ಖಾದ್ಯಗಳು ನಗರದ ಹೋಟೆಲ್‌ ಹಾಗೂ ಅಂಗಡಿಗಳಲ್ಲಿ ಸಿದ್ಧವಾಗುತ್ತಿದೆ. ಇದರ ರುಚಿ ಸವಿಯಲು ಗ್ರಾಹಕರು ಮುಂದಾಗುತ್ತಿದ್ದಾರೆ.

ಮಾರುಕಟ್ಟೆಗೆ ಹೊರ ರಾಜ್ಯದಿಂದ ಹಣ್ಣುಗಳು ಬಂದಿವೆ. ಕರ್ನಾಟಕದಿಂದ ಪೂರ್ಣ ಪ್ರಮಾಣ ಮಾವು ಬೆಂಗಳೂರು ಮಾರುಕಟ್ಟೆಯನ್ನು ಪ್ರವೇಶ ಮಾಡಿಲ್ಲ. ಮಾವಿನ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕೊರತೆಯಿದೆ. -ಷಣ್ಮಖ, ತಮಿಳುನಾಡು ಮಾವಿನ ವ್ಯಾಪಾರಿ.

ಮಾವು ಬೆಲೆ ದುಬಾರಿಯಾಗಿದೆ. ಮಲ್ಲಿಕಾ ಒಂದು ಕೆ.ಜಿ. 200ರಿಂದ 250 ರೂ. ದರದಲ್ಲಿ ಮಾರಾಟವಾಗುತ್ತಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಮಲ್ಲಿಕಾ ಬೆಲೆ 150 ರೂ. ಆಸುಪಾಸಿನಲ್ಲಿತ್ತು. -ಪೂಜಾ ಶೇಖರ್‌, ಬೆಂಗಳೂರ

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next