ಹುಬ್ಬಳ್ಳಿ: ಲಾಕ್‌ಡೌನ್ ತೆರವು ನಂತರದಲ್ಲಿ ಹಳೇ ವಾಹನಗಳ ಮಾರಾಟಕ್ಕೆ ಮತ್ತೆ ಖದರ್ ಬರತೊಡಗಿದೆ. ಜತೆಗೆ ಹಳೇ ವಾಹನಗಳ ಬೆಲೆಯಲ್ಲಿ ಶೇ.10-20 ಬೆಲೆ ಹೆಚ್ಚಳವೂ ಆಗಿದೆ. ರಾಜ್ಯದಲ್ಲಿ ಅತ್ಯಂತ ದೊಡ್ಡ ಹಳೇ ವಾಹನಗಳ ಮೇಳ ಪ್ರತಿ ರವಿವಾರ ಹುಬ್ಬಳ್ಳಿ ಡಾಕಪ್ಪ ವೃತ್ತದಲ್ಲಿ ನಡೆಯುತ್ತದೆ.ಇಲ್ಲಿ ಹಳೇ ವಾಹನ ಖರೀದಿ ಹಾಗೂ ಮಾರಾಟಕ್ಕೆ ರಾಜ್ಯದ ವಿವಿಧ ನಗರಗಳಿಂದ ಪ್ರತಿ ರವಿವಾರ ಸಾವಿರಾರು ಜನರು ಆಗಮಿಸುತ್ತಾರೆ.
ಡಾಕಪ್ಪ ವೃತ್ತದಲ್ಲಿರುವ ಹಳೇ ವಾಹನಗಳ ಮಾರುಕಟ್ಟೆಯಲ್ಲಿ ಸುಮಾರು 24 ಮಳಿಗೆಗಳಿವೆ. ಇದರಲ್ಲಿ ಕಡಿಮೆ ಎಂದರೂ ಪ್ರತಿ ವಾರ 300ಕ್ಕೂ ಹೆಚ್ಚು ವಾಹನಗಳ ಮಾರಾಟ ಮಾಡಲಾಗುತ್ತಿದೆ. ಕೋವಿಡ್ ವೈರಸ್ ಲಾಕ್‌ಡೌನ್ ಮುನ್ನ ಸುಮಾರು500ಕ್ಕೂ ಹೆಚ್ಚು ವಾಹನಗಳು ಪ್ರತಿ ವಾರ ಮಾರಾಟವಾಗುತ್ತಿದ್ದವು. ಆದರೆ ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಬಂದ್ ಆಗಿದ್ದ ಮಾರುಕಟ್ಟೆ ಕಳೆದ ಒಂದು ತಿಂಗಳಿಂದ ಪುನರಾರಂಭಗೊಂಡಿದ್ದು ಜನರು ಮತ್ತೇ ವಾಹನ ಖರೀದಿಗೆ ಆಗಮಿಸುತ್ತಿದ್ದಾರೆ. ಆದರೆ ಅವರಿಗೆ ಬೇಕಾದಂತಹ ವಾಹನ ಸಿಗುತ್ತಿಲ್ಲ. ಸಿಕ್ಕರೂ ಅದರ ಬೆಲೆ ಏರಿಕೆಯಿಂದ ಗ್ರಾಹಕರು ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ.
ಬಿಎಸ್-6 ಬೆಲೆ ಏರಿಕೆ: ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರಕ್ಕೆ ಸರಕಾರ ಹಲವಾರು ಮಾರ್ಗಸೂಚಿ ನೀಡಿದ್ದು, ಅದಕ್ಕಾಗಿ ಬಸ್ ಹಾಗೂ ಸಾರ್ವಜನಿಕ ವಾಹನಗಳಲ್ಲಿ ಸಂಚರಿಸದೇ ಸ್ವಂತ ವಾಹನಗಳನ್ನು ಖರೀದಿಸಿದರಾಯಿತು ಎಂದು ಗ್ರಾಹಕರು ವಾಹನ ಖರೀದಿಗೆ ಆಗಮಿಸಿದರೆ ಮಾರುಕಟ್ಟೆಯ ಬೆಲೆ ಗಗನಮುಖೀಯಾಗಿದೆ. ಈ ಹಿಂದೆ ಬಿಎಸ್-3, ಬಿಎಸ್-4 ಹಾಗೂ ಬಿಎಸ್-5 ಇದ್ದಾಗ ವಾಹನಗಳ ಬೆಲೆ ಕೊಂಚು ಕಡಿಮೆ ಇತ್ತು.ಆದರೆ ಇತ್ತೀಚಿಗೆ ಬಿಎಸ್.-6 ಮಾರುಕಟ್ಟೆಗೆ ಆಗಮಿಸಿದಾಗಿನಿಂದ ವಾಹನಗಳ ಬೆಲೆ ಗಗನ ಮುಖೀಯಾಗಿದೆ. ಇದರಿಂದ ಗ್ರಾಹಕರ ಹೊಸ ವಾಹನ ಖರೀದಿಯ ಬದಲಾಗಿ ಹಳೇ ವಾಹನ ಖರೀದಿಗೆ ಮುಂದಾಗುತ್ತಿದ್ದಾರೆ.
ಹಳೇ ವಾಹನಗಳ ಬೆಲೆ ಏರಿಕೆ: ಬಿಎಸ್-6 ವಾಹನಗಳು ಮಾರುಕಟ್ಟೆಗೆ ಆಗಮಿಸಿದ ನಂತರ ಹಾಗೂ ಕೋವಿಡ್ ವೈರಸ್ ನಂತರದಲ್ಲಿ ಹಳೇ ವಾಹನಗಳ ಬೆಲೆಯಲ್ಲೂ ಏರಿಕೆ ಕಂಡಿದೆ. ಈ ಹಿಂದೆ ಇದ್ದ ಹಳೇ ವಾಹನಗಳಿಗೆ ಇದ್ದ ದರಕ್ಕಿಂತಶೇ.10ರಿಂದ 20 ಏರಿಕೆಯಾಗಿವೆ. ಇಷ್ಟಾದರೂ ಕೂಡಾ ಹಳೇ ವಾಹನಗಳ ಖರೀದಿಗೆ ಜನರು ಹೆಚ್ಚಾಗಿ ಆಗಮಿಸುತ್ತಿರುವುದು ಕಂಡು ಬರುತ್ತಿದೆ. ವಾಹನಗಳೇ ಬರುತ್ತಿಲ್ಲ: ಕಳೆದ ಒಂದು ತಿಂಗಳಿಂದ ಪುನರಾರಂಭಗೊಂಡಿರುವ ಹಳೇ ವಾಹನಗಳ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಇಷ್ಟವಾಗುವಂಥ ವಾಹನಗಳು ಬರುತ್ತಿಲ್ಲ. ಬಂದರೂ ಕೂಡಾ ಬೆಲೆ ಏರಿಕೆಯಾಗಿರುವುದು ನುಂಗಲಾರದ ತುತ್ತಾಗಿದೆ. ಇನ್ನು ಹಳೇ ವಾಹನ ಮಾರಾಟ ಮಾಡಿ ಹೊಸ ವಾಹನ ಖರೀದಿಸಬೇಕೆಂದವರು ಅಂತಹ ಯೋಜನೆಯಿಂದ ಹಿಂದೆ ಸರಿಯುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಹಳೇ ವಾಹನಗಳ ಮಾರುಕಟ್ಟೆಯಲ್ಲಿ ವಾಹನಗಳ ಕೊರತೆ ಎದ್ದು ಕಾಣುತ್ತಿದೆ.
ಕೋವಿಡ್ ವೈರಸ್ ಲಾಕ್‌ಡೌನ್‌ನಿಂದ ಸುಮಾರು ನಾಲ್ಕು ತಿಂಗಳ ಕಾಲ ಬಂದ್ ಆಗಿದ್ದ ಹಳೇ ವಾಹನ ಮಾರಾಟ, ಕಳೆದ ಒಂದು ತಿಂಗಳಿಂದ ಪುನರಾರಂಭಗೊಂಡಿದ್ದು ಸದ್ಯ ಸಣ್ಣದಾಗಿ ಚೇತರಿಸಿಕೊಳ್ಳುತ್ತಿದೆ. ಮಾರುಕಟ್ಟೆಯಲ್ಲಿ ಕಳೆದ ಒಂದು ತಿಂಗಳಿಗೆ ಹೋಲಿಸಿದರೆ ಮಾರುಕಟ್ಟೆ ಚೇತರಿಸಿಕೊಂಡಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಕಂಡು ಬರುತ್ತಿದೆ. ವಾಹನಗಳ ಬೆಲೆಯಲ್ಲಿ ಶೇ.10 ರಿಂದ 20ರಷ್ಟು ಏರಿಕೆ ಕಂಡಿದ್ದು, ಅಷ್ಟಾದರೂ ಬಿಎಸ್-6 ಖರೀದಿಸುವ ಬದಲಾಗಿ ಗ್ರಾಹಕರು ಹಳೇ ವಾಹನಗಳ ಖರೀದಿಗೆ ಮುಂದಾಗುತ್ತಿರುವುದು ಕಂಡು ಬಂದಿದೆ.
-ರಮೇಶ ಮುತಗಿ, ಮಾಜಿ ಅಧ್ಯಕ್ಷ, ಹಳೇ ವಾಹನ ಮಾರಾಟಗಾರರ ಸಂಘ
ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳುತ್ತಾರೆ. ಆದ್ದರಿಂದ ಇಷ್ಟು ದಿನಗಳ ಕಾಲ ಬಸ್‌ನಲ್ಲಿ ಕೆಲಸಕ್ಕೆ ನಗರಕ್ಕೆ ಬರುತ್ತಿದ್ದೆವು. ಇನ್ನು ಮುಂದೆ ಆರೋಗ್ಯದ ದೃಷ್ಟಿಯಿಂದ ಸ್ವಂತ ವಾಹನ ಖರೀದಿಸಬೇಕೆಂದರೆ ಬಿಎಸ್-6 ತುಂಬಾ ಬೆಲೆ ಏರಿಕೆ ಆಗಿದೆ. ಆದ್ದರಿಂದ ಹೊಸ ಗಾಡಿ ತೆಗೆದುಕೊಳ್ಳುವ ಬದಲಾಗಿ ಹಳೇ ವಾಹನ ಖರೀದಿಗೆ ಬಂದಿದ್ದೇವೆ. ಇಲ್ಲೂ ಕೂಡಾ ಹೆಚ್ಚು ವಾಹನಗಳಿಲ್ಲ, ಇದ್ದರೂ ಇಲ್ಲೂ ಕೂಡಾ ಬೆಲೆ ಏರಿಕೆಯಾಗಿರುವುದು ಕಂಡು ಬರುತ್ತಿದೆ.
-ಫಕ್ಕೀರಪ್ಪ,ಕುಂದಗೋಳ ನಿವಾಸಿ
-ಬಸವರಾಜ ಹೂಗಾರ