Advertisement
ಇದು ಆಜ್ರಿ ಗ್ರಾಮದ ಹರ್ಮಣ್ಣು ಭಾಗದವರಿಗೆ ಸಂಪರ್ಕಿಸುವ ಕಿರಿದಾದ ಸೇತುವೆಯ ದುಸ್ಥಿತಿ. ಭಾರೀ ಮಳೆ ಬಂದಾಗಂತೂ ಈ ನದಿಯಲ್ಲಿ ಮಕ್ಕಳು ಬಿಡಿ, ದೊಡ್ಡವರು ಸಹ ಸೇತುವೆ ದಾಟುವುದೇ ಅಪಾಯಕಾರಿ. ಅನೇಕ ವರ್ಷಗಳಿಂದ ಇಲ್ಲಿಗೆ ಹೊಸ ದೊಡ್ಡ ಸೇತುವೆ ಕೊಡಿ ಎಂದು ಇಲ್ಲಿನ ಜನ ಕೇಳಿ, ಕೇಳಿ ಸುಸ್ತಾಗಿದ್ದಾರೆ.
Related Articles
Advertisement
ಸುಮಾರು ವರ್ಷಗಳ ಹಿಂದೆ ಹರ್ಮಣ್ಣು – ಬೆಳ್ಳಾಲ – ಮೋರ್ಟುಗೆ ಸಂಪರ್ಕ ಕಲ್ಪಿಸಲು ನಿರ್ಮಿಸಿರುವ ಕಿರು ಸೇತುವೆ ಇದಾಗಿದ್ದು, ಈಗ ಅದರ ಅಡಿಪಾಯವೇ ಕುಸಿಯುವ ಹಂತದಲ್ಲಿದೆ. ಈ ಬಾರಿಯ ಮಳೆಗೆ ಮರದ ದಿಮ್ಮಿಗಳೆಲ್ಲ ಬಂದು ಸೇತುವೆಗೆ ಬಡಿದಿರುವುದರಿಂದ ಮತ್ತಷ್ಟು ಹಾನಿಯಾಗಿದೆ. ಇನ್ನು ಇಡೀ ಸೇತುವೆಯ ಎರಡೂ ಬದಿಯಲ್ಲಿ ಇರುವುದು ಕೆಲವೇ ಕೆಲವು ಮೀಟರ್‌ನಷ್ಟು ದೂರದ ಹಿಡಿಕೆಗಳು. ಅವುಗಳು ತುಂಡಾಗಿ ಹೋಗಿ, ಹಲವು ವರ್ಷಗಳೇ ಕಳೆದಿದೆ. ಬರೀ ಮಕ್ಕಳನ್ನು ಈ ಸೇತುವೆಯಲ್ಲಿ ಶಾಲೆಗೆ ಕಳುಹಿಸುವುದು ಸಹ ಅಪಾಯಕಾರಿ.
13 ಕಿ.ಮೀ. ಸುತ್ತಾಟ
ಈ ಕಿರು ಸೇತುವೆಯ ಮೂಲಕ ಕೇವಲ 500 ಮೀ. ಅಷ್ಟೇ ದೂರ ಇರುವುದು. ಆದರೆ ಈ ಸೇತುವೆಯೂ ಕಿರಿದಾಗಿರುವುದರಿಂದ ರಿಕ್ಷಾ ಹಾಗೂ ಬೈಕ್‌ಗಳನ್ನು ಹೊರತುಪಡಿಸಿದರೆ ಇತರೆ ವಾಹನಗಳು ಸಂಚರಿಸಲು ಸಾಧ್ಯವಿಲ್ಲದೆ ಇರುವುದರಿಂದ ಬಾಕಿ ವಾಹನಗಳಲ್ಲಿ ಬರಬೇಕಾದರೆ ಬೆಳ್ಳಾಲ, ಹೆಮ್ಮಕ್ಕಿಯಾಗಿ ಬರೋಬ್ಬರಿ 13 ಕಿ.ಮೀ. ಸುತ್ತು ಬಳಸಿ ಬರಬೇಕಾಗಿದೆ. ಇಲ್ಲಿನ ಬಹುತೇಕ ಕುಟುಂಬಗಳು ಕೃಷಿಯನ್ನೇ ಆಶ್ರಯಿಸಿರುವುದರಿಂದ ಮನೆಗೆ ಬೇಕಾದ ಅಗತ್ಯ ವಸ್ತುಗಳು, ಕೃಷಿ ಸಲಕರಣೆಗಳು, ಯಂತ್ರಗಳನ್ನು ತರಬೇಕಾದರೂ ಈ ಸೇತುವೆಯ ಮೂಲಕ ಸಾಧ್ಯವಿಲ್ಲದೇ, ಸುತ್ತು ಬಳಸಿ ತರಬೇಕಾಗಿದೆ.
45 ಕುಟುಂಬಗಳು
ಹರ್ಮಣ್ಣು ಭಾಗದ 45 ಕುಟುಂಬಗಳು ಎಲ್ಲದಕ್ಕೂ ಈ ಸೇತುವೆಯನ್ನೇ ಆಶ್ರಯಿಸಿದ್ದಾರೆ. ಪ್ರತಿ ನಿತ್ಯ 50 ಮಕ್ಕಳು ಈ ಕಿರಿದಾದ ಸೇತುವೆಯ ಮೂಲಕವೇ ಸಂಚರಿಸುತ್ತಾರೆ. ಇಲ್ಲಿನ ಜನರು ಆಜ್ರಿಯ ಪಂಚಾಯತ್ ಕಚೇರಿಗೆ, ಪೇಟೆ, ಪಡಿತರ, ಶಾಲೆ, ಎಲ್ಲದಕ್ಕೂ ಇದೇ ಸೇತುವೆ ದಾಟಿ ಬರಬೇಕು. ಆಜ್ರಿ ಮಾತ್ರವಲ್ಲದೆ, ಸಿದ್ದಾಪುರ, ನೇರಳಕಟ್ಟೆ, ತಲ್ಲೂರು, ಕುಂದಾಪುರಕ್ಕೆ ತೆರಳಬೇಕಾದರೂ ಈ ಸೇತುವೆಯನ್ನು ದಾಟಿಯೇ ಹೋಗಬೇಕು.
ಮಕ್ಕಳನ್ನು ಕಳುಹಿಸಲು ಭಯ ಈ ಸೇತುವೆಯಲ್ಲಿ ಮಕ್ಕಳನ್ನು ಕಳುಹಿಸಲು ಭಯವಾಗುತ್ತದೆ. ಇನ್ನು ಮಳೆ ಬಂದಾಗಂತೂ ಪ್ರತೀ ಸಲ ಸೇತುವೆಯ ಮೇಲೆಯೇ ನೀರುಬರುತ್ತದೆ. ಇಲ್ಲಿಗೆ ದೊಡ್ಡ ಸೇತುವೆ ಮಾಡಿದರೆ ಸುಮಾರು 45 ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಲಿದೆ.– ಕೃಷ್ಣ ಹರ್ಮಣ್ಣು, ಸ್ಥಳೀಯ ನಿವಾಸಿ ದೊಡ್ಡ ಸೇತುವೆ ಬೇಡಿಕೆ ಇಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೂ ತತ್‌ಕ್ಷಣಕ್ಕೆ ಕರೆದುಕೊಂಡು ಹೋಗಲುಈ ಕಿರು ಸೇತುವೆಯಲ್ಲಿ ಕಷ್ಟವಾಗುತ್ತಿದೆ. ಇಲ್ಲದಿದ್ದರೆ ಸುತ್ತು ಬಳಸಿ ಹತ್ತಾರು ಕಿ.ಮೀ. ದೂರದಿಂದ ತೆರಳಬೇಕು. ಅದಕ್ಕಾಗಿ ಅನೇಕ ವರ್ಷಗಳಿಂದ ಈ ಚಕ್ರ ನದಿಗೆ ಒಂದು ದೊಡ್ಡ ಸೇತುವೆ ಮಾಡಿ ಕೊಡಿ ಎಂದು ಈ ಭಾಗದ ಜನರು ಅನೇಕ ವರ್ಷಗಳಿಂದ ಬೇಡಿಕೆ ಇಡುತ್ತಿದ್ದಾರೆ. – ಪ್ರಶಾಂತ್ ಪಾದೆ