ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ “ನಟಸಾರ್ವಭೌಮ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಗೊತ್ತೇ ಇದೆ. ನೋಡ ನೋಡುತ್ತಿದ್ದಂತೆಯೇ ಟ್ರೇಲರ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದ್ದು, ಯುಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗಿದ್ದು ಗೊತ್ತು. ಈಗ ಹೊಸ ಸುದ್ದಿ ಅಂದರೆ, ಚಿತ್ರ ಫೆ.7 ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆ ಮುನ್ನವೇ, “ನಟಸಾರ್ವಭೌಮ’ನಿಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಾಗಿದೆ.
ಹೌದು, ಚಿತ್ರದ ವಿತರಣೆ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದು, ಧೀರಜ್ ಎಂಟರ್‌ಪ್ರೈಸಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಖರೀದಿಸಿದೆ ಎನ್ನಲಾಗಿದೆ. “ನಟಸಾರ್ವಭೌಮ’ ಚಿತ್ರದ ಟ್ರೇಲರ್ ಕೂಡ ದಾಖಲೆ ಪ್ರಮಾಣದಲ್ಲಿ ವೀಕ್ಷಣೆಯಾಗಿ, ಸತತ 64 ಗಂಟೆಗಳ ಕಾಲ ಟ್ರೆಂಡಿಂಗ್‌ನಲ್ಲಿದ್ದ ಟ್ರೇಲರ್ ಚಿತ್ರದ ಮೇಲಿರುವ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಚಿತ್ರದ ಹಾಡುಗಳಿಗೂ ಮೆಚ್ಚುಗೆ ಸಿಕ್ಕಿದ್ದು, ಇತ್ತೀಚೆಗೆ ಬಿಡುಗಡೆಗೊಂಡ ಟ್ರೇಲರ್ ವೀಕ್ಷಿಸಿದವರಿಗೆ “ನಟಸಾರ್ವಭೌಮ’ ಹಾರರ್ ಚಿತ್ರವಾಗಿರಬಹುದಾ ಎಂಬ ಪ್ರಶ್ನೆ ಎದುರಾಗಿರುವುದು ಸುಳ್ಳಲ್ಲ.
ಕಾರಣ, ಆ ಟ್ರೇಲರ್‌ನಲ್ಲಿ ಆತ್ಮದ ಛಾಯೆ ಆವರಿಸಿಕೊಂಡಂತಿದೆ. ಅದೊಂದು ಆತ್ಮದ ಕಥೆ ಎಂಬ ಸುಳಿವನ್ನೂ ಟ್ರೇಲರ್ ಬಿಟ್ಟುಕೊಟ್ಟಿದೆ. ಟ್ರೇಲರ್‌ನಲ್ಲಿ ಪುನೀತ್ ಅವರ ನಟನೆಯ ಝಲಕ್ ನೋಡಿದವರಿಗೆ ಆತ್ಮವೊಂದು ಅವರೊಳಗೆ ಸೇರಿಕೊಂಡಿದೆಯಾ ಎಂಬಂತಹ ಪ್ರಶ್ನೆಗಳೂ ಓಡಾಡುತ್ತಿವೆ. ಅದೇನೆ ಇದ್ದರೂ, ಟ್ರೇಲರ್ ಬಳಿಕ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿರುವುದು ಸುಳ್ಳಲ್ಲ. ಅಷ್ಟೇ ದಾಖಲೆ ಮೊತ್ತಕ್ಕೆ ಚಿತ್ರ ಮಾರಾಟವಾಗಿದೆ ಎಂಬುದನ್ನೂ ಚಿತ್ರತಂಡ ಒಪ್ಪಿಕೊಂಡಿದೆ. ಆದರೆ, ಇಷ್ಟೇ ದೊಡ್ಡ ಮೊತ್ತಕ್ಕೆ ವಿತರಣೆಯ ಹಕ್ಕುಗಳು ಮಾರಾಟ ಆಗಿದೆ ಎಂಬ ಗುಟ್ಟನ್ನು ಮಾತ್ರ ಚಿತ್ರತಂಡ ಬಿಟ್ಟುಕೊಡುತ್ತಿಲ್ಲ.
ಅಂದಹಾಗೆ, “ನಟಸಾರ್ವಭೌಮ’ ಸುಮಾರು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ತಯಾರಿ ನಡೆಸುತ್ತಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಚಿತ್ರದಲ್ಲಿ ಪುನೀತ್‌ರಾಜ್‌ಕುಮಾರ್ ಅವರಿಗೆ ರಚಿತಾರಾಮ್ ಮತ್ತು ಅನುಪಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಾಧುಕೋಕಿಲ ಇತರರು ನಟಿಸಿದ್ದಾರೆ. ಪವನ್ ಒಡೆಯರ್ “ರಣವಿಕ್ರಮ’ ಬಳಿಕ ಪುನೀತ್ ಅವರಿಗೆ ಈ ಚಿತ್ರ ನಿರ್ದೇಶಿಸಿದ್ದಾರೆ. ಇನ್ನು, ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಿಸಿದ್ದಾರೆ.