ಬೆಳಗ್ಗೆ 11 ಗಂಟೆಗೆ ಸದನ ಸಮಾವೇಶಗೊಂಡಾಗಲೇ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಗದ್ದಲವೆಬ್ಬಿಸಿದವು. ಕೊನೆಗೆ ಕಲಾಪವನ್ನು 2 ಗಂಟೆಗೆ ಮುಂದೂಡಲಾಯಿತು. ನಂತರವೂ, ಸುಮ್ಮನಾಗದ ಪ್ರತಿಪಕ್ಷಗಳ ನಾಯಕರು ಘೋಷಣೆ ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಭದ್ರತಾ ಲೋಪದ ಹೊಣೆಹೊತ್ತು ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು, ಸದನದಲ್ಲಿ ದುಷ್ಕೃತ್ಯವೆಸಗಿದ ಆರೋಪಿಗಳಿಗೆ ಪಾಸ್ ನೀಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Advertisement
ಇನ್ನೊಂದೆಡೆ, ಭದ್ರತಾ ವೈಫಲ್ಯ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿ ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳು ಗದ್ದಲವೆಬ್ಬಿಸಿದವು. ಕೊನೆಗೆ ಎರಡೂ ಸದನಗಳ ಕಲಾಪಗಳನ್ನು ಸೋಮವಾರಕ್ಕೆ ಮುಂದೂಡಲಾಯಿತು.
15 ಮಂದಿ ಸಂಸದರ ಅಮಾನತು ಖಂಡಿಸಿ ಶುಕ್ರವಾರ ಪ್ರತಿಪಕ್ಷಗಳ ಒಕ್ಕೂಟದ ಸದಸ್ಯರು ಸಂಸತ್ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ಧರಣಿ ನಡೆಸಿದ್ದಾರೆ. ರಾಜ್ಯಸಭೆಯಿಂದ ಅಮಾನತುಗೊಂಡಿರುವ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಅವರು “ಮೌನ ಪ್ರತಿಭಟನೆ’ ಎಂದು ಬರೆದಿರುವ ಟಿಶರ್ಟ್ ಧರಿಸಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಧರಣಿಗೆ ಸಾಥ್ ನೀಡಿದರು. “ದೇಶದ ಜನರ ಪರ ಧ್ವನಿಯೆತ್ತಿದ್ದಕ್ಕೆ ನಮ್ಮನ್ನು ಸಸ್ಪೆಂಡ್ ಮಾಡಲಾಗಿದೆ. ಆದರೆ, ಆರೋಪಿಗಳಿಗೆ ಪಾಸ್ ಕೊಟ್ಟ ತಪ್ಪಿತಸ್ಥ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾತ್ರ ಆರಾಮಾಗಿ ತಿರುಗಾಡಿಕೊಂಡಿದ್ದಾರೆ’ ಎಂದು ಅಮಾನತುಗೊಂಡಿರುವ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ವಿಧಾನಸಭೆ ಚುನಾವಣೆಯ ಸೋಲಿನಿಂದ ಹತಾಶೆಗೊಂಡಿರುವ ಪ್ರತಿಪಕ್ಷಗಳು ಸಂಸತ್ ಭದ್ರತಾ ವೈಫಲ್ಯ ವಿಚಾರಕ್ಕೆ ರಾಜಕೀಯ ಬಣ್ಣ ನೀಡಲು ಯತ್ನಿಸುತ್ತಿವೆ. ಇದನ್ನೇ ನೆಪವಾಗಿಟ್ಟುಕೊಂಡು ಸಂಸತ್ ಕಲಾಪವನ್ನು ಕೊಚ್ಚಿಹೋಗುವಂತೆ ಮಾಡುತ್ತಿವೆ.
– ಅನುರಾಗ್ ಠಾಕೂರ್, ಕೇಂದ್ರ ಸಚಿವ
Related Articles
ನವದೆಹಲಿ: “ಡಿ.13ರಂದು ಸಂಸತ್‌ನಲ್ಲಿ ನಡೆದ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಏಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ?’ ಎಂದು ಪ್ರಶ್ನಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಆದರೆ ಈ ಬಗ್ಗೆ ಟಿವಿ ಚಾನಲ್‌ಗಳಿಗೆ ಮಾತ್ರ ಅವರು ಸಂದರ್ಶನ ನೀಡುತ್ತಿದ್ದಾರೆ’ ಎಂದು ದೂರಿದರು.
Advertisement
ಇದೇ ವೇಳೆ, “ಸಂಸತ್‌ನಲ್ಲಿ ನಡೆದ ಭದ್ರತಾ ಲೋಪದ ಕುರಿತು ಚರ್ಚೆಗೆ ಆಗ್ರಹಿಸಿದ ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಿರುವುದು ಯಾವ ನ್ಯಾಯ?’ ಎಂದು ಪ್ರಶ್ನಿಸಿದರು.“ಭದ್ರತಾ ಲೋಪ ಕುರಿತು ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವರು ಉತ್ತರಿಸಬೇಕು ಎಂದು ಪ್ರತಿಪಕ್ಷಗಳ ಒಕ್ಕೂಟ “ಐಎನ್‌ಡಿಐಎ’ ಆಗ್ರಹಿಸುತ್ತದೆ. ಅಲ್ಲದೇ ಈ ವಿಷಯದ ಬಗ್ಗೆ ಎರಡೂ ಸದನಗಳಲ್ಲೂ ಚರ್ಚೆಯಾಗಬೇಕು’ ಎಂದು ಖರ್ಗೆ ಒತ್ತಾಯಿಸಿದರು. ಪ್ರತಿಪಕ್ಷಗಳ ಹಲವು ನಾಯಕರ ಜತೆಗೆ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸುವ ನಿಟ್ಟಿನಲ್ಲಿಯೂ ಚರ್ಚಿಸಲಾಗಿದೆ ಎಂದರು.