Advertisement

ಎಲ್‌ಪಿಜಿಗೆ ಬೇಡಿಕೆ ಶೇ. 25ರಷ್ಟು ಏರಿಕೆ

03:55 PM Apr 18, 2020 | mahesh |

ಬೆಂಗಳೂರು: ಲಾಕ್‌ಡೌನ್‌ ಘೋಷಣೆಯಾದ ನಂತರದಿಂದ ನಗರದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಅದರ ಪೂರೈಕೆ ವಿತರಕರಿಗೆ ಸವಾಲಾಗಿ
ಪರಿಣಮಿಸಿದೆ. ಸಾಮಾನ್ಯ ದಿನಗಳಿಗಿಂತ ಲಾಕ್‌ ಡೌನ್‌ ಅವಧಿಯಲ್ಲಿ ಶೇ. 25ರಿಂದ 30ರಷ್ಟು ಅಡುಗೆ ಅನಿಲ ಸಿಲಿಂಡರ್‌ ಬುಕಿಂಗ್‌ನಲ್ಲಿ ಏರಿಕೆ ಕಂಡುಬಂದಿದೆ. ಇನ್ನೊಂದೆಡೆ ಕೋವಿಡ್ -19 ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸಿಲಿಂಡರ್‌ ವಿತರಕ ಸಿಬ್ಬಂದಿಯಲ್ಲಿ ಶೇ. 50ರಷ್ಟು ಇಳಿಕೆ  ಯಾಗಿದೆ. ಸದ್ಯ ಸೇವೆ ನೀಡುತ್ತಿರುವ ವಿತರಕ ಸಿಬ್ಬಂದಿಯನ್ನೂ ಕೆಲ ಗ್ರಾಹಕರು ಅನುಮಾನ, ಅವಮಾನಕರವಾಗಿ ನೋಡುತ್ತಿರುವುದು ಆತ್ಮವಿಶ್ವಾಸ ಕುಗ್ಗುವಂತೆ ಮಾಡಿದೆ.

Advertisement

ಪ್ಯಾನಿಕ್‌ ಬುಕ್ಕಿಂಗ್‌ ಹೆಚ್ಚಾಗಿದೆ: ಲಾಕ್‌ ಡೌನ್‌ನಿಂದ ವಾಣಿಜ್ಯ ಮಳಿಗೆಗಳು, ಹೋಟೆಲ್‌ಗ‌ಳು ಬಹುತೇಕ ಸ್ಥಗಿತಗೊಂಡಿವೆ. ಹಾಗಾಗಿ, ವಾಣಿಜ್ಯ ಉದ್ದೇಶಿ ಸಿಲಿಂಡರ್‌ ಬೇಡಿಕೆ ಕಡಿಮೆ ಆಗಿದೆ.
ಆದರೆ, ಗೃಹ ಬಳಕೆ ಗ್ರಾಹಕರಿಂದ “ಪ್ಯಾನಿಕ್‌ ಬುಕಿಂಗ್‌’ ಹೆಚ್ಚಾಗಿದ್ದು, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶೇ. 25ರಷ್ಟು ಬೇಡಿಕೆ ಅಧಿಕವಾಗಿದೆ. ಇನ್ನೊಂದೆಡೆ ಶೇ. 50ರಷ್ಟು ವಿತರಕ
ಸಿಬ್ಬಂದಿಯಷ್ಟೇ ಕೆಲಸಕ್ಕೆ ಬರುತ್ತಿದ್ದು, ತೀವ್ರ ಒತ್ತಡವಿದೆ. ಈ ಮಧ್ಯೆ ವಿತರಕರಿಗೆ ತಿಂಡಿ, ಊಟದ ಜತೆಗೆ ಮಾಸ್ಕ್, ಸ್ಯಾನಿ ಟೈಸರ್‌ ನೀಡಿ ಕಳುಹಿಸಬೇಕಿದೆ. ಹಾಗಿದ್ದರೂ ಕೆಲಗ್ರಾಹಕರು ಅನುಮಾನದಿಂದ ನೋಡುವುದರಿಂದ ವಿತರಕರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಗತ್ಯ ಸೇವೆಯಾಗಿರುವುದರಿಂದ ಮುಂದುವರಿಸುವುದು ಅನಿವಾರ್ಯವಾಗಿದೆ ಎಂದು ಜನ ಭಾರತ್‌ ಗ್ಯಾಸ್‌ ಏಜೆನ್ಸಿಯ ಹರೀಶ್‌ ಹೇಳುತ್ತಾರೆ.

ಎರಡು ಸಿಲಿಂಡರ್‌ ಸೌಲಭ್ಯ ಹೊಂದಿರುವ ಗ್ರಾಹಕರು ಒಂದು ಸಿಲಿಂಡರ್‌ ಪಡೆದ ಮರುದಿನವೇ ಮತ್ತೂಂದು ಸಿಲಿಂಡರ್‌ ಬುಕಿಂಗ್‌ ಮಾಡುತ್ತಿದ್ದಾರೆ. ಇದರಿಂದ ಒಂದು ಸಿಲಿಂಡರ್‌ಗಾಗಿ ಕಾದಿರುವವರಿಗೆ ವಿತರಿಸಲು ವಿಳಂಬವಾಗುತ್ತದೆ. ಹೋಟೆಲ್‌, ಮಳಿಗೆಗಳೆಲ್ಲಾ ಬಂದ್‌ ಆಗಿದ್ದು, ಒತ್ತಡದಲ್ಲಿ ಕೆಲಸ ಮಾಡುತ್ತಿರುವ ವಿತರಕರು ನೀರು ಕೇಳಿದರೂ ಕೆಲ ಗ್ರಾಹಕರು ನೀಡದಿರುವುದು ಕಂಡಾಗ ಬೇಸರವಾಗುತ್ತದೆ ಎಂದು ಆನಂದ್‌ ಭಾರತ್‌ ಗ್ಯಾಸ್‌ನ ಸಂತೋಷ್‌ ಬೇಸರ ವ್ಯಕ್ತಪಡಿಸುತ್ತಾರೆ.

ಗ್ಯಾಸ್‌ ಸಿಲಿಂಡರ್‌ ವಿತರಕರಿಗೆ ಪಾಸು ಇಲ್ಲ
ಅಡುಗೆ ಅನಿಲ ಸಿಲಿಂಡರ್‌ ಅಗತ್ಯ ವಸ್ತುವಾಗಿದ್ದರೂ ವಿತರಕರಿಗೆ ಎಲ್ಲಿಯೂ ಪೊಲೀಸ್‌ ಇಲಾಖೆ ಪಾಸು ವಿತರಿಸಿಲ್ಲ. ಹಾಗಾಗಿ ಪೊಲೀಸರು, ಸಾರ್ವಜನಿಕರ
ಪ್ರತಿರೋಧದ ನಡುವೆಯೇ ವಿತರಕರು ಕಾರ್ಯ ನಿರ್ವಹಿಸಬೇಕಿದೆ. ಲಾಕ್‌ ಡೌನ್‌ ಬಳಿಕ ಸಿಲಿಂಡರ್‌ ಬೇಡಿಕೆ ಶೇ. 50ರಷ್ಟು ಹೆಚ್ಚಾಗಿದೆ. ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಿದರೆ, ಕಡ್ಡಾಯವಾಗಿ ವಿತರಿಸಬೇಕೆಂಬ ನಿಯಮದ ಕಾರಣಕ್ಕೆ ಬಹಳಷ್ಟು ಗ್ರಾಹಕರು ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸುತ್ತಿದ್ದಾರೆ. ಹೀಗಾಗಿ ಸಕಾಲದಲ್ಲಿ ಸಿಲಿಂಡರ್‌ ಒದಗಿಸುವುದು ಸವಾಲಾಗಿದೆ ಎಂದು ವಿತರಕ
ಜಗದೀಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next