ರಾಯಬಾಗ: ಯಡ್ರಾಂವ ಗ್ರಾಮದಲ್ಲಿ ಪ್ರಾರಂಭಿಸಿದ ಮದ್ಯದಂಗಡಿ ಶೀಘ್ರವೇ ಬಂದ್ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ರಾಯಬಾಗ-ಅಂಕಲಿ ಮುಖ್ಯರಸ್ತೆ ಬಂದ್ ಮಾಡಿ ಸೋಮವಾರ ಪ್ರತಿಭಟನೆ ನಡೆಸಿದರು.
ಇದಕ್ಕೂ ಮೊದಲು ಗ್ರಾಮದ ಮಹಿಳೆಯರು ಶಿವಶಕ್ತಿ ಸಕ್ಕರೆಕಾರ್ಖಾನೆ ಹತ್ತಿರ ಅಂಕಲಿ-ರಾಯಬಾಗ ಮುಖ್ಯರಸ್ತೆಯಲ್ಲಿ ಕುಳಿತು ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಿಪಡಿಸಿದರು. ಇನ್ನೊಂಡೆದೆ ಯುವಕರು ರಸ್ತೆ ಮಧ್ಯೆ ಕಲ್ಲುಗಳನ್ನಿಟ್ಟು ರಸ್ತೆ ಬಂದ್ ಮಾಡಿ ಟೈಯರ್‌ಗೆ ಬೆಂಕಿ ಹಚ್ಚುವ ಮೂಲಕ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಗ್ರಾಪಂ ಹಾಗೂ ಗ್ರಾಮಸ್ಥರ ಪರವಾಣಿಗೆ ಇಲ್ಲದೇ ಗ್ರಾಮದಲ್ಲಿ ಮದ್ಯದಂಗಡಿ ಪ್ರಾರಂಭಿಸಲಾಗಿದೆ. ಇದರಿಂದ ಯುವಕರು ವ್ಯಸನಿಗಳಾಗಿ ಅವರ ಕುಟುಂಬಗಳು ಬೀದಿಗೆ ಬರುತ್ತಿವೆ. ಅಲ್ಲದೇ ನಿತ್ಯ ದುಡಿದ ಹಣವನ್ನು ಯುವಕರು ಮದ್ಯದಂಗಡಿಗೆ ಹಾಕುತ್ತಿರುವದರಿಂದ ಅವರ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಶೀಘ್ರವೇ ಗ್ರಾಮದಲ್ಲಿ ಪ್ರಾರಂಭಿಸಿದ ಮದ್ಯದಂಗಡಿ ಬಂದ್ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಡಿ.ಎಚ್. ಕೋಮರ, ಅಬಕಾರಿ ನಿರೀಕ್ಷಕ ಎಂ.ಎಸ್. ಪಾಟೀಲ ಮತ್ತು ಪಿಎಸ್‌ಐ ವಿನೋದ ಪೂಜಾರಿ ಪ್ರತಿಭಟನಾಕಾರರನ್ನು ಮನವಲಿಸಲು ಪ್ರಯತ್ನಿಸಿದರೂ ಸಹ ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರುವವರಿಗೆ ತಾವು ತಮ್ಮ ಹೋರಾಟವನ್ನುಕೈ ಬೀಡುವುದಿಲ್ಲವೆಂದು ಪಟ್ಟ ಹಿಡಿದರು.
ಅಬಕಾರಿ ನಿರೀಕ್ಷಕರು ಎಂ.ಎಸ್. ಪಾಟೀಲ ಮಾತನಾಡಿ, ಯಡ್ರಾಂವ ಗ್ರಾಮದಲ್ಲಿ ಪ್ರಾರಂಭಿಸಿರುವ ಮದ್ಯದಂಗಡಿ ನವೀಕರಣ ಇದೇ ತಿಂಗಳಲ್ಲೇ ಕೊನೆಗೊಳ್ಳುವದರಿಂದ ಮತ್ತೆ ನವೀಕರಣ ಮಾಡುವದಿಲ್ಲ ಎಂದು ಹೇಳಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಜಿತ್ ಸಂಗಮೇಶ್ವರ, ಬಾಲಚಂದ್ರ ದತ್ತವಾಡೆ, ದತ್ತಾ ಪಾತ್ರೋಟ, ಮಲ್ಲೇಶ ಮಾಳಿ, ರವಿ ಭಜಂತ್ರಿ, ಶಿವಪ್ಪ ಪಡಲಾಳೆ, ಹನಮಂತ ಧನಗರ, ಪುಂಡಲೀಕ ಪುಠಾಣಿ, ಅಜಿತ್ ಮಾಳಿ, ಸಂಗು ಮಾಳಿ, ರೂಪಾ ಮಾಳಿ, ಭಾರತಿ ಮಾಳಿ, ಅನಿತಾ ಮಾಂಗ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.