Advertisement

ಕುದ್ರುಬೇರು ಕಟ್ಟೆ-ಮೋರ್ಟು ರಸ್ತೆ ಅಭಿವೃದ್ಧಿಗೆ ಬೇಡಿಕೆ

12:47 AM Apr 15, 2021 | Team Udayavani |

ಆಜ್ರಿ: ಕೆರಾಡಿ ಹಾಗೂ ಆಜ್ರಿ ಗ್ರಾಮವನ್ನು ಸಂಪರ್ಕಿಸುವ ಬಹು ದಿನಗಳ ಬೇಡಿಕೆಯಾದ ಮೋರ್ಟು- ಬೆಳ್ಳಾಲ ಸೇತುವೆ ಪೂರ್ಣಗೊಂಡಿದ್ದು, ಸಂಚಾರವು ಆರಂಭಗೊಂಡಿದೆ. ಆದರೆ ಈ ಸೇತುವೆಯನ್ನು ಸಂಪರ್ಕಿಸುವ ಆಜ್ರಿ ಗ್ರಾ.ಪಂ. ವ್ಯಾಪ್ತಿಯ ಕುದ್ರುಬೇರುಕಟ್ಟೆ – ಮೋರ್ಟು ರಸ್ತೆ ಮಾತ್ರ ಇನ್ನೂ ಮಣ್ಣಿನ ರಸ್ತೆಯಾಗಿಯೇ ಉಳಿದಿದ್ದು, ಸೇತುವೆಯೊಂದಿಗೆ ರಸ್ತೆಯೂ ಅಭಿ ವೃದ್ಧಿಯಾದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ.

Advertisement

ಮೋರ್ಟು, ಬೆಳ್ಳಾಲ, ಕೆರಾಡಿ, ಮಾರಣಕಟ್ಟೆ ಭಾಗದ ಜನರಿಗೆ ಆಜ್ರಿ, ಸಿದ್ದಾಪುರಕ್ಕೆ ಹೋಬೇಕಾದರೆ ಚಕ್ರಾ ನದಿ ದಾಟಿ ಹೋಗಬೇಕಿದ್ದು, ಕಳೆದ ಹಲವು ವರ್ಷಗಳಿಂದ ಸೇತುವೆಯಿಲ್ಲದೆ ಜನ ಸಂಕಷ್ಟ ಪಡುತ್ತಿದ್ದರು. ಆದರೆ ಈಗ ಸೇತುವೆ ನಿರ್ಮಾಣವಾಗಿದ್ದು, ಸಂಪರ್ಕ ರಸ್ತೆ ಮಾತ್ರ ಧೂಳುಮಯವಾಗಿರುವುದರಿಂದ ಸಮಸ್ಯೆಯಾಗುತ್ತಿದೆ.

1.5 ಕಿ.ಮೀ. ಮಣ್ಣಿನ ರಸ್ತೆ
ಆಜ್ರಿ- ನೇರಳಕಟ್ಟೆ ಮುಖ್ಯ ರಸ್ತೆಯ ಕುದ್ರುಬೇರುಕಟ್ಟೆ ಬಳಿಯಿಂದ ಮೋರ್ಟು ಸೇತುವೆ ವರೆಗಿನ ಸುಮಾರು 1.5 ಕಿ.ಮೀ. ಉದ್ದದ ಮಣ್ಣಿನ ರಸ್ತೆಗೆ ಡಾಮರು ಕಾಮಗಾರಿಯಾದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ.

ಈ ಮೋರ್ಟು 2019ರಲ್ಲಿ ಕಾಮಗಾರಿ ಆರಂಭಗೊಂಡು, ಕೆಲವು ತಿಂಗಳ ಹಿಂದಷ್ಟೇ ಪೂರ್ಣಗೊಂಡಿದೆ. ಸೇತುವೆಯು 2.49 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈ ಭಾಗದಲ್ಲಿ ಸುಮಾರು 1,000ಕ್ಕೂ ಹೆಚ್ಚು ಮನೆಗಳಿದ್ದು, ಸೇತುವೆಯಾಗಿದ್ದರಿಂದ ಸಾವಿರಾರು ಮಂದಿಗೆ ಪ್ರಯೋಜನವಾಗಲಿದೆ. ಸಂಪರ್ಕ ರಸ್ತೆಯು ಅಭಿವೃದ್ಧಿಯಾದರೆ ಮತ್ತಷ್ಟು ಅನುಕೂಲವಾಗಲಿದೆ.

ಮೋರ್ಟು – ಬೆಳ್ಳಾಲ ಸೇತುವೆ ನಿರ್ಮಾಣ ಈ ಪ್ರದೇಶದ ಬಹು ದಿನಗಳ ಬೇಡಿಕೆಯಾಗಿತ್ತು. ಕೆರಾಡಿ, ಮೋರ್ಟು, ಬೆಳ್ಳಾಲ ಭಾಗದವರು ಈ ಮೊದಲು ಸೇತುವೆಯಿಲ್ಲದೆ ಸಿದ್ದಾಪುರಕ್ಕೆ ತೆರಳಬೇಕಾದರೆ ಸುತ್ತು ಬಳಸಿ 25-30 ಕಿ. ಮೀ. ಸಂಚರಿಸಬೇಕಾಗಿತ್ತು. ಈಗ ಸೇತುವೆಯಾಗಿದ್ದರಿಂದ ಕೇವಲ 10 ಕಿ.ಮೀ. ಅಷ್ಟೇ ಅಂತರವಿರುವುದು. ಸಿದ್ದಾಪುರ, ಆಜ್ರಿ ಭಾಗದವರು ಮಾರಣಕಟ್ಟೆಗೆ ತೆರಳಲು ಹತ್ತಿರದ ಮಾರ್ಗವಾಗಿದೆ. ರಸ್ತೆ ಡಾಮರು ಕಾಮ ಗಾ ರಿ ಯಾದರೆ ಮಳೆಗಾಲದಲ್ಲಿ ಕೆಸರುಮಯ ರಸ್ತೆ ಹಾಗೂ ಬೇಸಗೆಯಲ್ಲಿ ಧೂಳಿನಿಂದಲೂ ಮುಕ್ತಿ ಸಿಗಲಿದೆ.

Advertisement

ಮಣ್ಣಿನ ರಸ್ತೆ ಅಭಿವೃದ್ಧಿಗಾಗಿ ಶಾಸಕರಿಗೆ ಮನವಿ
ಮೋರ್ಟು – ಬೆಳ್ಳಾಲ ಸೇತುವೆಯಾಗಿರುವುದರಿಂದ ಆಜ್ರಿ ಹಾಗೂ ಕೆರಾಡಿ ಭಾಗದ ಜನರಿಗೆ ತುಂಬಾ ಸಹಕಾರಿಯಾಗಿದ್ದು, ಇದರೊಂದಿಗೆ ಈ ಸೇತುವೆ ಸಂಪರ್ಕಿಸುವ ಮಣ್ಣಿನ ರಸ್ತೆ ಅಭಿವೃದ್ಧಿಯಾಗಬೇಕಿದೆ. ಈ ಬಗ್ಗೆ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅನುದಾನ ಮೀಸಲಿರಿಸುವ ಭರವಸೆ ನೀಡಿದ್ದಾರೆ.
– ಅಶೋಕ್‌ ಕುಲಾಲ್‌, ಆಜ್ರಿ ಗ್ರಾ.ಪಂ. ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next