Advertisement

ಪ್ರತಿಪಕ್ಷಗಳ ಪಟ್ಟು: ನಡೆಯದ ಕಲಾಪ; ಅದಾನಿ ಗ್ರೂಪ್‌ ವಿರುದ್ಧ ತನಿಖೆಗೆ ಒತ್ತಾಯ

10:27 PM Feb 06, 2023 | Team Udayavani |

ನವದೆಹಲಿ: ಅದಾನಿ ಸಮೂಹದ ವಿರುದ್ಧ ಹಿಂಡನ್‌ಬರ್ಗ್‌ ವರದಿಯಲ್ಲಿ ಮಾಡಿರುವ ವಂಚನೆ ಆರೋಪದ ಕುರಿತು ಚರ್ಚಿಸಲು ಆದ್ಯತೆಯ ಮೇರೆಗೆ ಮೊದಲು ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ಸೋಮವಾರವೂ ತಮ್ಮ ಪಟ್ಟು ಮುಂದುವರಿಸಿದವು. ಈ ಹಿನ್ನೆಲೆಯಲ್ಲಿ ಎರಡನೇ ವಾರದ ಮೊದಲನೇ ದಿನವೂ ಉಭಯ ಸದನಗಳಲ್ಲಿ ಕಲಾಪ ನಡೆಯಲಿಲ್ಲ.

Advertisement

ಲೋಕಸಭೆಯಲ್ಲಿ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು, ಅದಾನಿ ಸಮೂಹದ ವಿರುದ್ಧದ ವಂಚನೆ ಆರೋಪ ಸಂಬಂಧ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಆಗ್ರಹಿಸಿದವು. ಕಾಂಗ್ರೆಸ್‌ ಸಂಸದರು ಸದನದ ಬಾವಿಗಿಳಿದು “ಅದಾನಿ ಸರ್ಕಾರ್‌ ಶೇಮ್‌-ಶೇಮ್‌’ ಎಂದು ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ಸ್ಪೀಕರ್‌ ಓಂ ಬಿರ್ಲಾ “ಇದು ಒಳ್ಳೆಯ ಬೆಳವಣಿಗೆ ಅಲ್ಲ. ಘೋಷಣೆಗಳನ್ನು ಕೂಗುವುದು ಸದನದ ಗೌರವಕ್ಕೆ ಕುಂದು ತರಲಿದೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜನರು ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಚರ್ಚೆಯಲ್ಲಿ ಭಾಗವಹಿಸಲು ನಿಮಗೆ ಆಸಕ್ತಿಯೇ ಇಲ್ಲ,’ ಎಂದು ತರಾಟೆಗೆ ತೆಗೆದುಕೊಂಡರು.

ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಕಲಾಪವನ್ನು ಮುಂದೂಡಲಾಯಿತು. ಶಾಂತಿಯುತವಾಗಿ ಕಲಾಪದಲ್ಲಿ ಭಾಗವಹಿಸುವಂತೆ ಹಾಗೂ ಸಂಪ್ರದಾಯದಂತೆ ರಾಷ್ಟ್ರಪತಿಗಳ ವಂದನಾ ನಿರ್ಣಯದ ಕುರಿತು ಚರ್ಚೆಗೆ ಅವಕಾಶ ನಿಡಬೇಕೆಂದು ಪ್ರತಿಪಕ್ಷಗಳಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಮಂಗಳವಾರಕ್ಕೆ ಕಲಾಪ ಮುಂದೂಡಲಾಯಿತು.

ರಾಜ್ಯಸಭೆಯಲ್ಲಿ
ರಾಜ್ಯಸಭೆಯಲ್ಲೂ ಕೂಡ ಅದಾನಿ ಸಮೂಹದ ವಿರುದ್ಧದ ವಂಚನೆ ಆರೋಪ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳು ಆಗ್ರಹಿಸಿದವು. ಆದರೆ ಈ ಹಿಂದೆ ಪಟ್ಟಿ ಮಾಡಿರುವಂತೆ ವಿಷಯಗಳ ಚರ್ಚೆಗೆ ಸಹಕರಿಸಬೇಕು ಎಂದು ಸಭಾಪತಿ ಜಗದೀಪ್‌ ಧನ್ಕರ್‌ ಮನವಿ ಮಾಡಿದರು. ಪ್ರತಿಪಕ್ಷಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಧ್ಯಾಹ್ನಕ್ಕೆ ಕಲಾಪ ಮುಂದೂಡಲಾಯಿತು. ಮಧ್ಯಾಹ್ನದ ಕಲಾಪದಲ್ಲೂ ಅದಾನಿ ವಿಷಯ ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳಿಂದ ಗದ್ದಲ ಮುಂದುವರಿಯಿತು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಮುಂಗಡ ಪಾವತಿ
ಮಾರುಕಟ್ಟೆ ಪರಿಸ್ಥಿತಿ ಹಿನ್ನೆಲೆಯಲ್ಲಿ ತನ್ನ ವಿವಿಧ ಕಂಪನಿಗಳಲ್ಲಿ 2024ರ ಸೆಪ್ಟೆಂಬರ್‌ಗೆ ಮೆಚ್ಯುರಿಟಿ ಆಗುವ ಅಡವಿರಿಸಿರುವ ಷೇರುಗಳಿಗೆ ಮೊದಲೇ ಮುಂಗಡವಾಗಿ ಪಾವತಿಸಲು ಅದಾನಿ ಸಮೂಹ ತೀರ್ಮಾನಿಸಿದೆ. ಅದಾನಿ ಪೋರ್ಟ್‌, ಅದಾನಿ ಗ್ರೀನ್‌ ಎನರ್ಜಿ ಮತ್ತು ಅದಾನಿ ಟ್ರಾನ್ಸ್‌ಮಿಷನ್‌ನಲ್ಲಿ ಹೂಡಿಕೆ ಮಾಡಿರುವ ಗ್ರಾಹಕರಿಗೆ 9, 213.80 ಕೋಟಿ ರೂ. ಮುಂಗಡ ಪಾವತಿ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

Advertisement

ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ
ಪ್ರಕರಣದ ವಿರುದ್ಧ ತನಿಖೆಗೆ ಆಗ್ರಹಿಸಿ ಸಂಸತ್‌ ಭವನದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಪಕ್ಷಗಳು ಧರಣಿ ನಡೆಸಿದವು. ದೇಶದ ವಿವಿಧ ಭಾಗಗಳಲ್ಲಿ ಎಲ್‌ಐಸಿ ಮತ್ತು ಎಸ್‌ಬಿಐ ಕಚೇರಿಗಳ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜೆಪಿಸಿ ಅಥವಾ ಸುಪ್ರೀಂಕೋರ್ಟ್‌ ನೇತೃತ್ವದಲ್ಲಿ ತನಿಖೆ ನಡೆಯಬೇಕೂ ಎಂದೂ ಒತ್ತಾಯಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next