Advertisement

ಕೋವಿಡ್  ನಡುವೆಯೂ ಗಣೇಶ ವಿಗ್ರಹಗಳಿಗೆ ಬೇಡಿಕೆ

08:54 PM Aug 04, 2021 | Team Udayavani |

ಉಡುಪಿ: ಮಳೆಗಾಲದಲ್ಲಿ ಜನರ ಆರ್ಥಿಕ ವ್ಯವಹಾರಗಳನ್ನು ಬಡಿದೆಬ್ಬಿಸುವ ಗಣೇಶ ಚತುರ್ಥಿ ಹಬ್ಬಕ್ಕೆ (ಸೆ. 10) ಸಾಕಷ್ಟು ದಿನ ಮುಂಚಿತವಾಗಿಯೇ ಸಿದ್ಧತೆಗಳು ನಡೆಯುತ್ತವೆ. ಸಾಂಪ್ರದಾಯಿಕವಾಗಿ ನಾಗರಪಂಚಮಿ ಬಳಿಕ ಗಣೇಶ ವಿಗ್ರಹಗಳಿಗೆ ಮನವಿ ಬರುವುದಾದರೂ ವಿಗ್ರಹಗಳನ್ನು ತಯಾರಿಸಲು ಸಾಕಷ್ಟು ಸಮಯ ಬೇಕಾಗಿರುವುದರಿಂದ ಈಗಾಗಲೇ ವಿಗ್ರಹ ಕಲಾವಿದರು ಸಿದ್ಧತೆ ನಡೆಸಿದ್ದಾರೆ.

Advertisement

ಆ. 13ರಂದು ನಾಗರಪಂಚಮಿ ಬಳಿಕ ವಿಗ್ರಹ ರಚನೆಗೆ ವೇಗ ದೊರೆಯಲಿದೆ. ಹೋದ ಬಾರಿ ಗಣೇಶ ಚತುರ್ಥಿ ಹಬ್ಬವು ಕೊರೊನಾದಿಂದ ಸಪ್ಪೆಯಾಗಿತ್ತು. ಇದರ ಬಗೆಗೆ ಸರಕಾರದ ನಿರ್ದೇಶನ ಬಂದುದೂ ತಡವಾಗಿತ್ತು. ಈಗ ಕೊರೊನಾ ಅಬ್ಬರವಿದ್ದರೂ ಗಣಪತಿ ವಿಗ್ರಹಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಹೋದ ವರ್ಷ ಸಾರ್ವಜನಿಕ ಗಣೇಶೋತ್ಸವದಲ್ಲಿ ವಿಗ್ರಹಗಳ ಆಕಾರವನ್ನು ಚಿಕ್ಕದು ಮಾಡಲಾಗಿತ್ತು. ಈ ಬಾರಿಯೂ ಕೆಲವೆಡೆ ಚಿಕ್ಕದು ಮಾಡುತ್ತಿದ್ದರೂ, ಕೆಲವೆಡೆ ಈ ಹಿಂದಿನ ಆಕಾರದಲ್ಲಿ ಮಾಡಲು ಕಲಾವಿದರಿಗೆ ಆರ್ಡರ್‌ ಬಂದಿದೆ.

ಹೋದ ವರ್ಷ ಸರಕಾರದಿಂದ ಮತ್ತು ಪರಿಸರ ಇಲಾಖೆಯಿಂದ ಸ್ಪಷ್ಟ ಮಾಹಿತಿಗಳಿಲ್ಲದೆ ಗೊಂದಲ ಉಂಟಾಗಿತ್ತು. ಹೋದ ವರ್ಷದ ಅನುಭವದ ಆಧಾರದಲ್ಲಿ ಜನರು ಹಿಂದಿನಂತೆ ವಿಗ್ರಹಗಳಿಗೆ ಆರ್ಡರ್‌ ಕೊಡುತ್ತಿದ್ದಾರೆ ಎನ್ನುತ್ತಾರೆ ಕಲಾವಿದ ರಮೇಶ ಕಿದಿಯೂರು.

ಈಗಾಗಲೇ ಕೆಲವು ವಿಗ್ರಹಗಳನ್ನು ರಚಿಸಲು ತಿಳಿಸಿದ್ದಾರೆ. ನಾಗರಪಂಚಮಿ ಬಳಿಕ ಸ್ಪಷ್ಟ ಸ್ವರೂಪ ಸಿಗಲಿದೆ ಎಂದು ವಿನಯ ಕಾಮತ್‌ ಹೇಳುತ್ತಾರೆ.

ಜನರು ಕೊಡುವ ಆರ್ಡರ್‌ಗಳಲ್ಲಿ ಬಹುತೇಕ ವಿಗ್ರಹಗಳು ಚಿಕ್ಕ ಆಕಾರದವು. ಸಾರ್ವಜನಿಕ ಗಣೇಶೋತ್ಸವದಲ್ಲಿ ಒಬ್ಬರು ಹೊರುವಂತಹ ಒಂದು, ಒಂದೂವರೆ ಅಡಿ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿಗೆ ಇದೆ ಎಂದು ತೈಲವರ್ಣವನ್ನು ಬಳಸದೆ ಜಲವರ್ಣದಿಂದ ವಿಗ್ರಹ ತಯಾರಿಸುವ ಪರ್ಕಳದ ದೇವರಾಜ ನಾಯಕ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ನಮಗೆ ಪ್ರತೀ ವರ್ಷದಂತೆ ಬಣ್ಣ ಹಾಕದ ಐದಾರು ವಿಗ್ರಹಗಳ ಆರ್ಡರ್‌ ಬಂದಿವೆ. ಬಣ್ಣದ ವಿಗ್ರಹಗಳೂ ಇವೆ. ಬಹುತೇಕ ಚಿಕ್ಕ ಆಕಾರದವು ಎನ್ನುತ್ತಾರೆ ಕಿನ್ನಿಮೂಲ್ಕಿ ಕೌಶಿಕ್‌ಕುಮಾರ್‌.

ಗಣಪತಿ ವಿಗ್ರಹಗಳಲ್ಲಿ ಬಹುತೇಕ ಆರ್ಡರ್‌ಗಳಿರುವುದು ಮನೆಗಳಲ್ಲಿ ಪೂಜಿಸುವ ಆಚರಣೆಗೆ. ಇತ್ತೀಚಿನ ವರ್ಷ ಗಳಲ್ಲಿ ಬಣ್ಣಗಳನ್ನು ಹಾಕದ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿಗೆ ಬರುತ್ತಿದೆ. ಇದು ಪರಿಸರ ಕಾಳಜಿ ಯಿಂದ ಉಂಟಾದ ಬೆಳವಣಿಗೆ. ಈಗ ದೊಡ್ಡ ವಿಗ್ರಹಗಳಿಗೆ ಆರ್ಡರ್‌ ಸಿಕ್ಕಿದರೆ ಮಾತ್ರ ಕಲಾವಿದರು ಅವುಗಳನ್ನು ನಿರ್ಮಿಸಲು ಅವಕಾಶಗಳಿವೆ. ಇನ್ನೊಂದು ವಾರದ ಬಳಿಕ ಆರ್ಡರ್‌ ಮಾಡಿದರೆ ಸಮಯಾವಕಾಶದ ಕೊರತೆ ಎದುರಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next