Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಧರಣಿ

04:28 PM Oct 22, 2018 | Team Udayavani |

ಹಾವೇರಿ: ಇಡೀ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಜಿಲ್ಲೆಯನ್ನಾಗಿ ಘೋಷಿಸಬೇಕು ಹಾಗೂ ಶೀಘ್ರದಲ್ಲಿ ಗೋವಿನಜೋಳ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ನಗರದ ತಹಸೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಿದರು. ವಿವಿಧ ಬೇಡಿಕೆಗಳ ಮನವಿಯನ್ನು ಉಪತಹಸೀಲ್ದಾರ್‌ ದ್ಯಾಮಣ್ಣ ಗವಿಸಿದ್ದಪ್ಪನವರ ಮೂಲಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರಿಗೆ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ ಕಾಳಿ, ಜಿಲ್ಲೆಯಲ್ಲಿ ಪ್ರಮುಖವಾಗಿ ಮೆಕ್ಕೆಜೋಳ ಬೆಳೆಯುತ್ತಿದ್ದು ಈಗ ಅದರ ಕಟಾವು ಪ್ರಾರಂಭವಾಗಿದೆ. ಈಗಿನ ಗೋವಿನಜೋಳ 1200ಕ್ಕೆ ವರ್ತಕರು ಮಾರುಕಟ್ಟೆಯಲ್ಲಿ ಖರೀದಿ ಮಾಡುತ್ತಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಒಂದು ಕ್ವಿಂಟಲ್‌ ಗೋವಿನಜೋಳ ಖರೀದಿಗೆ 1700 ದರ ನಿಗದಿಪಡಿಸಿದೆ. ರಾಜ್ಯ ಸರ್ಕಾರ ಗೋವಿನಜೋಳ ಬೆಳೆದ ರೈತರಿಗೆ 1 ಕ್ವಿಂಟಲ್‌ ಮೆಕ್ಕೆಜೋಳಕ್ಕೆ 200 ಪ್ರೋತ್ಸಾಹಧನ ಕೊಡಬೇಕು ಎಂದರು.

ಜಿಲ್ಲೆಯಲ್ಲಿ ಮೆಕ್ಕೆಜೋಳದ ಖರೀದಿ ಕೇಂದ್ರ ತಕ್ಷಣ ತೆರೆಯಬೇಕು. ವಿಳಂಬ ಮಾಡಿದರೇ ವರ್ತಕರು ದಾಸ್ತಾನು ಮಾಡಿಕೊಂಡು ಇದರ ಲಾಭವನ್ನು ವರ್ತಕರು ಪಡೆಯುತ್ತಾರೆ. ಅದಕ್ಕೆ ತಕ್ಷಣ ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆದು ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ತಾಲೂಕಾಧ್ಯಕ್ಷ ಫಕ್ಕಿರಗೌಡ ಗಾಜೀಗೌಡ್ರ ಮಾತನಾಡಿ, 75ರಿಂದ 80 ವರ್ಷಗಳಿಂದ ಅಕ್ರಮವಾಗಿ ಭೂಮಿ ಸಾಗುವಳಿ ಮಾಡಿದ ರೈತರಿಗೆ ಭೂಮಿ ಹಕ್ಕು ಪತ್ರ ಕೊಡಲು ಅಕ್ರಮ ಸಕ್ರಮ ಸಮಿತಿಯನ್ನು ಸಮ್ಮಿಶ್ರ ಸರ್ಕಾರ ರಚನೆಯಾಗಿ ಐದು ತಿಂಗಳು ಕಳೆದರೂ ಸಮಿತಿ ರಚನೆ ಆಗಿಲ್ಲ. ಕಾರಣ ತಕ್ಷಣ ಸಮಿತಿ ರಚಿಸಬೇಕು. ರೈತರಿಗೆ ಭೂಮಿ ಹಕ್ಕು ಪತ್ರ ನೀಡಬೇಕು. ಉತ್ತರ ಕರ್ನಾಟಕ ರೈತರಿಗೆ ತೋರುತ್ತಿರುವ ಮಲತಾಯಿ ಧೋರಣೆ ಮಾಡುವುದನ್ನು ಖಂಡಿಸುತ್ತದೆ. ಬೇಗನೇ ರೈತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಇಲ್ಲವಾದರೆ ಬೀದಿಗಿಳಿದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಬಸಣ್ಣ ಮೂಲಿಮನಿ, ಗೌರವಾಧ್ಯಕ್ಷ ಶಿವಾನಂದಪ್ಪ ಮತ್ತಿಹಳ್ಳಿ, ತಾಲೂಕು ಮಹಿಳಾ ಅಧ್ಯಕ್ಷೆ ಸರೋಜವ್ವ ಕರ್ಜಗಿ, ರೈತ ಮುಖಂಡರಾದ ಗಿರಿಜವ್ವ ಕಾಶಂಬಿ, ಮಾಲತೇಶ ಬಡಿಗೇರ, ನಾಗಪ್ಪ ರಾಮಜ್ಜನವರ, ಮಂಜುನಾಥ ಹಿರೇಮಠ, ಕುಮಾರ ಹರಮಗಟ್ಟಿ, ಗದಿಗೆಪ್ಪ ಹಡಪದ, ಷಣ್ಮುಖಪ್ಪ ಗಿರ್ಜಿ, ಕುಮಾರಸ್ವಾಮಿ ಶಂಕಿನಮಠ, ನೀಲಪ್ಪ ಬಣಕಾರ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next