Advertisement

ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ಒತ್ತಾಯ

12:09 AM Feb 15, 2023 | Team Udayavani |

ಬೆಂಗಳೂರು: ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸುವಂತೆ ವಿಧಾನಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಮಂಜುನಾಥ ಭಂಡಾರಿ ಒತ್ತಾಯಿಸಿದ್ದಾರೆ.

Advertisement

ವಿಧಾನಮಂಡಲ ಅಧಿವೇಶನದ ಮೇಲ್ಮನೆ ಕಲಾಪದಲ್ಲಿ ಮಂಗಳವಾರ ಈ ವಿಷಯ ಪ್ರಸ್ತಾಪಿಸಿದ ಭಂಡಾರಿ, ಕುಂದಾಪುರ ಕನ್ನಡ ಭಾಷೆ ಮಾತನಾಡುವ 25 ಲಕ್ಷ ಜನರ ಆಶಯದಂತೆ ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಕುಂದಾಪುರ ಕರ್ನಾಟಕ ಮತ್ತು ಭಾರತ ದೇಶಕ್ಕೆ ವಿವಿಧ ವಿಷಯಗಳಲ್ಲಿ ಅದ್ಭುತವಾದ ಕೊಡುಗೆಗಳನ್ನು ನೀಡಿದ ಊರು. ಕುಂದಾಪ್ರ ಭಾಷೆ, ಸಂಸ್ಕೃತಿಯ ವಿಚಾರದಲ್ಲಂತೂ ಇದು ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡಿದೆ.

ಬೈಂದೂರಿನಿಂದ ಬ್ರಹ್ಮಾವರದ ತನಕ ಮತ್ತು ಬಸ್ರೂರಿನಿಂದ ಹೆಬ್ರಿ ತನಕ ಮಲೆನಾಡು, ಕರಾವಳಿಯ 300ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಂದ ಕನ್ನಡ ಭಾಷೆಯಲ್ಲೇ ಸ್ಪಷ್ಟವಾಗಿ ಮಾತನಾಡುವ 25 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಈ ಜನರ ಆಟಪಾಠಗಳಲ್ಲಿ, ಕೃಷಿ, ಮೀನುಗಾರಿಕೆ ಚಟುವಟಿಕೆಗಳಲ್ಲಿ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಕಂಬಳ, ಕೋಲ, ಹೋಳಿ ಆಚರಣೆಗಳಲ್ಲಿ ಕುಂದಾಪುರ ಕನ್ನಡ ಭಾಷೆಯ ಸೊಬಗು ಕಾಣಸಿಗುತ್ತದೆ ಎಂದು ಭಂಡಾರಿ ವಿವರಿಸಿದರು.

ಬಹುಸಮುದಾಯದ ವಿಸ್ತಾರ ಪ್ರದೇಶ
ಕಳೆದ ಒಂದು ಶತಮಾನದಲ್ಲಿ ಕುಂದ ಕನ್ನಡ ಭಾಷೆಯ ಬಳಕೆಗಳ ಸ್ಪಷ್ಟ ದಾಖಲೆ ಸಿಗುತ್ತದೆ. ತಮ್ಮ ಸಾಹಿತ್ಯದಲ್ಲಿ, ಪಾತ್ರಗಳ ಆಡು ಮಾತಿನಲ್ಲಿ, ಕುಂದಾಪ್ರ ಕನ್ನಡವನ್ನೇ ಬಳಕೆ ಮಾಡಿ ವೈದೇಹಿ, ಮಿತ್ರಾ ವೆಂಕಟರಾಜ್‌, ಗಾಯಿತ್ರಿ ನಾವಡ, ಮಾಧುರಿಕೃಷ್ಣ, ವರಮಹಾಲಕ್ಷ್ಮೀ ಹೊಳ್ಳ ಮುಂತದಾವರು ಯಶಸ್ವಿಯಾಗಿದ್ದಾರೆ. ಇಂದು ರಾಜ್ಯದಲ್ಲಿ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದ ಭಾಷೆಗಳಿಗೆ ಅಕಾಡೆಮಿಗಳು ರಚನೆಯಾಗಿರುವಾಗ ಬಹುಸಮುದಾಯದ ವಿಸ್ತಾವರವಾದ ಪ್ರದೇಶದಲ್ಲಿ ವ್ಯಾಪ್ತಿಸಿರುವ 25 ಲಕ್ಷಕ್ಕೂ ಅಧಿಕ ಜನರ ಹೃದಯ ಭಾಷೆಯಾದ ಕುಂದಾಪುರ ಕನ್ನಡಕ್ಕೆ ಜನರು ಹೋರಾಟಕ್ಕೆ ಇಳಿಯುವ ಮೊದಲೇ ಅಕಾಡೆಮಿ ಸ್ಥಾಪಿಸುವ ಅನಿವಾರ್ಯತೆ ಇದೆ. ಆದ್ದರಿಂದ 25 ಲಕ್ಷ ಜನರ ಆಶಯದಂತೆ ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸಬೇಕು ಎಂದು ಮಂಜುನಾಥ ಭಂಡಾರಿ ಆಗ್ರಹಿಸಿದರು.

Advertisement

ಇದಕ್ಕೆ ಸರ್ಕಾರರ ಪರವಾಗಿ ಪ್ರತಿಕ್ರಿಯಿಸಿದ ಮೇಲ್ಮನೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ಸಂಬಂಧಿಸಿದ ಮಂಜುನಾಥ ಭಂಡಾರಿಯವರ ಪ್ರಸ್ತಾಪಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ಅವರಿಂದ ಉತ್ತರ ಕೊಡಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next