Advertisement

ನಡುಗಡ್ಡೆ ಸ್ಥಳಾಂತರಕ್ಕೆ ಆಗ್ರಹ

12:14 PM Dec 18, 2019 | Team Udayavani |

ಬಾಗಲಕೋಟೆ: ಆಲಮಟ್ಟಿ ಜಲಾಯಶವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿದಾಗ ಸಂಪೂರ್ಣ ನಡುಗಡ್ಡೆಯಾಗಿ ಸಂಪರ್ಕ ಕಳೆದುಕೊಳ್ಳುವ ನಗರದ ಕಿಲ್ಲಾ ಭಾಗದ ನಡುಗಡ್ಡೆ ಪ್ರದೇಶ ಸ್ಥಳಾಂತರಿಸಬೇಕು ಎಂದು ನಡುಗಡ್ಡೆ ಹೋರಾಟ ಸಮಿತಿ ಒತ್ತಾಯಿಸಿದೆ.

Advertisement

ಮಂಗಳವಾರ ಕೃಷ್ಣಾ ಮೇಲ್ದಂಡೆ ಯೋಜನೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಎನ್‌. ಜಯರಾಮ್‌ ಅವರಿಗೆ ಹೋರಾಟ ಸಮಿತಿಯಪದಾಧಿಕಾರಿಗಳು, ಸುಮಾರು 45ಕ್ಕೂ ಹೆಚ್ಚು ಸಂತ್ರಸ್ತರು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡರು. ನೂತನ ಆಯುಕ್ತರೊಂದಿಗೆ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದ ಹೋರಾಟ ಸಮಿತಿ ಪದಾಧಿಕಾರಿಗಳು ಸಂತ್ರಸ್ತರು, ವಿವಿಧ ಸಮಸ್ಯೆ ಗಮನಕ್ಕೆ ತಂದರು.

ಈ ವೇಳೆ ಹೋರಾಟ ಸಮಿತಿಯ ಕಾರ್ಯದರ್ಶಿ ಅರವಿಂದ ಮುಚಖಂಡಿ ಮಾತನಾಡಿ, ನಡುಗಡ್ಡೆ ಪ್ರದೇಶದ ಸುಮಾರು 1120 ಮನೆಗಳು, ಇಡೀ ಬಾಗಲಕೋಟೆಯ ಸಂಪರ್ಕ ಕಳೆದುಕೊಳ್ಳಲಿವೆ. ಅವುಗಳನ್ನು ಮುಳುಗಡೆ ವ್ಯಾಪ್ತಿಗೆ ತಂದು ಸ್ಥಳಾಂತರಿಸಬೇಕು ಎಂಬುದು ಬಹಳ ದಿನಗಳ ಬೇಡಿಕೆ. ಬಿಟಿಡಿಎದಿಂದ ಈ ಪ್ರಕ್ರಿಯೆ ನಡೆಸಿತ್ತು. ಆದರೆ, ಜಲ ಸಂಪನ್ಮೂಲ ಇಲಾಖೆ, ಕಾರ್ಯ ಭಾರದ ಒತ್ತಡದ ನೆಪ ಹೇಳಿ, ನಡುಗಡ್ಡೆ ಸ್ಥಳಾಂತರ ಕಾರ್ಯವನ್ನು ಕೈಬಿಟ್ಟಿದೆ. ಇದರಿಂದ ಹಲವು ವರ್ಷಳಿಂದ ನಡೆದ ಹೋರಾಟಕ್ಕೆ ಜಲ ಸಂಪನ್ಮೂಲ ಇಲಾಖೆ ಮಾನ್ಯತೆ ನೀಡಿಲ್ಲ. ಈ ವಿಷಯದ ಸ್ವತಃ ಸ್ಥಳೀಯ ಶಾಸಕರ ಗಮನಕ್ಕೂ ಅಧಿಕಾರಿಗಳು ತಂದಿಲ್ಲ ಎಂದು ತಿಳಿಸಿದರು.

ಸಂತ್ರಸ್ತರಿಗೆ ಮುದ್ರಾಂಕ ಶುಲ್ಕ ವಿನಾಯಿತಿ ನಾಲ್ಕು ವರ್ಷಗಳ ಕಾಲ ಮಾತ್ರವಿದೆ. ವರ್ಷಗಳ ಗಡವು ತೆಗೆಯಬೇಕು. 1991ರಲ್ಲಿ ಬಾಗಲಕೋಟೆ ನಗರಸಭೆಗೆ ಸರ್ಕಾರ, ಲಿಖೀತ ಆದೇಶ ಹೊರಡಿಸಿ, ಮುಳುಗಡೆ ವ್ಯಾಪ್ತಿಗೆ ಬರುವ ಕಟ್ಟಡ, ಖಾಲಿ ನಿವೇಶನ ಸಹಿತ ನಗರದಲ್ಲಿ ಭೂ ಕಂದಾಯ ತೆರಿಗೆ ಯಾವುದೇ ಕಾರಣಕ್ಕೂ ಹೆಚ್ಚಳ ಮಾಡಬಾರದು ಎಂದು ಆದೇಶ ಹೊರಡಿಸಿತ್ತು. ಇದನ್ನು ಉಲ್ಲಂಘಿಸಿ, ಮುಳುಗಡೆ ವ್ಯಾಪ್ತಿಯ ಜಾಗೆಗೂ ಭೂ ಕಂದಾಯ ಹೆಚ್ಚಳ ಮಾಡಲಾಗಿದೆ. ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಸಂತ್ರಸ್ತರ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಮೀಸಲಾತಿ ಕಲ್ಪಿಸಿದೆ. ಆದರೆ, ಇದನ್ನು ಜೆಓಡಿಸಿ, ಐಟಿಐ, ಡಿಪ್ಲೋಮಾ ಶಿಕ್ಷಣಕ್ಕೆ ಮಾತ್ರ ಸಿಮೀತಗೊಳಿಸಿದೆ. ಸರ್ಕಾರ ಶಿಕ್ಷಣ ಮೀಸಲಾತಿ ವ್ಯಾಖ್ಯಾನ ಬದಲಿಸಿ, ಎಲ್ಲ ರೀತಿಯ ಶಿಕ್ಷಣಕ್ಕೂ ಮೀಸಲಾತಿ ಕಲ್ಪಿಸಬೇಕು. ಯುಕೆಪಿಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ನಡುಗಡ್ಡೆ ಹೋರಾಟ ಸಮಿತಿಯ ಅಧ್ಯಕ್ಷ ಎ.ಎ. ದಂಡಿಯಾ, ಸಹ ಕಾರ್ಯದರ್ಶಿ ದೀಪಕ ಹಂಚಾಟೆ, ಪ್ರಮುಖರಾದ ವೀರಣ್ಣ ಹೊಸೂರ, ಅಶೋಕ ಘಾಟಗೆ ಉಪಸ್ಥಿತರಿದ್ದರು.

ಶಾಸಕರ ಭೇಟಿ: ಇದೇ ವೇಳೆ ಶಾಸಕ ಡಾ|ವೀರಣ್ಣ ಚರಂತಿಮಠ ಕೂಡ, ಯುಕೆಪಿ ನೂತನ ಆಯುಕ್ತ ಎನ್‌. ಜಯರಾಮ್‌ ಅವರನ್ನು ಭೇಟಿ ಮಾಡಿ, ಜಿಲ್ಲೆಗೆ ಬರಮಾಡಿಕೊಂಡರು. ನಡುಗಡ್ಡೆ ಸಹಿತ ಸಂತ್ರಸ್ತರ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next