ಬೀದರ: ಭಾರಿ ಮಳೆ ಹಿನ್ನೆಲೆ ಬೀದರ ಜಿಲ್ಲೆಯನ್ನು ಅತಿವೃಷ್ಠಿ ಪೀಡಿತ ಪ್ರದೇಶವನ್ನಾಗಿ ಘೋಷಿಸಿ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಿ ಸರ್ಕಾರ ನೆರವಿಗೆ ನಿಲ್ಲಬೇಕು ಎಂದು ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ಆಗ್ರಹಿಸಿದೆ.
ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ರೈತ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ ಸಲ್ಲಿಸಿದರು.
ಪ್ರಕೃತಿ ವಿಕೋಪಕ್ಕೆ ಜಿಲ್ಲೆ ತುತ್ತಾಗಿದ್ದು, ರೈತರು ಸಾಲದ ಸೂಳಿಯಲ್ಲಿ ಸಿಲುಕಿದ್ದಾರೆ. ಆದರೆ, ಸರ್ಕಾರ ಅರೆ ಗಣ್ಣಿನಿಂದ ನೋಡುತ್ತಿದ್ದು, ಕೂಡಲೇ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಲಾಗಿದೆ. ಕಬ್ಬಿನ ಬೆಲೆ ವಿಷಯದಲ್ಲಿ ಕೇಂದ್ರ ಸರ್ಕಾರ ರೈತರಿಗೆ ಮೋಸ ಮಾಡಿ, ಕಾರ್ಖಾನೆಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ. ಕೂಡಲೇ 4000 ರೂ. ಎಂಎಸ್‌ಪಿ ನಿಗದಿಗೊಳಿಸಿ, ನಾವು ಕಾರ್ಖಾನೆ ಪರ ಇಲ್ಲ ರೈತರ ಪರ ಇದ್ದೇವೆ ಎಂದು ಘೋಷಿಸಬೇಕು.
ಕಳೆದ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರ ಹಣವನ್ನು ಕೂಡಲೇ ಸರ್ಕಾರ ನೀಡಬೇಕು. ಜಿಲ್ಲೆಯ ರೈತರು ಬ್ಯಾಂಕುಗಳಲ್ಲಿ ಸಾಲ ತೀರಿಸದೇ ಉಳಿದಿರುವ ರೈತರಿಗೆ ಪಿಕೆಜಿಬಿ ಬ್ಯಾಂಕ್‌ನವರು ರೈತರಿಗೆ ನೋಟಿಸು ಕೊಟ್ಟು ಕೇಸ್ ಹಾಕುತ್ತಿದ್ದಾರೆ. ಇದರಿಂದ ಮನನೊಂದು ಚಿಕ್ಲಿ ಗ್ರಾಮದ ರೈತ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ರೈತರ ಮೇಲೆ ಕೇಸು ಹಾಕುವುದನ್ನು ನಿಲ್ಲಿಸಿ ಬ್ಯಾಂಕಿನವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಕಾರಂಜಾ ನೀರಾವರಿ ಯೋಜನೆಯಿಂದ ಮನೆ ಕಳೆದುಕೊಂಡಿರುವ ರೈತರಿಗೆ ವೈಜ್ಞಾನಿಕ ಪರಿಹಾರ ಕೊಟ್ಟು ನ್ಯಾಯ ಒದಗಿಸಿಕೊಡಬೇಕು. ಹೆಚ್ಚುವರಿ ಭೂಮಿ ಹೋಗದೇ ಪಹಾಣಿಯಲ್ಲಿ ಕಾರಂಜಾ ನೀರಾವರಿ ಎಂದು ನಮೂದಿಸುವುದನ್ನು ನಿಲ್ಲಿಸಬೇಕು. ಎಲ್ಲ ರೈತರಿಗೆ ತಾರತಮ್ಯ ಮಾಡದೇ ಒಂದೇ ರೀತಿ ಪರಿಹಾರ ಕೊಡಬೇಕು. ಸತತವಾಗಿ ಬೆಳೆನಷ್ಟ ಅನುಭವಿಸುತ್ತಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಖಾಸೀಂ ಅಲಿ, ಗುಂಡೇರಾವ ಕುಲಕರ್ಣಿ, ಖಾನ್‌ಸಾಬ್, ವೀರಾರೆಡ್ಡಿ, ವಿಠಲರೆಡ್ಡಿ, ಶಾಂತಮ್ಮ ಮೂಲಗೆ, ಪ್ರಕಾಶ ಅಲ್ಮಾಜೆ, ನಾಗೇಂದ್ರಪ್ಪ ತರನಳ್ಳಿ, ಅನ್ನಪೂರ್ಣ ಬಿರಾದಾರ, ವಿಜಯಕುಮಾರ, ಬಸವರಾಜ ಅಷ್ಟೂರ್, ಕಂಟೆಪ್ಪ ತರನಳ್ಳಿ, ವಿನೋದ ಚಿಂತಾಮಣಿ, ಕಾರ್ತಿಕ ಸ್ವಾಮಿ, ಸತೀಶ ಪಾಟೀಲ, ಶಂಕರ ಮನ್ನಳ್ಳಿ, ನಾಗಶೆಟ್ಟಿ ಹಚ್ಚಿ, ಚಂದ್ರಶೇಖರ ಪಾಟೀಲ, ಶಿವರಾಜ ಚಿಮ್ಮಾ ಇದ್ದರು.