Advertisement

ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ

10:58 AM Sep 01, 2018 | |

ವಿಜಯಪುರ: ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಪ್ರಮುಖ ಬಾಳು ಜೇವೂರ, ವಿಜಯಪುರ ಜಿಲ್ಲೆಯ ರೈತರು ಪ್ರತಿವರ್ಷ ಒಂದಿಲ್ಲೊಂದು ಬರದಲ್ಲಿ ಬೆಂದು ಬಳಲುತ್ತಿದ್ದಾರೆ.

ಒಂದು ವರ್ಷ ಅನಾವೃಷ್ಟಿ; ಇನ್ನೊಂದು ವರ್ಷ ಅತಿವೃಷ್ಟಿಯಿಂದ ರೈತರು ಕಂಗಾಲಾಗುತ್ತಿದ್ದಾರೆ. ಈ ವರ್ಷ
ಮುಂಗಾರು ಅಲ್ಪಸ್ವಲ್ಪ ಮಳೆಯಾದ ನಂತರ ರೈತರು ಹೆಸರು, ತೊಗರಿ ಇನ್ನಿತರ ಬೀಜ ಬಿತ್ತನೆ ಮಾಡಿದರು. ಆದರೆ
ಬಹುತೇಕ ಬೀಜ ಮೊಳಕೆಯೊಡೆಯಲು ಸಾಧ್ಯವಾಗಿಲ್ಲ. ಆದರೆ ಕೆಲವೆಡೆ ಮೊಳಕೆಯೊಡೆದ ಬೆಳೆ ಇಂದು ಕಮರುವ ಸ್ಥಿತಿಯಲ್ಲಿದ್ದು, ಈ ಹಂತದಲ್ಲಿ ಮಳೆಯಾಗದೆ ಬೆಳೆಹಾನಿಯಾಗಿದೆ ಎಂದರು.

ಆದರೆ ರೈತರಿಗೆ ಇದುವರೆಗೆ ಯಾವುದೇ ಸಹಾಯ, ಸಹಕಾರ, ಪರಿಹಾರ ಒದಗಿಸದಿರುವುದು ರೈತ ಸಮುದಾಯಕ್ಕೆ ಆಕ್ರೋಶವನ್ನುಂಟು ಮಾಡಿದೆ. ನೀರಿನ ಅಭಾವದಿಂದ ದಾಳಿಂಬೆ, ನಿಂಬೆ, ಬಾರೆಹಣ್ಣು ಹಾನಿಯಾಗಿವೆ. ಇವೆಲ್ಲ ಸಮಸ್ಯೆಗಳಿಂದ ರೈತ ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು.

ಗ್ರಾಮಗಳಲ್ಲಿ ನೀರಿನ ಅಂತರ್ಜಲ ಬತ್ತಿ ಹೋಗಿ ಬಾವಿ, ಬೋರ್‌ ವೆಲ್‌ಗ‌ಳಲ್ಲಿ ನೀರಿಲ್ಲದಂತಾಗುತ್ತಿವೆ. ಮುಂದಿನ ದಿನಗಳಲ್ಲಿ ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುತ್ತದೆ. ಜಾನುವಾರುಗಳಿಗೆ ನೀರು, ಮೇವಿನ ಸಮಸ್ಯೆ ಎದುರಾಗುತ್ತದೆ. ಅದಕ್ಕಾಗಿ ಸರಕಾರ ಈಗಲೇ ಎಚ್ಚೆತ್ತು ಎಲ್ಲ ತಯಾರಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ರೈತರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

Advertisement

ಮುಂಗಾರು ಬರಗಾಲವೆಂದು ಘೋಷಿಸಿ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು, ಉದ್ಯೋಗ ಖಾತ್ರಿ
ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿಪಡಿಸುವುದು, ರೈತರ ಆತ್ಮಹತ್ಯೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವುದು, ಪಡಿತರ ಅಂಗಡಿಗಳಲ್ಲಿ ಜೀವನಾವಶ್ಯಕತೆಗೆ ಅನುಗುಣವಾಗಿ ಎಲ್ಲ ರೀತಿಯ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸಮಪರ್ಕವಾಗಿ ಪೂರೈಸುವುದು, ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ನಿಂಬೆ ಇತ್ಯಾದಿ ಬೆಳೆ ಬದುಕಿಸಲು ಟ್ಯಾಂಕರ್‌ ಮೂಲಕ ನೀರು ಹಾಯಿಸುವ ರೈತರಿಗೆ ಆರ್ಥಿಕ ಸಹಾಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಯಿತು. ಸಂಘಟನೆ ಪ್ರಮುಖ ಭಿ. ಭಗವಾನರೆಡ್ಡಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next