Advertisement

ಸಂಪುಟ ಸಂಕಟ: ಅಧಿವೇಶನದೊಳಗೆ ಸಚಿವಗಿರಿಗೆ ಆಕಾಂಕ್ಷಿಗಳ ಬೇಡಿಕೆ

09:58 AM Jan 01, 2020 | mahesh |

ಬೆಂಗಳೂರು: ಸಂಕ್ರಾಂತಿಗಾದರೂ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುತ್ತಾ ಎಂಬ ಚಿಂತೆಯಲ್ಲಿರುವ ಉಪ ಚುನಾವಣೆಯಲ್ಲಿ ಗೆದ್ದ ನೂತನ ಶಾಸಕರು, ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವಂತೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ.

Advertisement

ವಿಧಾನಮಂಡಲದ ಜಂಟಿ ಅಧಿವೇಶನ ಜ.20ರ ಬದಲಿಗೆ ಫೆ.17ಕ್ಕೆ ಮುಂದೂಡಿರುವುದರಿಂದ ಸಚಿವ ಸಂಪುಟ ವಿಸ್ತ ರಣೆಯೂ ತಡ ವಾಗಬಹುದು ಎಂಬ ಆತಂಕ ಹೊಸ ಶಾಸಕರದ್ದು. ಹೀಗಾಗಿ ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ ಎಂಬ ಒತ್ತಡ ತಂತ್ರಕ್ಕೆ ಸಚಿವಾಕಾಂಕ್ಷಿಗಳು ಮುಂದಾಗಿದ್ದಾರೆ.

ಸಾಧ್ಯವಾದರೆ ಸಂಕ್ರಾಂತಿಯ ದಿನ ಅಥವಾ ಮರುದಿನ ಸಂಪುಟ ವಿಸ್ತರಣೆ ಮಾಡಿ ಎಂದು ಎಸ್‌.ಟಿ. ಸೋಮಶೇಖರ್‌, ಗೋಪಾಲಯ್ಯ, ಭೈರತಿ ಬಸವರಾಜ್‌, ಬಿ.ಸಿ. ಪಾಟೀಲ್‌, ರಮೇಶ್‌ ಜಾರಕಿಹೊಳಿ ಸಹಿತ ಎಲ್ಲ 11 ಶಾಸ ಕರು ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಪ ಚುನಾವಣೆ ಫ‌ಲಿತಾಂಶ ಬಂದ 48 ಗಂಟೆಗಳಲ್ಲಿ ಸಚಿವಗಿರಿ ನೀಡುವ ಭರವಸೆ ನೀಡಿದ್ದೀರಿ. ನಾವೂ ಕಷ್ಟಪಟ್ಟು ಗೆದ್ದು ಬಂದಿದ್ದೇವೆ. ಮತ್ತಷ್ಟೂ ವಿಳಂಬ ಮಾಡಿದರೆ ಹೇಗೆ? ಎಂದು ಅಲವತ್ತುಕೊಂಡಿದ್ದಾರೆ.

ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಮಾಡಿದರೆ ಫೆ.17ರಿಂದ ಅಧಿವೇಶನದ ವೇಳೆಗೆ ನಾವು ನಮ್ಮ ನಮ್ಮ ಇಲಾಖೆಗಳ ಬಗ್ಗೆ ಅಧ್ಯಯನ ಮಾಡಿ ಮುಂದಿನ ಬಜೆಟ್‌ಗೂ ಸಲಹೆ ಸೂಚನೆ ನೀಡಬಹುದು. ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಉಪ ಚುನಾವಣೆಯಲ್ಲಿ ಗೆದ್ದವರಷ್ಟೇ ಅಲ್ಲದೆ ಬಿಜೆಪಿಯಲ್ಲಿ ಸುಳ್ಯ ಶಾಸಕ ಅಂಗಾರ, ಅರವಿಂದ ಲಿಂಬಾವಳಿ, ರಾಮದಾಸ್‌ ಸೇರಿ ಹತ್ತಕ್ಕೂ ಹೆಚ್ಚು ಸಚಿವ ಆಕಾಂಕ್ಷಿಗಳು ಸಂಪುಟ ವಿಸ್ತರಣೆಯಲ್ಲಿ ತಮಗೂ ಅವಕಾಶ ಕಲ್ಪಿಸುವಂತೆ ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ಸಂಪುಟ ಪುನಾರಚನೆ ಸಾಧ್ಯತೆಯೂ ಇರುವುದರಿಂದ ತಮ್ಮನ್ನು ಕೈ ಬಿಡುತ್ತಾರಾ ಎಂಬ ಆತಂಕ ಹಲವು ಹಾಲಿ ಸಚಿವರನ್ನು ಕಾಡುತ್ತಿದೆ.

Advertisement

ಡಿಸಿಎಂ ಹುದ್ದೆ ರದ್ದು ?
ಉಪಮುಖ್ಯಮಂತ್ರಿ ಸ್ಥಾನದ ವಿಚಾರವೂ ಬಿಜೆಪಿಯಲ್ಲಿ ಸ್ವಲ್ಪ ಮಟ್ಟಿಗೆ ಆಂತರಿಕ ಸಂಘರ್ಷಕ್ಕೆ ಕಾರಣವಾಗಿದೆ. ರಮೇಶ್‌ ಜಾರಕಿಹೊಳಿ ಉಪ ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಶ್ರೀರಾಮುಲು ಸಹ ಉಪ ಮುಖ್ಯಮಂತ್ರಿ ಆಕಾಂಕ್ಷಿ ಯಾಗಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಯಾಗಿದ್ದ ಜಗದೀಶ್‌ ಶೆಟ್ಟರ್‌, ಉಪ ಮುಖ್ಯ ಮಂತ್ರಿಗಳಾಗಿದ್ದ ಆರ್‌. ಅಶೋಕ್‌, ಕೆ.ಎಸ್‌. ಈಶ್ವರಪ್ಪ ಸಚಿವರಾಗಿ ಕೆಲಸ ಮಾಡುತ್ತಿದ್ದು ಡಿಸಿಎಂ ಹುದ್ದೆ ಸೃಷ್ಟಿಗೆ ಮೊದಲಿ ನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಹೊಸಬರಿಗೆ ಉಪ ಮುಖ್ಯಮಂತ್ರಿಸ್ಥಾನ ನೀಡಿದರೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಡಿಸಿಎಂ ಹುದ್ದೆ ಯಾರಿಗೂ ಕೊಡದಿರಲು ಹೈಕಮಾಂಡ್‌ ಯೋಚಿಸುತ್ತಿದೆ ಎಂದು ಹೇಳಲಾಗಿದೆ.

ಸಂಪುಟ ಪುನಾರಚನೆ?
ಈಗಿನ ಪ್ರಕಾರ ಸಂಪುಟ ವಿಸ್ತರಣೆ ಮಾಡಿದರೂ ಜಾತಿವಾರು ಹಾಗೂ ಪ್ರದೇಶವಾರು ಅಸಮತೋಲನ ಉಂಟಾಗಬಹುದು. ಹೀಗಾಗಿ ಸಂಪುಟ ವಿಸ್ತರಣೆಗಿಂತ ಪುನಾರಚನೆ ಮಾಡಿ ಒಂದಷ್ಟು ಜನರನ್ನು ಕೈ ಬಿಡುವ ವಿಚಾರವೂ ಚರ್ಚೆಯಲ್ಲಿದೆ. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಮಾತನಾಡಿದಾಗಲೂ ಇದೇ ವಿಷಯ ಚರ್ಚೆಯಾಯಿತು. ಸುಮಾರು ಆರು ಸಚಿವರನ್ನು ಕೈಬಿಟ್ಟು ಪುನಾರಚನೆ ಮಾಡುವ ಸಾಧ್ಯಾಸಾಧ್ಯತೆಗಳ ಬಗ್ಗೆಯೇ ಚರ್ಚಿಸಿ ಪಟ್ಟಿ ಸಿದ್ಧಪಡಿಸಿಕೊಂಡು ದಿಲ್ಲಿಗೆ ಬರುವಂತೆ ತಿಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಸಂಪುಟ ಸಮಸ್ಯೆ ಏನು?
ಬೆಂಗಳೂರಿನಲ್ಲಿ ಈಗಾಗಲೇ ಆರ್‌.ಅಶೋಕ್‌, ಡಾ| ಅಶ್ವತ್ಥನಾರಾಯಣ್‌, ವಿ. ಸೋಮಣ್ಣ, ಸುರೇಶ್‌ಕುಮಾರ್‌ ಸೇರಿ ನಾಲ್ವರು ಸಚಿವರಿದ್ದು ಉಪ ಚುನಾವಣೆ ಯಲ್ಲಿ ಗೆಲುವು ಸಾಧಿಸಿರುವ ಎಸ್‌.ಟಿ. ಸೋಮಶೇಖರ್‌, ಭೈರತಿ ಬಸವರಾಜ್‌, ಗೋಪಾಲಯ್ಯ ಅವರಿಗೆ ಸಚಿವಗಿರಿ ನೀಡ ಬೇಕಾಗಿದೆ. ಜತೆಗೆ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದು ಮುನಿರತ್ನ ಗೆಲುವು ಸಾಧಿಸಿದರೆ ಅವರಿಗೂ ಸಚಿವ ಸ್ಥಾನ ನೀಡಬೇಕು.

ಆಗ ಬೆಂಗಳೂರಿನ ಸಚಿವರ ಸಂಖ್ಯೆ 8ಕ್ಕೆ ಏರುತ್ತದೆ. ಅದೇ ರೀತಿ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಎಂಟು ಮಂದಿ ಲಿಂಗಾಯತ ಸಮುದಾಯದವರು ಸರಕಾರದಲ್ಲಿದ್ದಾರೆ. ಬೆಳಗಾವಿಯಲ್ಲಿ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಸಚಿವರಾಗಿದ್ದಾರೆ. ಈಗ ಉಪ ಚುನಾವಣೆಯಲ್ಲಿ ಗೆಲುವು ಸಾಧಿ ಸಿರುವ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ, ಶ್ರೀಮಂತ ಪಾಟೀಲ್‌ ಅವರಿಗೆ ಸಚಿವ ಸ್ಥಾನ ನೀಡ ಬೇಕಾಗಿದೆ. ಜತೆಗೆ ಉಮೇಶ್‌ ಕತ್ತಿ ಅವರಿಗೂ ಸಚಿವ ಸ್ಥಾನದ ಭರವಸೆ ನೀಡಿ ಸುಮ್ಮನಾಗಿಸಲಾಗಿದೆ. ಅವರಿಗೂ ಸಚಿವ ಸ್ಥಾನ ಕೊಟ್ಟರೆ ಆಗ ಬೆಳಗಾವಿಯಲ್ಲೂ ಆರು ಮಂದಿ ಸಚಿವರಾಗುತ್ತಾರೆ. ಇದು ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿದ್ದು ಪ್ರಾದೇಶಿಕ ಹಾಗೂ ಸಮುದಾಯ ಸಮ ತೋಲನ ಕಾಪಾಡಬೇಕು. ಅದಕ್ಕಾಗಿ ಸಂಪುಟ ವಿಸ್ತರಣೆ ಬದಲು ಪುನಾರಚನೆಯೇ ಸೂಕ್ತ ಎಂಬ ಚಿಂತನೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next