ಮಸ್ಕಿ: ಆಂಧ್ರಪ್ರದೇಶ ಸರಕಾರ ಕೆಲ ಬ್ರಾಂಡಿನ ಚೀಪ್ ಲಿಕ್ಕರ್‌ಗೆ ನಿಷೇಧ ಹೇರಿದ ಬೆನ್ನಲ್ಲೇ ರಾಜ್ಯದ ಚೀಪ್ ಲಿಕ್ಕರ್‌ಗೆ ಆಂಧ್ರದಲ್ಲಿ ಎಲ್ಲಿಲ್ಲದ ಬೇಡಿಕೆ ಬಂದಿದೆ! ನಿತ್ಯ 1 ಕೋಟಿ ಮೊತ್ತಕ್ಕೂ ಮೀರಿದ ವಿವಿಧ ಬ್ರಾಂಡಿನ ಮದ್ಯದ ಬಾಟಲಿಗಳನ್ನು ಇಲ್ಲಿಂದಲ್ಲೇ ಆಂಧ್ರಕ್ಕೆ ಸಾಗಿಸಲಾಗುತ್ತಿದೆ!
ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಮೂರು ಜಿಲ್ಲೆಯ ಕೆಲ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕೇಸ್‌ಗಳ ಅಂಕಿ-ಸಂಖ್ಯೆಯೇ ಈ ಆಘಾತಕಾರಿ ಸಂಗತಿ ಬಯಲು ಮಾಡಿವೆ. ಅಬಕಾರಿ, ಪೊಲೀಸ್ ಇಲಾಖೆ ದಾಳಿಯಿಂದ ಪತ್ತೆಯಾದ ಮದ್ಯದ ಬಾಟಲಿ, ಇವುಗಳ ಮೌಲ್ಯವೇ ಲಕ್ಷಾಂತರ ರೂ.ಗಳಾಗಿದ್ದು, ಇನ್ನು ಇಲಾಖೆಯ ಕಣ್ತಪ್ಪಿಸಿ ಎಷ್ಟೋಂದು ಮದ್ಯ ಸಾಗಿಸಲಾಗಿದೆ? ಎನ್ನುವ ಪ್ರಶ್ನೆಗಳು ಮೂಡಿವೆ.
ಎಲ್ಲಿಂದ ಎಲ್ಲಿಗೆ?: ಆಂಧ್ರಪ್ರದೇಶದ ಆದೋನಿ, ಕರ್ನೂಲ್ ಸೇರಿ ಇತರೆ ಜಿಲ್ಲೆಗಳಿಗೆ ಕೊಪ್ಪಳ ಜಿಲ್ಲೆಯ ಕಾರಟಗಿ, ಕನಕಗಿರಿ, ಗಂಗಾವತಿಯಿಂದಲೇ ಅತ್ಯಧಿಕ ಮದ್ಯ ಸರಬರಾಜದ ಶಂಕೆ ಇದೆ. ವಿಶೇಷವಾಗಿ ಇಲ್ಲಿನ ಓರಿಜನಲ್ ಚಾಯ್ಸಗೆ ಅತ್ಯಧಿಕ ಬೇಡಿಕೆ ಇದ್ದು, ಉಳಿದಂತೆ ಓಟಿ, ಬಿಪಿ, ಐಬಿಯನ್ನೂ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ, ರಾಯಚೂರಿನ ಇಡಪನೂರು ಪೊಲೀಸ್ ಠಾಣೆ ಹಾಗೂ ಸಿರುಗುಪ್ಪ ತಾಲೂಕಿನ ಅಚ್ಚೋಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳೇ ಇದನ್ನು ಬಹಿರಂಗಗೊಳಿಸಿವೆ.
ಇಡಪನೂರು ಪೊಲೀಸ್ ಠಾಣೆಯಲ್ಲಿ ಇದುವರೆಗೂ ಪ್ರತ್ಯೇಕ 7-8 ಕೇಸ್ ದಾಖಲಾಗಿದ್ದು, ಗಂಗಾವತಿಯಿಂದಲೇ ಆಂಧ್ರಕ್ಕೆ ರವಾನಿ ಮಾಡಲಾಗುತ್ತಿತ್ತು ಎನ್ನುವ ಸಂಗತಿ ವಿಚಾರಣೆಯಲ್ಲಿ ಬಯಲಾಗಿತ್ತು. ಇನ್ನು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಇತ್ತೀಚೆಗೆ ಒಂದೇ ಲಾರಿಯಲ್ಲಿ 7 ಲಕ್ಷ ರೂ.ಮೌಲ್ಯದ 190 ಬಾಕ್ಸ್‌ಗಳ ಮದ್ಯವನ್ನು ಜಪ್ತಿ ಮಾಡಲಾಗಿತ್ತು. ಮಾನ್ವಿಯಲ್ಲಿ ಪ್ರತ್ಯೇಕ 3 ಕೇಸ್ ದಾಖಲಾಗಿದ್ದರೆ, ಸಿರುಗುಪ್ಪ ತಾಲೂಕಿನ ಅಚ್ಚೋಳಿ ಠಾಣೆಯಲ್ಲಿ ಸುಮಾರು 18ಕ್ಕೂ ಹೆಚ್ಚು ಪ್ರತ್ಯೇಕ ಕೇಸ್ ಗಳು ಅಕ್ರಮ ಮದ್ಯ ಸಾಗಣೆಯದ್ದಾಗಿವೆ.
ಬಾರ್‌ಗಳಿಂದಲೇ ಲಿಂಕ್: ಇದು ಕೇವಲ ಪೊಲೀಸ್, ಅಬಕಾರಿ ಇಲಾಖೆಯ ಲೆಕ್ಕಕ್ಕೆ ಸಿಕ್ಕ ಅಂಕಿ-ಸಂಖ್ಯೆ ಮಾತ್ರ. ಇದನ್ನು ಮೀರಿಯೂ ನಿತ್ಯ 1 ಕೋಟಿ ಮೌಲ್ಯದ ಮದ್ಯವನ್ನು ಕೊಪ್ಪಳ, ರಾಯಚೂರಿನಿಂದ ಸಾಗಣೆ ಮಾಡಲಾಗುತ್ತಿದೆ ಎನ್ನುವ ಸಂಗತಿಯನ್ನು ಅಬಕಾರಿ ಇಲಾಖೆಯ ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ. ಕೊಪ್ಪಳ, ರಾಯಚೂರು ಜಿಲ್ಲೆಯ ಹಲವು ಬಾರ್‌ಗಳಿಂದಲೇ ನಿತ್ಯ ಲಾರಿ, ಕಂಟೇನರ್, ಕಾರುಗಳ ಮೂಲಕ ಲೋಕಲ್ ಮದ್ಯವನ್ನು ಸದ್ದಿಲ್ಲದೇ ಸಾಗಿಸುತ್ತಿದೆ. ವಿಶೇಷವಾಗಿ ಮಸ್ಕಿ, ಸಿಂಧನುರು, ಕಾರಟಗಿ, ಗಂಗಾವತಿ ಹಾಗೂ ಕನಕಗಿರಿಯ ಹಲವು ಬಾರ್ ಗಳಿಂದ ಹೀಗೆ ಅಕ್ರಮ ಮದ್ಯ ಸಾಗಿಸಲಾಗುತ್ತಿದೆ.
ಅಧಿಕಾರಿಗಳ ಕಣ್ತಪ್ಪಿಸಲು ರಾಜ್ಯ ಹೆದ್ದಾರಿ ಬಿಟ್ಟು ಒಳಮಾರ್ಗಗಳನ್ನು ಆಯ್ದುಕೊಳ್ಳಲಾಗಿದೆ. ಕಾರಟಗಿ, ಕನಕಗಿರಿ, ಗಂಗಾವತಿ, ಸಿಂಧನೂರಿನಿಂದ ಸಾಗಿಸುವ ಮದ್ಯವನ್ನು ಸಿಂಗಾಪುರ, ದಡೇಸೂಗೂರು, ಕೆಂಗಲ್ ಮಾರ್ಗವಾಗಿ ಆಂಧ್ರದ ಗಡಿಗೆ ತಲುಪಿಸಲಾಗುತ್ತಿದೆ. ಮಸ್ಕಿಯಿಂದಲೂ ಜವಳಗೇರಾ, ಚಿಕಲಪರ್ವಿ ಮಾರ್ಗವಾಗಿ ಆಂಧ್ರದ ಗಡಿಯತ್ತ ಇಲ್ಲಿನ ಮದ್ಯ ಸಾಗಿಸಲಾಗುತ್ತಿದೆ.
ಅಕ್ರಮವಾಗಿ ಆಂಧ್ರಕ್ಕೆ ಮದ್ಯ ಸಾಗಣೆ ಮಾಡುತ್ತಿರುವ ಬಗ್ಗೆ ನಮಗೆ ದೂರು ಬಂದಾಗಲೆಲ್ಲ ದಾಳಿ ಮಾಡಿ ಮದ್ಯವನ್ನು ಜಪ್ತಿ ಮಾಡಿದ್ದೇವೆ. ನಿತ್ಯ ಸರಬರಾಜು ಆಗುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.
ಲಕ್ಷ್ಮೀ, ಅಬಕಾರಿ ಡಿಸಿ,
ರಾಯಚೂರು.
ಪ್ರಭಾವಿಗಳ ಕೈ
ಇಲ್ಲಿನ ಚೀಪ್ ಲಿಕ್ಕರ್ ಆಂಧ್ರಕ್ಕೆ ರವಾನಿಸುವ ಹಿಂದೆ ಪ್ರಭಾವಿಗಳ ಕೈ ಇರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಅಬಕಾರಿ ಇಲಾಖೆಯೂ ಒಳಗೊಳಗೆ ಸಹಕಾರ ನೀಡುತ್ತಿದೆ ಎನ್ನುವ ಗುಮಾನಿ ಇದೆ. ವಿಶೇಷವಾಗಿ ಗಂಗಾವತಿ, ಕಾರಟಗಿ, ಕನಕಗಿರಿಯಿಂದಲೇ ಅತ್ಯಧಿಕ ಮದ್ಯವನ್ನು ಆಂಧ್ರಕ್ಕೆ ಸಾಗಿಸಲಾಗುತ್ತಿದ್ದು, ಕೆಲ ಬಾರ್‌ಗಳಲ್ಲಿ ಚೀಪ್ ಲಿಕ್ಕರ್ ಕೌಂಟರ್ ಸೇಲ್‌ಗಿಂತ ಅಧಿ ಕ ಅಕ್ರಮ ಸಾಗಣೆಗೆ ಬಳಕೆಯಾಗುತ್ತಿದೆ. ಈ ಸಂಗತಿ ಗೊತ್ತಿದ್ದರೂ ರಾಯಚೂರು, ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದು ಅನುಮಾನ ಮೂಡಿಸಿದೆ.
*ಮಲ್ಲಿಕಾರ್ಜುನ ಚಿಲ್ಕರಾಗಿ