Advertisement

ವಸತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹ

03:12 PM Apr 21, 2017 | Team Udayavani |

ಧಾರವಾಡ: ವೃತ್ತಿಪರ ವಸತಿ ನಿಲಯ ಖಾಸಗಿ ಕಟ್ಟಡದಲ್ಲಿದ್ದು, ಕಟ್ಟಡದ ಮಾಲೀಕರು ವಿದ್ಯಾರ್ಥಿಗಳನ್ನು ಹೊರಗಡೆ ಹಾಕಿದ್ದಾರೆ. ಹೀಗಾಗಿ ವಸತಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. 

Advertisement

ಸುಮಾರು ಅರ್ಧ ಗಂಟೆಗೂ ಅಧಿಕ ಹೊತ್ತು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ವೃತ್ತಿಪರ ವಸತಿ ನಿಲಯ ಖಾಸಗಿ ಕಟ್ಟಡದಲ್ಲಿದ್ದು, ಕಟ್ಟಡದ ಮಾಲೀಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ತಾಂತ್ರಿಕ ಸಮಸ್ಯೆಗಳಿಂದ ನಿಲಯವನ್ನು ಏಕಾಏಕಿ ಸ್ಥಳಾಂತರಿಸಲಾಗಿದೆ ಎಂದು ದೂರಿದರು. 

ಈ ಮೊದಲು ವಿದ್ಯಾರ್ಥಿ ನಿಲಯದ ಎಲ್ಲ ವಿದ್ಯಾರ್ಥಿಗಳು ಸಭೆ ಸೇರಿದಾಗ ಪರೀಕ್ಷೆ ಇರುವ ಕಾರಣದಿಂದ ವಿದ್ಯಾರ್ಥಿ ನಿಲಯದಅಧಿಕಾರಿಗಳು ಮಾಲೀಕರೊಂದಿಗೆ ಚರ್ಚಿಸಿ ಮೇ 31ರವರೆಗೂ ನಿಲಯದಲ್ಲಿ ಇರಲು ಅನುಮತಿ ಪಡೆದಿದ್ದರು. ಇದಕ್ಕೆ ಮಾಲೀಕರು ಸಹ ಒಪ್ಪಿಗೆ ಸೂಚಿಸಿದ್ದರು.

ಈಗ ಏಕಾಏಕಿ ಸ್ಥಳಾಂತರಿಸಲು ಕಾರಣವೇನು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು. ವೃತ್ತಿಪರ ವಸತಿ ನಿಲಯದಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ತರಾತುರಿಯಲ್ಲಿ ಕಡಿತಗೊಳಿಸಿ ಏಕಾಏಕಿ ನಿಲಯವನ್ನು ಆದರ್ಶ-1 ವಿದ್ಯಾರ್ಥಿ ನಿಲಯಕ್ಕೆ ವರ್ಗಾಯಿಸಲಾಗಿದೆ ಎಂದು ದೂರಿದ ವಿದ್ಯಾರ್ಥಿಗಳು, ಮೇ 31ರವರೆಗೆ ವಾರ್ಷಿಕ ಪರೀಕ್ಷೆಗಳಿದ್ದು, ಅವು ಮುಗಿಯುವ ತನಕ ನಿಲಯದಲ್ಲಿರಲು ವ್ಯವಸ್ಥೆ ಮಾಡಬೇಕು.

ಇದೀಗ ಆದರ್ಶ-1ರ ನಿಲಯಕ್ಕೆ ವರ್ಗಾಯಿಸಿದ ವೃತ್ತಿಪರ ವಸತಿ ನಿಲಯದ 100 ವಿದ್ಯಾರ್ಥಿಗಳಿಗೆ ಸುಮಾರು 18-20 ಪ್ರತ್ಯೇಕ ಕೊಠಡಿ ಕೊಡಬೇಕು. ಆದರ್ಶ ನಿಲಯದ ವಿದ್ಯಾರ್ಥಿಗಳು ನಮ್ಮ ನಿಲಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿದ್ದು, ಅಧಿಕಾರಿಗಳು ತಕ್ಷಣ ಅಂತಹ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

Advertisement

ಶಾರದಾ ಕೋಲ್ಕರ್‌ ಮನವಿ: ವೃತ್ತಿಪರ ವಸತಿ ನಿಲಯದ ಬೋರವೆಲ್‌ ದುರಸ್ತಿಯಲ್ಲಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಮುಖ್ಯವಾಗಿ ಆ ಕಟ್ಟಡ ತೆರವುಗೊಳಿಸಲು ನ್ಯಾಯಾಂಗದ ಆದೇಶವಿದೆ. ತಿಂಗಳ ಮಟ್ಟಿಗೆ ಆದರ್ಶ-1ರ ನಿಲಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ.

ಪರೀಕ್ಷೆ ಮುಗಿದು ವಾಪಸ್‌ ಬಂದ ನಂತರ ಹೊಸ ಕಟ್ಟಡದ ವ್ಯವಸ್ಥೆ ಮಾಡಲಾಗುತ್ತದೆ. ಉಪಾಹಾರ ಬಿಟ್ಟು ಪ್ರತಿಭಟಿಸುವ ಅಗತ್ಯವಿಲ್ಲ. ತಯಾರಿಸಿದ ಆಹಾರ ಹಾಳು ಮಾಡುವುದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಶಾರದಾ ಕೋಲ್ಕಾರ್‌ ತಿಳಿಸಿದರು. 

ಆದರ್ಶ ನಿಲಯದಲ್ಲಿ ವೃತ್ತಿಪರ ನಿಲಯದ ವಿದ್ಯಾರ್ಥಿಗಳಿಗೆ 18-20 ಕೊಠಡಿ ನೀಡಿದರೆ ಮಾತ್ರ ವಸತಿ ಉಳಿಯುವುದಾಗಿ ತಿಳಿಸಿದಾಗ ಸಮ್ಮತಿ ಸೂಚಿಸಿದ ಅಧಿಕಾರಿ ಕೋಲ್ಕಾರ್‌, ಆದರ್ಶ ನಿಲಯದ ವಾರ್ಡ್‌ನ ಮೇದಾರ ಅವರಿಗೆ 40 ಕೊಠಡಿಗಳ ಪೈಕಿ 18 ಕೊಠಡಿ ವೃತ್ತಿಪರ ವಿದ್ಯಾರ್ಥಿಗಳಿಗೆ ನೀಡುವಂತೆ ಸೂಚನೆ ನೀಡಿದರು. ಎಲ್ಲ ವಿದ್ಯಾರ್ಥಿಗಳು ಆದರ್ಶ ನಿಲಯಕ್ಕೆ ವರ್ಗವಾಗುವಂತೆ ತಿಳಿಸಿದಾಗ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. 

Advertisement

Udayavani is now on Telegram. Click here to join our channel and stay updated with the latest news.

Next