ಚಿತ್ರದುರ್ಗ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬೇಸಿಗೆಯಲ್ಲಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸದೇ ಇರುವ ಕಾರಣ ಫಸಲುಗಳು ಒಣಗಿ ನಷ್ಟವಾಗುತ್ತಿವೆ. ತೋಟಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ರೈತರು ಕೈಚೆಲ್ಲುವಂತಹ ಪರಿಸ್ಥಿತಿಯನ್ನು ಬೆಸ್ಕಾಂ ಸಿಬ್ಬಂದಿಗಳು ಸೃಷ್ಟಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2019-2020 ಹಾಗೂ 2020-2021ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಅಪಾರ ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಪರಿಹಾರ ಬೆಳೆ ವಿಮೆ ಪಾವತಿಸಿದ ರೈತರಿಗೆ ವಿತರಣೆಯಾಗಿಲ್ಲ. ಅಂತಹವರಿಗೆ ಇನ್‌ಫುಟ್ ಸಬ್ಸಿಡಿಯನ್ನು ತೆಲಂಗಾಣ ಸರ್ಕಾರದ ಮಾದರಿಯಲ್ಲಿ ನೀಡಬೇಕು. ಕೃಷಿ ಪರಿಕರಗಳ ಮೇಲಿನ ಜೆಎಸ್‌ಟಿ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಮಾಡಬೇಕು. ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಟೆಂಡರ್ ಆದ ಕಂಪನಿಗಳಿಗೆ ಹಣ ಮಂಜೂರು ಮಾಡಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು ಮತ್ತು ಭೂಮಿ ನೀಡಿರುವ ರೈತರಿಗೆ ಕೂಡಲೇ ಪರಿಹಾರದ ಹಣವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.
ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದ್ದು, ರೈತರು ಜೀವನ ನಡೆಸಲು ಸಾಧ್ಯವಾಗದ ಕಾರಣ ಬೆಲೆ ಏರಿಕೆ ನಿಯಣತ್ರಿಸಬೇಕು. ರಸಗೊಬ್ಬರ, ಬೀಜ, ಕ್ರಿಮಿನಾಶಕ, ಬೆಲೆ ಏರಿಕೆಯಾಗಿದ್ದು ರಿಯಾಯಿತಿ ದರದಲ್ಲಿ ವಿತರಣೆ ಮಾಡಬೇಕು. ಭೂಸಾಗುವಳಿ ಮಾಡುತ್ತಿರುವ ರೈತರಿಗೆ ಆಕ್ರಮ-ಸಕ್ರಮ ಯೋಜನೆಯಡಿ ವಿಳಂಬ ಮಾಡದೇ ಭೂ ಸಾಗುವಳಿ ಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ, ಕೆ.ಸಿ. ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಎಂ.ಆರ್. ಪುಟ್ಟಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ಚಂದ್ರಪ್ಪ, ರವಿ ಕೋಗುಂಡೆ, ರವಿ, ಡಿ. ಮಲ್ಲಿಕಾರ್ಜುನ, ಶಿವಕುಮಾರ್, ರವಿ ಮೊಳಕಾಲ್ಮೂರು, ಅಣ್ಣಪ್ಪ, ವಿರುಪಾಕ್ಷಪ್ಪ ಮತ್ತಿತರರು ಭಾಗವಹಿಸಿದ್ದರು.
ಸರ್ಕಾರದಿಂದ ರೈತರ ನಿರ್ಲಕ್ಷ್ಯ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ರೈತರನ್ನು ನಿರ್ಲಕ್ಷಿಸಿವೆ ರೈತ ವಿರೋಧಿ ಆಡಳಿತ ನಡೆಸುತ್ತಾ ರೈತರಿಗೆ ಮಾರಕವಾಗುವ ನೀತಿಗಳನ್ನು ಜಾರಿ ಮಾಡುವ ಮೂಲಕ ರೈತರನ್ನು ನಾಶ ಮಾಡಲು ಹೊರಟಿದ್ದಾರೆ. ಕರ್ನಾಟಕದಲ್ಲಿ ಭತ್ತ, ರಾಗಿ, ಜೋಳ, ಮುಸುಕಿನ ಜೋಳ ಇತ್ಯಾದಿ ದವಸ ಧಾನ್ಯಗಳನ್ನು ಎಂಎಸ್‌ಪಿ ಬೆಲೆಗಿಂತಲೂ ಕಡಿಮೆ ಬೆಲೆಗೆ ರೈತರಿಂದ ಖರೀದಿಸಿ ಲೂಟಿ ಮಾಡಲಾಗುತ್ತಿದೆ. ಸರ್ಕಾರ ಖರೀದಿ ಕೇಂದ್ರಗಳ ಮುಖಾಂತರ ಖರೀದಿ ಮಾಡುತ್ತಿರುವ ರಾಗಿ ಮತ್ತು ಭತ್ತವನ್ನು ಸಂಪೂರ್ಣವಾಗಿ ಖರೀದಿಸದೆ ಮೋಸ ಮಾಡುತ್ತಾ ಕನಿಷ್ಠ ಬೆಂಬಲ ಬೆಲೆ ನೀತಿಗೆ ಅರ್ಥವಿಲ್ಲದಂತೆ ಮಾಡಿದೆ. ಇದರಿಂದ ರೈತರು ಬಂಡವಾಳವನ್ನು ವಾಪಸ್ ಪಡೆಯಲಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.