ಕುಷ್ಟಗಿ: ಇಲ್ಲಿನ ಪಶು ಪಾಲನೆ ಮತ್ತು ಪಶು ಸೇವೆ ಇಲಾಖೆಯಲ್ಲಿನ 150 ಟನ್ ಮೇವಿನ ಬೀಜ ವಿತರಿಸದೇ ಕಾಳಸಂತೆಯಲ್ಲಿ ಮಾರಾಟದ ಹಿನ್ನೆಲೆಯಲ್ಲಿ ತಪ್ಪಿತಸ್ಥ ಪ್ರಭಾರಿ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಳ್ಳದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಪಂ ಕೆಡಿಪಿ ಸಭೆ ನಾಮನಿರ್ದೇಶಿತ ಸದಸ್ಯ ಕಂದಕೂರಪ್ಪ ವಾಲ್ಮೀಕಿ ನೇತೃತ್ವದಲ್ಲಿ ರೈತರು, ಇಲ್ಲಿನ ಪಶು ಪಾಲನೆ ಮತ್ತು ಪಶು ಸೇವೆ ಇಲಾಖೆಗೆ ಮುತ್ತಿಗೆ ಹಾಕಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಳ್ಳದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಕಂದಕೂರಪ್ಪ ವಾಲ್ಮೀಕಿ, ಪ್ರಕರಣ ಬೆಳಕಿಗೆ ಬಂದು 17 ದಿನ ಗತಿಸಿದೆ. ಮೇವು ಬೀಜ ಯೋಜನೆ ಹಳ್ಳ ಹಿಡಿಸಿದ ಆರೋಪ ಎದುರಿಸುತ್ತಿರುವ ಪ್ರಭಾರಿ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಳ್ಳದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಳ್ಳದ ಅವರ ಮೂಲ ಸ್ಥಾನ ಗಂಗಾವತಿ ತಾಲೂಕು ಶ್ರೀರಾಮನಗರಕ್ಕೆ ವರ್ಗಾಯಿಸಿ ತನಿಖೆ ನಡೆಸಬೇಕು. ಅದುಬಿಟ್ಟು ತಪ್ಪಿತಸ್ಥ ಅಧಿಕಾರಿಯನ್ನು ಮುಂದಿಟ್ಟುಕೊಂಡು ತನಿಖೆ ನಡೆಸಬಾರದು. ಒಂದು ವೇಳೆ ತನಿಖೆ ನಡೆಸಿದರೆ ಸಾಕ್ಷ ನಾಶ ಮಾಡುವ ಸಾಧ್ಯತೆಗಳಿವೆ. ಈ ಪ್ರಕರಣ ಮುಚ್ಚಿ ಹಾಕಿ ಏನೂ ನಡೆದಿಲ್ಲ ಎನ್ನುವಂತೆ ದಾಖಲೆ ಸೃಷ್ಟಿಸುತ್ತಿದ್ದಾರೆ. ಆಫ್ರಿಕ್‌ನ ಟಾಲ್ ಮೆಕ್ಕೆಜೋಳದ ಮೇವಿನ ಬೀಜದ ಕಿಟ್‌ಗಳ ಇನ್‌ವೈಸ್‌ಗೆ ಸಹಿ ಮಾಡದ ಉಪ ಕೇಂದ್ರದ ಮೂವರು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದು, ಅವರ ವಿರುದ್ಧ ಕ್ರಮಕ್ಕೆ ಷಡ್ಯಂತ್ರ ರೂಪಿಸಿರುವುದು ಗೊತ್ತಾಗಿದೆ. ಈ ಪ್ರಕರಣದಿಂದ ಸಹಿ ಮಾಡದ ಅಧಿಕಾರಿಗಳಿಗೆ ಅನ್ಯಾಯವಾಗುವ ಸಾಧ್ಯತೆಗಳಿವೆ. ಪ್ರಭಾರಿ ಸಹಾಯಕ ನಿರ್ದೇಶಕರ ಒತ್ತಾಯದ ಮೇರೆಗೆ ಬಹುತೇಕ ಅಧಿಕಾರಿಗಳು ಸಹಿ ಮಾಡಿ ಇಕ್ಕಟ್ಟಿಗೆ ಸಿಲುಕಿದ್ದು, ಪ್ರಕರಣದ ಸತ್ಯಾಸತ್ಯತೆಗೆ ಕೂಡಲೇ ಈ ಅಧಿಕಾರಿಯನ್ನು ಮೂಲ ಸ್ಥಳಕ್ಕೆ ವರ್ಗಾಯಿಸುವುದು ಸೂಕ್ತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಹಗರಣ ತರಲಾಗುತ್ತಿದ್ದು, ಮುಂದಿನ ಜಿಪಂ ಸಾಮಾನ್ಯ ಸಭೆಯೊಳಗೆ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಶಂಕ್ರಯ್ಯ ಅಬ್ಬಿಗೇರಿ ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ ರೈತರಿಗಾಗಿ ಸರ್ಕಾರ ಮೇವಿನ ಬೀಜ ಪೂರೈಸಿದರೆ, ಅದನ್ನು ರೈತರಿಗೆ ಕೊಡದೇ ಮಾರಾಟ ಮಾಡಿದ್ದಾರೆ. ಕೆಲವು ಸಂಘಟನೆ, ಆರ್ ಟಿಐ ಕಾರ್ಯಕರ್ತರನ್ನು ತೆಪ್ಪಗೆ ಇರುವಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಗುಮಗೇರಿ ಗ್ರಾಪಂ ಮಾಜಿ ಸದಸ್ಯ ಉಮೇಶ, ವೀರಭದ್ರಯ್ಯ ಸೂಡಿ, ನಾಗರಾಜ ನಾಯಕಮ ಸದ್ದಾಂ ಗುಮಗೇರಿ, ಖಾಜಾಸಾಬ್ ತೆಳಗಡಿಮನಿ, ಶರಣಗೌಡ ಪಾಟೀಲ, ಜಗದೀಶ ಕಂದಕೂರು, ಈರಪ್ಪ ಮಡಿವಾಳ ಇದ್ದರು.