Advertisement

ಕಾದಂಬರಿ, ಅಧ್ಯಯನ ಪುಸ್ತಕಕ್ಕೆ ಬೇಡಿಕೆ

10:40 PM Jan 24, 2020 | mahesh |

ಸುಳ್ಯ: ಡಿಜಿಟಲ್‌ ಯುಗದಲ್ಲೂ ಜನರಲ್ಲಿ ಓದುವ ಆಸಕ್ತಿ ಕಡಿಮೆ ಆಗಿಲ್ಲ ಎನ್ನುತ್ತಿದೆ ಗ್ರಂಥಾಲಯದ ವಸ್ತು ಸ್ಥಿತಿ. ಸುಳ್ಯ ನಗರದ ಗ್ರಂಥಾಲಯದಲ್ಲಿ ಸುತ್ತಾಟ ನಡೆಸಿದ ಸಂದರ್ಭ ಕಂಡು ಬಂದ ಚಿತ್ರಣವಿದು. ಕಳೆದ ಐದು ವರ್ಷದ ಅವಧಿಯಲ್ಲಿ ಓದುಗರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿಲ್ಲವಾದರೂ, ಕಡಿಮೆಯಂತೂ ಆಗಿಲ್ಲ. ಓದುವ ಆಸಕ್ತಿ ಬತ್ತಿಲ್ಲ. ಅಭಿರುಚಿ ಬದಲಾಗಿರುವುದು ಕಂಡು ಬರುತ್ತದೆ.

Advertisement

ಪುಸ್ತಕಕ್ಕೆ ಬೇಡಿಕೆ
ಸಾಯಿಸುತೆ, ರಾಧಾದೇವಿ ಹೀಗೆ ಚಿರಪರಿಚಿತ ಬರಹಗಾರರ ಕಾದಂಬರಿಗಳಿಗೆ ಬೇಡಿಕೆ ಹೆಚ್ಚಿದೆ. ಪದವಿ, ಸ್ನಾತಕೋತ್ತರ ಅಥವಾ ಇತರ ಅಧ್ಯಯನಕ್ಕೆ ಪೂರಕ ಪುಸ್ತಕ ಪಡೆಯಲು ಬರುವವರು ಇದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ ಪತ್ರಿಕೆ ಓದಲು ಗ್ರಂಥಾಲಕ್ಕೆ ಬೆಳಗ್ಗೆ ಮತ್ತು ಸಂಜೆ ಬರುತ್ತಾರೆ. ತಾಲೂಕಿನ ಹೆಸರಾಂತ ಬರಹಗಾರರ ಪುಸ್ತಕದ ಜತೆಗೆ ಎಸ್‌.ಎಲ್‌. ಭೈರಪ್ಪ, ರವಿ ಬೆಳೆಗೆರೆ ಮೊದಲಾದವರ ಕೃತಿಗಳಿಗೆ ಬೇಡಿಕೆ ಇದೆ. ಕಚೇರಿಗೆ ಬಂದು ಕುಳಿತು ಓದುವ ವರ್ಗಕ್ಕಿಂತ ಕೊಂಡು ಹೋಗಿ ಓದುವವರೇ ಹೆಚ್ಚಾಗಿದ್ದಾರೆ. ಶುಲ್ಕ ಪಾವತಿಸುವ ಪ್ರತಿ ಸದಸ್ಯನಿಗೆ 16 ದಿವಸದವರೆಗೆ ಪುಸ್ತಕ ನೀಡಲಾಗುತ್ತದೆ. 1ರಿಂದ 3 ಪುಸ್ತಕದ ಮಿತಿ. 100 ರಿಂದ 200 ರೂ. ಶುಲ್ಕವಿದೆ.

50 ವರ್ಷಕ್ಕೂ ಮಿಕ್ಕಿದ ಇತಿಹಾಸ
1968ರಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ಸುಳ್ಯಕ್ಕೆ ಶಾಖಾ ಗ್ರಂಥಾಲಯ ಮಂಜೂರುಗೊಂಡಿತ್ತು. ಆರಂಭದ 30 ವರ್ಷಗಳ ಕಾಲ ಸಿ.ಎ. ಬ್ಯಾಂಕ್‌ ನೀಡಿದ ಉಚಿತ ಕಟ್ಟಡದಲ್ಲಿ ಕಾರ್ಯನಿರ್ವಹಿಸಿ 1998ರಲ್ಲಿ ನಗರ ಪಂಚಾಯತ್‌ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. 2013ರಲ್ಲಿ ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭಿಸಿತು. ಎರಡು ಕೊಠಡಿ ಇರುವ ಗ್ರಂಥಾಲಯದಲ್ಲಿ 45 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. 3,500ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಮೂವರು ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ 9ರಿಂದ ಸಂಜೆ 7ರ ತನಕ ಕಚೇರಿ ತೆರೆದಿರುತ್ತದೆ.

ಬೆಳಗ್ಗೆ, ಸಂಜೆ ಭೇಟಿ
ನಗರದ ನಿವಾಸಿಗಳು ಹೆಚ್ಚಾಗಿ ಬರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಸುಳ್ಯ ಶಾಖೆಯಲ್ಲಿ ದಿನಂಪ್ರತಿ 30ಕ್ಕೂ ಅಧಿಕ ಮಂದಿ ಪುಸ್ತಕ ಓದಲು ಅಥವಾ ಪಡೆದುಕೊಳ್ಳಲು ಬರುತ್ತಾರೆ ಎನ್ನುತ್ತಿದೆ ಅಂಕಿ ಅಂಶ. ಅದು ಬೆಳಗ್ಗೆ ಮತ್ತು ಸಂಜೆ ವೇಳೆ ಅಧಿಕ. 15 ವರ್ಷದ ಹಿಂದೆ ಇದರ ಸಂಖ್ಯೆ ಹೆಚ್ಚಿದ್ದರೂ, ಆಗ ಗ್ರಾ.ಪಂ.ಗಳಲ್ಲಿ ಗ್ರಂಥಾಲಯ ಇರಲಿಲ್ಲ. ಈಗ ಆ ವ್ಯವಸ್ಥೆ ಇರುವ ಕಾರಣ ಕೆಲವರು ಅತ್ತ ಕಡೆ ಚದುರಿದ್ದಾರೆ. ಹಾಗಾಗಿ ಸಂಖ್ಯೆ ಕಡಿಮೆ ಎನ್ನಲು ಸಾಧ್ಯವಿಲ್ಲ ಎನ್ನುತ್ತಾರೆ ಗ್ರಂಥಾಲಯದ ಸಿಬಂದಿ ಪ್ರಶಾಂತ್‌.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next