Advertisement

ಗುತ್ತಿಗೆ ಪದ್ಧತಿ ಕೈಬಿಡಲು ಆಗ್ರಹ

02:06 PM Jul 26, 2017 | Team Udayavani |

ರಾಯಚೂರು: ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆಯ ಸಿ ಮತ್ತು ಡಿ ಗ್ರೂಪ್‌ ನೌಕರರ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಬೇಕು ಹಾಗೂ ಹೈಕೋರ್ಟ್‌ ನೀಡಿದ ಆದೇಶದ ಪ್ರಕಾರ ಕಾರ್ಮಿಕರನ್ನು ಸೇವೆಯಲ್ಲಿ ಮುಂದುವರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕ ಸಂಘದ (ಟಿಯುಸಿಐ ಸಂಯೋಜಿತ) ಸದಸ್ಯರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

Advertisement

ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಧರಣಿ ಕುಳಿತ ಕಾರ್ಮಿಕರು ಜಿಪಂ ಸಿಇಒಗೆ ಮನವಿ ಸಲ್ಲಿಸಿದರು. ಈ ಎರಡು ಇಲಾಖೆ ಅಧಿಕಾರಿಗಳು ಹೊರಗುತ್ತಿಗೆ ಏಜೆನ್ಸಿಗಳಿಗೆ ನೌಕರರನ್ನು ಸರಬರಾಜು ಮಾಡಲು ಅಧಿಸೂಚನೆ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಸೇವೆಯಲ್ಲಿರುವ ಕಾರ್ಮಿಕರಿಗೆ ತೊಂದರೆ ನೀಡಲಾಗುತ್ತಿದೆ. ವಸತಿ ನಿಲಯಗಳಲ್ಲಿ 15ರಿಂದ 20 ವರ್ಷಗಳಿಂದ ಕಾರ್ಮಿಕರು
ದುಡಿಯುತ್ತಿದ್ದಾರೆ. ಇವರ್ಯಾರು ಹೊರಗುತ್ತಿಗೆ ಆಧಾರದಲ್ಲಿ  ಕೆಲಸಕ್ಕೆ ಸೇರಿಲ್ಲ. ಇವರನ್ನು ಯಾವುದೇ ಹೊರಗುತ್ತಿಗೆ ಏಜೆನ್ಸಿ ಸರಬರಾಜು ಮಾಡಿಲ್ಲ. ಈ ವಿಚಾರದಲ್ಲಿ ಕಲಬುರಗಿ ಹೈಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದ್ದು, ಹೊರಗುತ್ತಿಗೆಗೆ ಸಂಬಂಧಿಸಿ ಹೊರಡಿಸಿದ ಅಧಿಸೂಚನೆಗೆ ಜೂ.27ರಂದು ತಡೆ ನೀಡಿದೆ. ಮುಖ್ಯವಾಗಿ ಈಗಿರುವ ಕಾರ್ಮಿಕರಿಗೆ ತೊಂದರೆ ನೀಡದಂತೆ ಉಲ್ಲೇಖೀಸಿದೆ. ಆದರೆ, ಅಧಿಕಾರಿಗಳ ನಡೆಯಿಂದ ಕಾರ್ಮಿಕರು ಅತಂತ್ರಕ್ಕೆ ಸಿಲುಕಿದ್ದು, ಹೊರಗುತ್ತಿಗೆ ಅನುಷ್ಠಾನವಾದರೆ ಕಾರ್ಮಿಕರು ಸೇವಾ ಹಿರಿತನ ಕಳೆದುಕೊಳ್ಳಬೇಕಾಗುತ್ತದೆ ಎಂದರು. 

ಸರ್ಕಾರ ಹೊರಗುತ್ತಿಗೆ ಪದ್ಧತಿ ಅನುಷ್ಠಾನಗೊಳಿಸುವ ಮೂಲಕ 173 ವಸತಿ ನಿಲಯಗಳ 1,300ಕ್ಕೂ ಅಧಿಕ ಕಾರ್ಮಿಕರನ್ನು ಅತಂತ್ರಕ್ಕೆ ದೂಡುತ್ತಿದೆ. ಸರ್ಕಾರ ಕೂಡಲೇ ಅ ಧಿಸೂಚನೆ ಹಿಂಪಡೆಯಬೇಕು. ಹೊರಗುತ್ತಿಗೆ ಟೆಂಡರ್‌ ಕೂಡಲೇ ಕೈಬಿಟ್ಟು ಹಾಲಿ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಸಮಾನ ದುಡಿಮೆಗೆ ಸಮಾನ ವೇತನ, ಬಾಕಿ ವೇತನ
ಪಾವತಿ, 12 ತಿಂಗಳ ವೇತನ ಪಡೆದು ಕಾರ್ಮಿಕರಿಗೆ ಮಾತ್ರ ಒಂಭತ್ತು ತಿಂಗಳ ವೇತನ ನೀಡುವ ಅಧಿಕಾರಿಗಳನ್ನು ಅಮಾನತು ಮಾಡುವುದು ಸೇರಿ ಕಾರ್ಮಿಕರಿಗಾಗುತ್ತಿರುವ ಅನ್ಯಾಯ ತಡೆಗಟ್ಟುವಂತೆ ಒತ್ತಾಯಿಸಿದರು.

ಸಂಘಟನೆ ರಾಜ್ಯಾಧ್ಯಕ್ಷ ಆರ್‌.ಮಾನಸಯ್ಯ, ಕಾರ್ಮಿಕ ಸಂಘದ ಅಧ್ಯಕ್ಷ ಜಿ.ಅಮರೇಶ, ಪ್ರಧಾನ ಕಾರ್ಯದರ್ಶಿ ಕೈಸರ್‌ ಅಹ್ಮದ್‌, ರಂಗನಾಥ, ತಿಮ್ಮಣ್ಣ, ಹುಸೇನಪ್ಪ, ಬಸವರಾಜ, ಲಾಳೇಸಾಬ, ರಾಮಯ್ಯ, ಶಿವಯ್ಯ, ಲತಾ ಸೇರಿ  ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next