ಕೊಲ್ಲೂರು: ಲಕ್ಷಾಂತರ ಭಕ್ತರ ಧ್ಯಾನಕೇಂದ್ರವಾದ ಕೊಲ್ಲೂರಿನಲ್ಲೊಂದು ಸಕಲ ಸೌಲಭ್ಯಗಳಿಂದ ಕೂಡಿದ 24×7 ಮಾದರಿಯ ಪೂರ್ಣ ಪ್ರಮಾಣದ ವ್ಯವಸ್ಥಿತ ಸರಕಾರಿ ಪ್ರಥಮ ದರ್ಜೆ ಆಸ್ಪತ್ರೆಯ ಕೊರತೆ ಎದ್ದು ಕಾಣುತ್ತಿದ್ದು ಈ ಭಾಗದ 5 ಗ್ರಾಮಗಳ ನಿವಾಸಿಗಳು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೊರೆ ಹೋಗಬೇಕಾದ ಪರಿಸ್ಥಿತಿಗೆ ಕೊನೆ ಎಂದು ಎಂಬ ಪ್ರಶ್ನೆಗೆ ಈವರೆಗೆ ಪರಿಹಾರ ಕಂಡುಬಂದಿಲ್ಲ.
ಕೊಲ್ಲೂರು, ಜಡ್ಕಲ್, ಮುದೂರು, ಗೋಳಿಹೊಳೆ ಹಾಗೂ ಯಳಜಿತ ಗ್ರಾಮಗಳ ಪ್ರಮುಖ ಆರೋಗ್ಯ ಕೇಂದ್ರವಾದ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವು ವಿವಿಧ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದ್ದು ಅದಕ್ಕೊಂದು ಶಾಶ್ವತ ಪರಿಹಾರ ಈವರೆಗೆ ದೊರಕದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ, ಸ್ಟಾಪ್ ಕ್ವಾರ್ಟಸ್: ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರ ಕ್ವಾರ್ಟಸ್ ಸಂಪೂರ್ಣವಾಗಿ ಹಾಳಾಗಿದ್ದು ಅದರ ಪಾರ್ಶ್ವದ ಒಂದು ಕಡೆ ಯಲ್ಲಿ ಕುಸಿದು ಬೀಳುವ ಭೀತಿ ಇದೆ. ಬಹುತೇಕ ಕಡೆ ಹೆಂಚು ಹಾರಿಹೋಗಿದ್ದು ಮಳೆಗಾಲದಲ್ಲಿ ಹಲವೆಡೆ ಸೋರುತ್ತಿರುವುದು ಕಂಡುಬಂದಿದೆ. ಶಿಥಿಲಗೊಂಡ ಕ್ವಾರ್ಟಸ್ ದುರಸ್ಥಿ ಬಗ್ಗೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿಯ ಸಂಗತಿಯಾಗಿದೆ. ಈ ಒಂದು ಮುರುಕಲು ಸೂರಿನಡಿ ನಡುಕುತ್ತಾ ರಾತ್ರಿ ಕಳೆಯಬೇಕಾದ ಇಲ್ಲಿನ ಸಿಬಂದಿಗಳ ಪಾಡು ಹೇಳತೀರದು. ರಾತ್ರಿ ಪಾಳಯದಲ್ಲಿ ಓರ್ವ ಕಾವಲುಗಾರ ಹಾಗೂ ಓರ್ವ ದಾದಿಯನ್ನು ನೇಮಿಸಲಾಗಿದ್ದರೂ ಸಂಪೂರ್ಣ ಭದ್ರತೆ ಇಲ್ಲದ ಆಸ್ಪತ್ರೆಯ ಅರ್ಧಂಬರ್ಧ ಗೋಡೆಯ ಕಟ್ಟಡದೊಳಗೆ ಸೇವೆ ಸಲ್ಲಿಸಬೇಕಾಗಿರುವುದು ಅವರ ಪ್ರಾರಬ್ದ ಎನ್ನದೇ ಬೇರೆ ಗತಿಯಿಲ್ಲ.
ಕೊಲ್ಲೂರು ದೇವಳದ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿಗಳ ಸೇವೆಗೆ ಪೂರಕವಾದ ಆರ್ಥಿಕ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಅಲ್ಲಿನ ಶಾಶ್ವತ ನೆಲೆಯಲ್ಲಿ ಸೇವೆ ಸಲ್ಲಿಸುವ ಸಿಬಂದಿಗಳ ನಿಯೋಜನೆಯಾಗದಿರುವುದು ರೋಗಿಗಳಿಗೆ ಪರದಾಡುವಂತಾಗಿದೆ. ಮಾಜಿ ತಾ.ಪಂ. ಸದಸ್ಯ ಹಾಗೂ ಕೊಲ್ಲೂರು ದೇಗುಲದ ವ್ಯವಸ್ಥಾಪನ ಸಮಿತಿಯ ಸದಸ್ಯ ರಮೇಶ್ ಗಾಣಿಗ ಅವರನ್ನು ಸಂಪರ್ಕಿಸಿದಾಗ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಶಾಸಕ ಗೋಪಾಲ ಪೂಜಾರಿಯವರೊಡನೆ ಚರ್ಚಿಸಲಾಗಿದೆ. ಜಿಲ್ಲಾಡಳಿತ ಸಮೇತ ರಾಜ್ಯ ಸರಕಾರದ ಸಚಿವರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಇಲ್ಲಿನ 5 ಗ್ರಾಮಗಳ ಸಾವಿರಾರು ಸಂಖ್ಯೆಯ ರೋಗಿಗಳು ಸಮೇತ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ರಾತ್ರಿ ಹೊತ್ತಿನಲ್ಲಿ ತುರ್ತುಚಿಕಿತ್ಸೆ ನೀಡುವಲ್ಲಿ ಅವಕಾಶ ಕಲ್ಪಿಸಿದಂತಾಗುವುದು ಎಂದಿರುತ್ತಾರೆ.
ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ ಶೆಟ್ಟಿ ಹಾಗೂ ತಾ.ಪಂ. ಸದಸ್ಯೆ ಗ್ರೀಷ್ಮಾ ಬಿಡೆ ಕೊಲ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಆರೋಗ್ಯ ಸಚಿವರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊಲ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಮಹಿಳಾ ವೈದ್ಯಾದಿಕಾರಿಗೆ ಅಪಾರ ಸಂಖ್ಯೆಯ ರೋಗಿಗಳ ಸೇವೆಯೊಡನೆ ಇಲಾಖೆಯ ಇತರ ಜವಾಬ್ದಾರಿ ಇರುವುದರಿಂದ ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಇಬ್ಬರು ವೈದ್ಯಾದಿಕಾರಿಗಳ ನೇಮಕಾತಿ ಸೂಕ್ತವೆಂದು ಸ್ಥಳೀಯ ನಿವಾಸಿಗಳಾದ ಸಂದೀಪ್ ಕುಟ್ಟಿ ಹಾಗೂ ಗಿರೀಶ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಸಿಬಂದಿ ಕೊರತೆ
ಹಿರಿಯ ಮಹಿಳಾ ಆರೋಗ್ಯ ಸಹಾಯಕಿ, ಹಿರಿಯ ಪುರುಷ ಆರೋಗ್ಯ ಸಹಾಯಕರ ಹುದ್ದೆ ಖಾಲಿ ಇದ್ದು ಈವರೆಗೆ ಆ ಸ್ಥಾನಕ್ಕೆ ಯಾರನ್ನೂ ನಿಯೋಜಿಸಲಾಗಿಲ್ಲ. ಅಂತೆಯೇ ಲ್ಯಾಬ್ ಟೆಕ್ನಿಷಿಯನ್ ಕೊರತೆ ಇದ್ದು ಅದಕ್ಕೆ ಪೂರಕವಾದ ವ್ಯವಸ್ಥೆ ಈವರೆಗೆ ಕಲ್ಪಿಸಲಾಗದಿರುವುದು ಸಾವಿರಾರು ರೋಗಿಗಳ ರಕ್ತ ಪರೀಕ್ಷೆಗೆ ತೊಡಕನ್ನು ಉಂಟುಮಾಡುತ್ತದೆ. ಸೇವೆಯಲ್ಲಿ ಮಹಿಳಾ ವೈದ್ಯಾದಿಕಾರಿ ಕಾರ್ಯನಿರ್ವಹಿಸುತ್ತಿದ್ದರೂ ರಾತ್ರಿ ಇಲ್ಲಿ ತುರ್ತು ಅಗತ್ಯತೆಗೆ ವೈದ್ಯರ ಕೊರತೆ ಇರುವುದು ರೋಗಿಗಳಿಗೆ 40 ಕಿ.ಮೀ. ದೂರ ವ್ಯಾಪ್ತಿಯ ಕುಂದಾಪುರಕ್ಕೆ ತೆರಳಿ ಚಿಕಿತ್ಸೆ ಪಡೆಯಬೇಕಾಗಿದೆ. ಬಹಳಷ್ಟು ವರುಷಗಳಿಂದ ಕೊಲ್ಲೂರಿನಲ್ಲೊಂದು ಪೂರ್ಣ ಪ್ರಮಾಣದ ಸರಕಾರಿ ಆಸ್ಪತ್ರೆಯ ಬೇಡಿಕೆ ಇದ್ದರೂ ಈವರೆಗೆ ಈಡೇರದಿರುವುದು ಗ್ರಾಮಸ್ಥರಲ್ಲಿ ನಿರಾಶೆಯನ್ನುಂಟುಮಾಡಿದೆ.
ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸುವ ಸಹಸ್ರಾರು ಭಕ್ತರು ಹಾಗೂ ಸ್ಥಳೀಯ 5 ಗ್ರಾಮಗಳ ನಿವಾಸಿಗಳ ಚಿಕಿತ್ಸೆಗೆ ಯೋಗ್ಯವಾದ ಸಕಲ ಸೌಲಭ್ಯಗಳ ಸರಕಾರಿ ಆಸ್ಪತ್ರೆಗಾಗಿ ಸರಕಾರದ ಮೇಲೆ ಒತ್ತಡ ಹೇರಿ ಈ ಭಾಗದ ಜನರ ಬೇಡಿಕೆ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
– ಶಾಸಕ ಕೆ. ಗೋಪಾಲ ಪೂಜಾರಿ
– ಡಾ| ಸುಧಾಕರ ನಂಬಿಯಾರ್