ಕುಷ್ಟಗಿ: ತಾಲೂಕಿನಲ್ಲಿ ಜಾನುವಾರುಗಳ ಮೇವಿನ ಕೊರತೆ ತಪ್ಪಿಸಲು ತಾಲೂಕಿನ ಪ್ರತಿ ಹೋಬಳಿಗೊಂದು ಗೋಶಾಲೆ ಬೇಡಿಕೆ ವ್ಯಕ್ತವಾಗುತ್ತಿದೆ.
ತಾಲೂಕನ್ನು ಸರ್ಕಾರ ಬರ ಪೀಡಿತ ಪ್ರದೇಶ ಎಂದು ಘೋಷಿಸಿದೆ. ಅಂತೆಯೇ ಕಳೆದ ಫೆ.4ರಂದು ತಾಲೂಕಿನ ಕಲಕೇರಿ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಗೋಶಾಲೆ ಆರಂಭಿಸಿ ಒಂದೂವರೆ ತಿಂಗಳಾಗುತ್ತಾ ಬಂದಿದೆ. ನಿತ್ಯ 170ರಿಂದ 190 ಜಾನುವಾರುಗಳಿಗೆ ಇದು ಅನುಕೂಲವಾಗಿದೆ. ಕಲಕೇರಿ ಗೋ ಶಾಲೆ ಸುತ್ತಮುತ್ತಲಿನ ಕಡೇಕೊಪ್ಪ, ತೋಪಲಕಟ್ಟಿ, ಕಲಕೇರಿ ತಾಂಡಾ ಗ್ರಾಮಗಳಿಗೆ ಸೀಮಿತವಾಗುತ್ತಿದೆ. ದಿನವೂ ಜಾನುವಾರುಗಳನ್ನು ಗೋ ಶಾಲೆಗೆ ತಂದು ಬಿಡುವುದು, ಗೋ ಶಾಲೆಯವರು ನೀಡಿದ ಮೇವನ್ನು ಜಾನುವಾರುಗಳಿಗೆ ನೀಡುವುದು ದಿನಚರಿಯಾಗಿದೆ. ಸದ್ಯ ಸದರಿ ಗೋಶಾಲೆಯಲ್ಲಿ ಕುಡಿಯುವ ನೀರು, ಮೇವಿಗೆ ತೊಂದರೆ ಇಲ್ಲ. ಈ ಗೋಶಾಲೆ ಶೆಡ್‌ನಲ್ಲಿ 70ರಿಂದ 80 ಜಾನವಾರುಗಳಿಗೆ ನೆರಳಿನ ವ್ಯವಸ್ಥೆ ಇದೆ. ಇನ್ನುಳಿದ ಜಾನುವಾರುಗಳನ್ನು ಬಿಸಿಲಿನಲ್ಲೇ ಕಟ್ಟಬೇಕು. ಈ ಕುರಿತು ಸಂಬಂಧಿಸಿದ ಅಧಿ ಕಾರಿಗಳನ್ನು ವಿಚಾರಿಸಿದರೆ ನಿರ್ಮಿತಿ ಕೇಂದ್ರದವರಿಗೆ ಗೋಶಾಲೆ ಶೆಡ್ ನಿರ್ಮಿಸಿರುವುದಕ್ಕೆ ಜಿಲ್ಲಾಡಳಿತದಿಂದ ಮೊದಲ ಹಂತದ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಗೋಶಾಲೆ ಶೆಡ್ ವಿಸ್ತರಿಸಲಾಗಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು. ಜಾನುವಾರುಗಳು ಬಿಸಿಲಿಗೆ ಮೈಯೊಡ್ಡಿ ನಿಲ್ಲುತ್ತಿದ್ದರು ಅಧಿಕಾರಿಗಳು, ಲೋಕಸಭೆ ಚುನಾವಣೆ ಜರೂರು ಕೆಲಸದ ಕಾರಣದಿಂದ ಗೋಶಾಲೆಯತ್ತ ಗಮನ ಹರಿಸುತ್ತಿಲ್ಲ.
ಈ ಕುರಿತು, ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಳ್ಳದ್ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ 51,778 ದನಗಳು, 9,515 ಎಮ್ಮೆ ಸೇರಿದಂತೆ 61,293 ಜಾನುವಾರುಗಳಿವೆ. ಮಾರ್ಚ್ ತಿಂಗಳ ಕೊನೆಯವರೆಗೂ ಹೇಗೋ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಪ್ರತಿ ಹೋಬಳಿಗೆ ಒಂದರಂತೆ ಗೋಶಾಲೆ ಆರಂಭಿಸುವುದು ಅಗತ್ಯವಿದೆ ಎಂದು ತಿಳಿಸಿದರು. ಈ ಬಾರಿ ಮುಂಗಾರು, ಹಿಂಗಾರು ಮಳೆ ಅಭಾವದ ಹಿನ್ನೆಲೆಯಲ್ಲಿ ಮೇವಿನ ಬರ ಎದುರಾಗಿದೆ. ರೈತರಿಗೆ ಜಾನುವಾರುಗಳಿಗೆ ಬೇಕಾಗುವಷ್ಟು ಮೇವು ಕೊಳ್ಳಲು ಸಾಧ್ಯವಾಗಿಲ್ಲ. ರೈತರು ಸಂಗ್ರಹಿಟ್ಟುಕೊಂಡ ಮೇವು, ಬಿಳಿಜೋಳ, ಸಜ್ಜೆ ದಂಟಿನ ಸೊಪ್ಪು, ಶೇಂಗಾ, ಹೆಸರು ಹೊಟ್ಟು ಸಾಲದಂತಾಗಿದ್ದು, ಮುಂದೆ ಮೇವು, ಹೊಟ್ಟು ಕೊಳ್ಳಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಜಾನುವಾರು ಸಂತೆಯಲ್ಲಿ ಮಾರುವುದು ಅನಿವಾರ್ಯವಾಗಿದೆ. ಗೋಶಾಲೆ ಹತ್ತಿರದಲ್ಲಿದ್ದರೆ ಗೋಶಾಲೆಗೆ ಕಳುಹಿಸಿ ಬದುಕಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ರೈತರು.
ಬರಾಲದ ಪರಿಸ್ಥಿತಿಯಲ್ಲಿ ಜಾನುವಾರುಗಳನ್ನು ಸಾಕಿಕೊಂಡು ಮೇವಿಗಾಗಿ ಪರದಾಡುವ ರೈತರನ್ನು ಸ್ಥಳೀಯ ದ್ವಾರಕಾಮಯಿ ಸೇವಾ ಟ್ರಸ್ಟ್‌ನವರು ಗುರುತಿಸಿ ಮೇವು ಪೂರೈಸುವ ಕಾರ್ಯ ಮಾಡುತ್ತಿದ್ದಾರೆ. ಮೇವಿನ ಸಮಸ್ಯೆ ಹಿನ್ನೆಲೆಯಲ್ಲಿ ಎಲ್ಲವೂ ಸಕಾರವೇ ಮಾಡಬೇಕೆಂದೇನಿಲ್ಲ. ತಾಲೂಕಿನಲ್ಲಿ ಸ್ಥಿತಿಯುಳ್ಳುವರು ಮುಂದೆ ಬಂದು ಮೇವು ಖರೀದಿಸಿ, ಜಾನುವಾರು ಸಾಕು ರೈತರಿಗೆ ಉಚಿತವಾಗಿ ನೀಡಬೇಕಿದೆ ಎಂದರು.
. ಕೃಷ್ಣಾ ಕಂದಕೂರು,
ದ್ವಾರಕಾಮಯಿ ಸೇವಾ ಟ್ರಸ್ಟ್‌ನ ಸದಸ್ಯ
ಸರ್ಕಾರ ಇ-ಟೆಂಡರ್ ಮೂಲಕ ಭತ್ತದ ಮೇವು 7,260 ರೂ., ಹಾಗೂ ಜೋಳದ ಒಣ ಮೇವು 8,093 ಪ್ರತಿ ಟನ್ ಗೆ ತಲಾ 250 ಟನ್‌ನಂತೆ ಕಲಕೇರಿ ಸೇರಿದಂತೆ ಜಿಲ್ಲೆಯ ಐದು ಗೋಶಾಲೆಗಳಿಗೆ ಪೂರೈಸುವ ವ್ಯವಸ್ಥೆಯಾಗಿದೆ. ಈ ಗೋಶಾಲೆಯಲ್ಲಿ ಮೇವು, ಕುಡಿಯುವ ನೀರು ತೊಂದರೆ. ನಿರ್ಮಿತಿ ಕೇಂದ್ರದವರು ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಶೆಡ್ ವಿಸ್ತರಿಸಬೇಕಿದೆ.
ಚನ್ನಬಸಪ್ಪ ಹಳ್ಳದ್,
ಸಹಾಯಕ ನಿರ್ದೇಶಕ
ಪಶು ವೈದ್ಯಕೀಯ ಸೇವಾ ಇಲಾಖೆ