Advertisement
ಪಾಕಿಸ್ಥಾನದ ವಿರುದ್ಧ ಯುದ್ಧಕ್ಕೆ ಸನ್ನದ್ಧನಾಗಿದ್ದಾಗ ಸಶಸ್ತ್ರ ಸೇನೆಯಲ್ಲಿ ನಾನಿನ್ನೂ ಎಳಸು. ಆದರೆ ನನ್ನ ತಂಡದ ಹಿರಿಯ ಸೇನಾ ಅಧಿಕಾರಿಗಳ ಅನುಭವ ವೈರಿ ಪಡೆಯ ಹೆಡೆಮುರಿ ಕಟ್ಟಿಸಿತ್ತು. ವೈರಿ ರಾಷ್ಟ್ರದ ವಿರುದ್ಧದ ಹೋರಾಟದಲ್ಲಿ ನಮ್ಮವರು ಬಲಿದಾನವಾಗುತ್ತಿದ್ದರೂ ಜೀವದ ಹಂಗು ತೊರೆದು ಹೋರಾಡಿ, ಯುದ್ಧ ಗೆದ್ದೆವು. ಭಾರತೀಯ ಸೇನೆಗೆ ಸೇರಿದ್ದಕ್ಕೆ ನನಗೆ ಸಾರ್ಥಕ ಭಾವ ಮೂಡಿಸಿತು.
Advertisement
ಸೇನೆಗೆ ಸೇರಿದ ವರ್ಷದಲ್ಲೇ ವೈರಿ ರಾಷ್ಟ್ರದ ವಿರುದ್ಧ ಸಶಸ್ತ್ರಧಾರಿಯಾಗಿ ಹೋರಾಟ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಹಲವು ವಾಯು ದಾಳಿ, ರಾತ್ರಿ ಆರ್ಟಿಲರಿ ಸೆಲ್ ದಾಳಿ ನಡೆಯುತ್ತಿದ್ದರೂ ದಿಟ್ಟ ರೀತಿಯಲ್ಲಿ ಪ್ರತಿರೋಧ ತೋರಿದ್ದ ನಮ್ಮ ತಂಡದಲ್ಲಿ ನನ್ನೊಂದಿಗಿದ್ದ ಪರಾಕ್ರಮಿ ಹವಾಲ್ದಾರ ಹಿಪ್ಪರಗಿ ಹಾಗೂ ವೆಂಕಟೇಶ ಇಬ್ಬರೂ ಹುತಾತ್ಮರಾದರು. ಹಲವರು ಗಾಯಗೊಂಡು ವೈಕಲ್ಯಕ್ಕೆ ಸಿಲುಕಿದರು.
ಇದನ್ನೂ ಓದಿ:ಅರಣ್ಯ ಪ್ರದೇಶದಲ್ಲಿ ಸಾಗುವಳಿ ಸಕ್ರಮ ಮಾಡಲು ಅವಕಾಶವಿಲ್ಲ: ಆರ್.ಅಶೋಕ್
ಆಗ ಧೃತಿಗೆಟ್ಟಿದ್ದ ನಮಗೆಲ್ಲ ಕಲಬುರಗಿಯ ಮೇಜರ್ ಶಾಂತಯ್ಯ ಹಿರೇಮರ ಅವರು ಧೈರ್ಯ ತುಂಬಿದರು. ನಮ್ಮವರನ್ನು ಕಳೆದುಕೊಂಡಿದ್ದಕ್ಕೆ ನಾವು ಪ್ರತೀಕಾರ ತೀರಿಸಿ, ಗೆಲ್ಲಲೇಬೇಕು ಎಂದು ಆತ್ಮವಿಶ್ವಾಸ ಮೂಡಿಸಿದ್ದರು. ವೈರಿ ದಾಳಿ ಭಯಕ್ಕಿಂತ ನಮ್ಮ ಹಿರಿಯರ ಇಂಥ ಮಾತುಗಳ ದೇಶಪ್ರೇಮ ನಮ್ಮೆದೆಯಲ್ಲಿ ಕೆಚ್ಚಾಗಿ ಕುದಿಯುವಂತೆ ಮಾಡಿತು. ಪಾಕ್ ದಾಳಿಗೆ ನಾವು ಪ್ರತಿದಾಳಿ ಮಾಡಿದಾಗ ಎದುರಾಳಿ ಸೇನಾಪಡೆಯಲ್ಲಿ ಹೆಣಗಳು ಉರುಳಲು ಆರಂಭಿಸಿದವು. ಆಗ ವೈರಿಯ ಎದೆಯಲ್ಲಿ ನಡುಕ ಉಂಟಾಯಿತು. ಅಂತಿಮವಾಗಿ ಪಾಕಿಸ್ಥಾನ ಸೋಲುಂಡು ಶರಣಾಗತಿ ಘೋಷಿಸಿತು. ನಮ್ಮ ತಂಡಕ್ಕೆ ವಿಶಿಷ್ಟ ವಿಭಾಗದಲ್ಲಿ ಮೇ| ಶಾಂತಯ್ಯ ಅವರಿಗೆ ಸೇನಾ ಪದಕ ದಕ್ಕಿತು. ಇದು ನಮ್ಮಂಥ ಭಾರತೀಯ ಯುವ ಸೈನಿಕರಲ್ಲಿ ಆತ್ಮವಿಶ್ವಾಸ ವೃದ್ಧಿಸಿತು. ಅಂತಿಮವಾಗಿ ಭಾರತೀಯರಾದ ನಮಗೆ ವಿಜಯ ಮಾಲೆ ಬಿದ್ದಾಗ ನನಗೆ ವೆಸ್ಟರ್ನ್ ಸ್ಟಾರ್, ಸಂಗ್ರಾಮ್ ಸ್ಟಾರ್ ಪದಕದ ಗೌರವ ಸಿಕ್ಕಿತು. ಇದಾದ ಬಳಿಕ ಪಾಕ್ ವಿರುದ್ಧ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಂದಭದಲ್ಲಿ ನಾನು ಚೀನ ಗಡಿಯಲ್ಲಿ ಸೇವೆಯಲ್ಲಿದ್ದೆ. ಬ್ಲೂಸ್ಟಾರ್ ಕಾರ್ಯಾಚರಣೆ ಯಲ್ಲೂ ನಾನು ಪಾಲ್ಗೊಂಡಿದ್ದೆ.
ನಾಗಾಲ್ಯಾಂಡ್ ಅಸ್ಸಾಂ, ಲೇಹ್-ಲಡಾಕ್, ಅರುಣಾಚಲ ಪ್ರದೇಶ ಅಂತೆಲ್ಲ 30 ವರ್ಷ 1 ತಿಂಗಳು ಸುದೀರ್ಘ ಅವ ಧಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ ಎನ್ನುವಾಗ ಸೂರ್ಯವಂಶಿ ಅವರ ಮೊಗದಲ್ಲಿ ತಾನು ಪಾಕ್ ವಿರುದ್ಧ ಯುದ್ಧ ಗೆದ್ದ ಸಂಭ್ರಮಕ್ಕಿಂತ ಭಾರತ ಗೆಲ್ಲಿಸಿದ ಸಂತಸ ಮೂಡಿತ್ತು.
-ಜಿ.ಎಸ್. ಕಮತರ