Advertisement
ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘದ ಹೆಜಮಾಡಿ ಶಾಖೆಗೆ ಬಂದಿರುವ ಸರಕಾರದ ಅನ್ನಭಾಗ್ಯದ 250 ಚೀಲ ಅಕ್ಕಿಯಲ್ಲಿ ಈ ಪ್ಲಾಸ್ಟಿಕ್ ಹರಳುಗಳು ಕಂಡುಬಂದಿದೆ. ಸರಕಾರವು ಈ ಹಿಂದಿನ ಸಂದರ್ಭಗಳಲ್ಲಿ “ಪ್ಲಾಸ್ಟಿಕ್ ಅಕ್ಕಿ’ಯ ಬಗೆಗೆ ಸೂಕ್ತ ಕ್ರಮವನ್ನು ಕೈಗೊಳ್ಳುವ ಭರವಸೆ ನೀಡಿದ್ದರೂ ಮುಂದುವರಿದಿರುವ ಈ ಚಾಳಿಯ ಬಗೆಗೆ ಜಿಲ್ಲಾಧಿಕಾರಿಯವರು ಇಲಾಖಾ ತನಿಖೆಯನ್ನು ನಡೆಸಬೇಕು. ಈ ತರದ ಅಕ್ಕಿ ಯಾವ ಸಂಘಕ್ಕೂ, ನ್ಯಾಯಬೆಲೆ ಅಂಗಡಿಗಳಿಗೂ ರವಾನೆಯಾಗದಂತೆ ಕ್ರಮ ಕೈಗೊಳ್ಳಬೇಕಾಗಿ ಜಿಲ್ಲಾಧಿಕಾರಿಯವರಿಗಿತ್ತ ಮನವಿಯಲ್ಲಿ ತಿಳಿಸಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಶೇಖರ್ ಹೆಜ್ಮಾಡಿ ಹಾಗೂ ಹೆಜಮಾಡಿಯ ಗ್ರಾಮಸ್ಥರು ಸೋಮವಾರ ಮನವಿಯನ್ನು ನೀಡಿದ್ದಾರೆ. ಮನವಿಗೆ ಸ್ಪಂದಿಸಿರುವ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಈ ಕುರಿತಾದ ಸೂಕ್ತ ತನಿಖೆಯನ್ನು ನಡೆಸುವಂತೆ ಆದೇಶವನ್ನೂ ನೀಡಿರುವುದಾಗಿ ಶೇಖರ ಹೆಜ್ಮಾಡಿ ತಿಳಿಸಿರುತ್ತಾರೆ. ಉಗ್ರ ಹೋರಾಟದ ಎಚ್ಚರಿಕೆ
ಈಗಾಗಲೇ ಈ ಅಕ್ಕಿ ಮೂಟೆಗಳನ್ನು ವಿತರಿಸದಂತೆ ಆದೇಶಿಸಲಾಗಿದೆ. ಈ ಕುರಿತಾಗಿ ತಾವು ರಾಜ್ಯ ಆಹಾರ ಸಚಿವ ಯು. ಟಿ. ಖಾದರ್ ಅವರಿಗೂ ಮನವಿಯನ್ನು ರವಾನಿಸಲಿದ್ದು, ಜನಸಾಮಾನ್ಯನ ಅನ್ನಭಾಗ್ಯದ ಅಕ್ಕಿಯಲ್ಲೂ ಪ್ಲಾಸ್ಟಿಕ್ ಬೆರೆಸಿ ಅಟ್ಟಹಾಸ ಮೆರೆವ ಕುಳಗಳ ವಿರುದ್ಧ ತನಿಖೆ ನಡೆದು ಸತ್ಯಾಂಶ ಹೊರಬಾರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ವ್ಯವಸ್ಥೆಯ ವಿರುದ್ಧ ತಾವು ಉಗ್ರ ಹೋರಾಟವನ್ನು ಸಂಘಟಿಸುವುದಾಗಿ ಶೇಖರ್ ಹೆಜ್ಮಾಡಿ ಹೇಳಿದ್ದಾರೆ.
Related Articles
ಛತ್ತೀಸ್‌ಘರ್‌ನಿಂದ ರವಾನೆಯಾಗುತ್ತಿರುವ ಅನ್ನಭಾಗ್ಯ ಪ್ಲಾಸ್ಟಿಕ್ ಅಕ್ಕಿಯ ಕುರಿತಾಗಿ ಮಾಧ್ಯಮಗಳು ಈ ಹಿಂದೆಯೇ ವರದಿ ಮಾಡಿದ್ದು ಎಲ್ಲವನ್ನೂ “ಏನೂ ಇಲ್ಲ’ ಎಂಬಂತೆ ವಿಧಾನಸಭೆಯಲ್ಲೂ ಚರ್ಚೆ ನಡೆಸಿ ಮುಕ್ತಾಯ ಹಾಡಿದ್ದ ಸರಕಾರವು ಮತ್ತೆ ಎಚ್ಚೆತ್ತುಕೊಳ್ಳಬೇಕಿದೆ. ಪ್ರಜ್ಞಾವಂತರ ಜಿಲ್ಲೆಯಾದ ಉಡುಪಿ ಜಿಲ್ಲೆಗೇ ಈ ಕಲಬೆರಕೆ ಅಕ್ಕಿಯನ್ನು ರವಾನಿಸಿ ಇಲ್ಲಿನ ಬಡ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಮಧ್ಯವರ್ತಿಗಳ ಈ ಕುಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ಇಲಾಖಾ ತನಿಖೆಯನ್ನೇ ನಡೆಸಬೇಕೆಂದು ಉಡುಪಿ ಜಿ. ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಆಗ್ರಹಿಸಿದ್ದಾರೆ.
Advertisement