Advertisement

ನಾಳೆಯಿಂದ ಕೇಂದ್ರ ಸರಕಾರದ ಪಡಿತರ ವಿತರಣೆ

11:51 PM Apr 30, 2020 | Sriram |

ಪುತ್ತೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೇ 2ರಿಂದ ಕೇಂದ್ರ ಸರಕಾರದ ವತಿಯಿಂದ ಸರಬರಾಜು ಗೊಂಡಿರುವ ಪಡಿತರ ವಿತರಣೆ ಆರಂಭವಾಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಶಿಸ್ತುಬದ್ಧವಾಗಿ ನ್ಯಾಯಬೆಲೆ ಅಂಗಡಿಗಳು ಸಮರ್ಪಕ ಪಡಿತರ ವಿತರಣೆಗೆ ನಡೆಸಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್‌ ಡಾ| ಯತೀಶ್‌ ಉಳ್ಳಾಲ್‌ ತಿಳಿಸಿದ್ದಾರೆ.

Advertisement

ಗುರುವಾರ ಪುತ್ತೂರು ಮಿನಿವಿಧಾನಸೌಧ ಸಭಾಂಗಣದಲ್ಲಿ ನಡೆದ ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆ ವ್ಯವಸ್ಥೆಯ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ದಿನವೊಂದಕ್ಕೆ ಎಷ್ಟು ಪಡಿತರ ವಿತರಿಸಲಾಗುತ್ತದೆ ಎಂಬುದಕ್ಕೆ ಹೊಂದಿ ಕೊಂಡು ಟೋಕನ್‌ ನೀಡಬೇಕು. ಈ ನಿಟ್ಟಿನಲ್ಲಿ ಟೋಕನ್‌ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದರು.

ಒಟಿಪಿ ಅಥವಾ ಬಯೋಮೆಟ್ರಿಕ್‌ ಕಡ್ಡಾಯ
ಪುತ್ತೂರು ತಹಶೀಲ್ದಾರ್‌ ರಮೇಶ್‌ ಬಾಬು ಮಾತನಾಡಿ, ರಾಜ್ಯ ಸರಕಾರ ನೀಡಿದ ಪಡಿತರವನ್ನು ಸಮರ್ಪಕ ರೀತಿಯಲ್ಲಿ ವಿತರಣೆಯು ನ್ಯಾಯಬೆಲೆ ಅಂಗಡಿಗಳಿಂದ ನಡೆದಿದೆ. ಇದೀಗ ಕೇಂದ್ರ ಸರಕಾರದ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ ನೀಡಲಾಗುವ ಎಪ್ರಿಲ್‌ ಮತ್ತು ಮೇ ತಿಂಗಳ ಪಡಿತರ ವಿತರಣೆ ಮಾಡಬೇಕು. ಹಿಂದಿನ ಪಡಿತರ ವಿತರಣೆಯಲ್ಲಿ ಒಟಿಪಿ, ಬಯೋಮೆಟ್ರಿಕ್‌ ಕಡ್ಡಾಯವಾಗಿರಲಿಲ್ಲ. ಆದರೆ ಈ ಬಾರಿ ಒಟಿಪಿ ಅಥವಾ ಬಯೋಮೆಟ್ರಿಕ್‌ ಬಳಕೆ ಕಡ್ಡಾಯವಾಗಿದೆ. ಪಡಿತರ ವಿತರಣೆಗೆ ಟೋಕನ್‌ ಪದ್ಧತಿ ಅನುಸರಿಸಬೇಕು. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಕೋವಿಡ್‌ ನೋಡಲ್‌ ಅಧಿಕಾರಿ ರಾಜು ಮೊಗವೀರ ಮಾತನಾಡಿ, ಜನತೆಗೆ ತೊಂದರೆಯಾಗದಂತೆ ವಿತರಣೆ ನಡೆಯಬೇಕು. ಎಲ್ಲಿಯೂ ಲೋಪವಾಗದಂತೆ ಸಕಾಲಿಕ ಕ್ರಮ, ವ್ಯವಸ್ಥೆ ಅನುಸರಿಸಬೇಕು ಎಂದರು.

Advertisement

ತೂಕದಲ್ಲಿ ವ್ಯತ್ಯಾಸ
ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜುಗೊಳ್ಳುತ್ತಿರುವ ಅಕ್ಕಿ, ಗೋಧಿ ಗೋಣಿಗಳಲ್ಲಿ ನಿಗದಿತ ಕೆ.ಜಿ.ಗಿಂತ ಕಡಿಮೆ ಇರುತ್ತದೆ. ಇದರಿಂದ ನ್ಯಾಯಬೆಲೆ ಅಂಗಡಿಗಳನ್ನು ನಡೆಸುತ್ತಿರುವ ಕೃಷಿ ಪರಿಷತ್ತಿನ ಸಹಕಾರ ಸಂಘಗಳಿಗೆ ನಷ್ಟ ಉಂಟಾಗುತ್ತಿದೆ. ಆದರೆ ನಾವು ಜನತೆಗೆ ಸರಿಯಾದ ತೂಕದ ಆಧಾರದಲ್ಲಿ ಪಡಿತರ ನೀಡಬೇಕಾಗುತ್ತದೆ. ಇದರ ನಷ್ಟವನ್ನು ಭರಿಸುವುದು ಹೇಗೆ? ಈ ಕುರಿತು ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಸವಣೂರು, ಕಾಣಿಯೂರು ಸೊಸೈಟಿ ವ್ಯವಸ್ಥಾಪಕರು ಅಧಿಕಾರಿಗಳನ್ನು ಆಗ್ರಹಿಸಿದರು.

ಈ ಕುರಿತು ಮಾತನಾಡಿದ ಡಾ| ಯತೀಶ್‌ ಉಳ್ಳಾಲ್‌, ಈ ರೀತಿಯಲ್ಲಿ ಅಕ್ಕಿ, ಗೋಧಿ ಹಾಗೂ ಬೇಳೆ ಕಡಿಮೆ ಬಂದರೆ ವರದಿ ಮಾಡಿ, ಸರಕಾರದ ಗಮನಕ್ಕೆ ತಂದು ಸರಿಯಾದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಹಾಲಿ ಶೇ. 75 ಮತ್ತು ಶೇ. 25 ಪ್ರಮಾಣದಲ್ಲಿ ಕುಚ್ಚಲಕ್ಕಿ ಹಾಗೂ ಬೆಳ್ತಿಗೆ ಅಕ್ಕಿ ವಿತರಣೆಗೆ ಸೂಚನೆ ಇದೆ ಎಂದು ಎಸಿ ತಿಳಿಸಿದರು. ಉಪತಹಶೀಲ್ದಾರ್‌ ಸುಲೋಚನಾ, ಆಹಾರ ಇಲಾಖೆಯ ಸರಸ್ವತಿ, ರಾಜಣ್ಣ ಭಾಗವಹಿಸಿದ್ದರು.

ಪಡಿತರ ವಿತರಣೆ ವಿವರ

ಬಿಪಿಎಲ್‌ ಕಾರ್ಡ್‌: ಬಿಪಿಎಲ್‌ ಕಾರ್ಡ್‌ದಾರರಿಗೆ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ, ಪ್ರತಿ ಕುಟುಂಬಕ್ಕೆ 4 ಕೆ.ಜಿ. ಗೋಧಿ ಮತ್ತು 1 ಕೆ. ಜಿ. ಬೇಳೆ ನೀಡಲಾಗುವುದು.

ಅಂತ್ಯೋದಯ ಕಾರ್ಡ್‌: ಪ್ರತೀ ಸದಸ್ಯರಿಗೆ 10 ಕೆ.ಜಿ. ಅಕ್ಕಿ, ಪ್ರತಿ ಕಾರ್ಡಿಗೆ 1 ಕೆ.ಜಿ. ಬೇಳೆ.

ಎಪಿಎಲ್‌ ಕಾರ್ಡ್‌: ಅಸ್ತಿತ್ವದಲ್ಲಿರುವ ಎಪಿಎಲ್‌ ಕಾರ್ಡಿನಲ್ಲಿ ಅಕ್ಕಿ ಬೇಕು ಎಂದು ಸಮ್ಮತಿ ಸೂಚಿಸದ (ನಾಟ್‌ ವಿಲ್ಲಿಂಗ್‌) ಪಡಿತರದಾರರಿಗೆ ಮಾತ್ರ ಈ ಬಾರಿ ಅಕ್ಕಿ ನೀಡಲಾಗುವುದು. ಏಕ ವ್ಯಕ್ತಿ ಪಡಿತರ ಕಾರ್ಡ್‌ದಾರರಿಗೆ 5 ಕೆ.ಜಿ., ಹೆಚ್ಚು ಮಂದಿ ಇರುವ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ನೀಡಲಾಗುತ್ತದೆ (ಕೆ.ಜಿ.ಗೆ 15 ರೂ.). ಸಮ್ಮತಿ ಸೂಚಿಸಿದ ಎಪಿಎಲ್‌ ಕಾರ್ಡುದಾರರಿಗೆ ಪಡಿತರ ವಿತರಣೆ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next