ಕಲಬುರಗಿ: ಸೋಮವಾರ ನಡೆದ ಮಹಾದಾಸೋಹಿ, ಐತಿಹಾಸಿಕ ಪ್ರಸಿದ್ಧ ಶರಣಬಸವೇಶ್ವರ ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ದೇವಸ್ಥಾನ ಸುತ್ತಮುತ್ತ ಹಾಗೂ ದೇವಸ್ಥಾನಕ್ಕೆ ಹೋಗುವ ರಸ್ತೆಗಳುದ್ದಕ್ಕೂ ಅನ್ನದಾಸೋಹ ಹಾಗೂ ತಂಪು ಪಾನೀಯ ವ್ಯವಸ್ಥೆ ಮಾಡಿರುವುದು ವ್ಯಾಪಕವಾಗಿ ಕಂಡು ಬಂತು. ಹಲವೆಡೆ ಲಿಂಬೆ ಹಣ್ಣಿನ ಪಾನಕಾ ಹಾಗೂ ಮಜ್ಜಿಗೆ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿತ್ತು.
ಬಹುತೇಕ ನಾಲ್ಕು ದಿಕ್ಕಿನಿಂದ ಆಗಮಿಸುವ ಭಕ್ತರಿಗೆ ಹಲವಾರು ವೃತ್ತಗಳಲ್ಲಿ, ಪ್ರಮುಖ ಸ್ಥಳಗಳಲ್ಲಿ ಅನ್ನದಾಸೋಹವನ್ನು ಟೆಂಟ್ ಹಾಕುವ ಮೂಲಕ ಏರ್ಪಡಿಸಲಾಗಿತ್ತು. ರಾಮಮಂದಿರ, ಅದೇ ರೀತಿ ಆಳಂದ ನಾಕಾ ಸೇರಿದಂತೆ ಜಗತ್ ವೃತ್ತದ ಬಳಿಯೂ ಸಹ ಅನ್ನದಾಸೋಹ ಏರ್ಪಡಿಸಲಾಗಿತ್ತು. ದೇವಸ್ಥಾನದಲ್ಲಿ ದರ್ಶನ ಪಡೆಯಲು ಉದ್ದನೆಯ ಸರದಿ ಸಾಲಿನಲ್ಲಿ ಭಕ್ತರು ನಿಂತಿದ್ದು ಸಾಮಾನ್ಯವಾಗಿತ್ತು. ಜಾತ್ರೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಸಹ ಕಲ್ಪಿಸಲಾಗಿತ್ತು. ರಥೋತ್ಸವ ನಂತರ ಮಳೆ ಸುರಿದಿದ್ದರಿಂದ ಭಕ್ತಾದಿಗಳು ಮಳೆಯಿಂದ ಸಂರಕ್ಷಿಸಿಕೊಳ್ಳಲು ಯತ್ನಿಸುತ್ತಿರುವುದು ಕಂಡು ಬಂತು.
ಶರಣಬಸವೇಶ್ವರ ದೇವಸ್ಥಾನ ಬಳಿಯ ಕಲ್ಯಾಣಿ ಕಲ್ಯಾಣ ಪೆಟ್ರೋಲ್ ಪಂಪ್ ಹತ್ತಿರ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಗೆ ಆಗಮಿಸಿದ ಸಮಸ್ತ ಭಕ್ತಾದಿಗಳಿಗೆ ಎಸ್.ಬಿ.ಪಾಟೀಲ್ ಪರಿವಾರ ವತಿಯಿಂದ ಹಾಗೂ ದಿ| ಅಮಿತ ಪಾಟೀಲ್ ಸ್ಮರಣಾರ್ಥ ಅಂಗವಾಗಿ ಹಮ್ಮಿಕೊಳ್ಳಲಾದ ಅನ್ನದಾಸೋಹ ಮಹಾ ಪ್ರಸಾದ ಕಾರ್ಯಕ್ರಮವನ್ನು ಮಾಜಿ ಸಚಿವ ಎಸ್.ಕೆ. ಕಾಂತಾ ಉದ್ಘಾಟಿಸಿದರು.
ಉದ್ಯಮಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಉದ್ಯಮಿ ಡಾ| ಎಸ್.ಎಸ್.ಪಾಟೀಲ್, ಎಚ್‌ಕೆಇ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ, ಜುಗಲಕಿಶೋರ ಮಾಲು, ಡಾ| ಸರ್ವೋತ್ತಮರಾವ, ಸಿ.ಎಸ್.ಪಾಟೀಲ್, ಚಂದು ಪಾಟೀಲ್, ಕೈಲಾಸ ಪಾಟೀಲ್, ವೀರಣ್ಣ ಮಾಂತಗೋಳ, ಡಾ| ಸಾಯಿನಾಥ ಅಂದೋಲಾ, ಅಪ್ಪಾರಾವ ಅಕ್ಕೋಣಿ, ಕಾಶಿನಾಥ ಬಿಲಗುಂದಿ, ಸುಭಾಶ ಬಿಜಾಪೂರ, ಶ್ರೀಮಂತ ಉದನೂರ, ಉಮಾಕಾಂತ ನಿಗ್ಗುಡಗಿ, ಶಾಂತಕುಮಾರ ಬಿಲಗುಂದಿ, ಅಮರನಾಥ ಪಾಟೀಲ್, ಉಮೇಶ ಪಾಟೀಲ್, ರವಿ ಲಾತೂರಕರ್, ಬಸವರಾಜ ಪಾಟೀಲ್, ರಾಜೇಶ ಗುತ್ತೆದಾರ, ಮಧುಸೂಧನ ಮಾಲು, ನವೀನ ತಪಾಡಿಯಾ, ಚಂದ್ರಕಾಂತ ಮಚ್ಚೆಟ್ಟಿ, ಶಿವರಾಜ ಅಂಡಗಿ ಹಾಗೂ ಚಂದು ಪಾಟೀಲ್ ಅಭಿಮಾನಿ ಬಳಗದವರು ಇದ್ದರು.
ಅದೇ ರೀತಿ ಕಲ್ಯಾಣಿ ಕಲ್ಯಾಣ ಮಂಟಪದ ಬಳಿ ಇರುವ ಪೆಟ್ರೋಲ್ ಪಂಪ್‌ನಲ್ಲಿಯೂ ಸಹ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಸಂಘಟನೆಗಳು ದಾಸೋಹ ವ್ಯವಸ್ಥೆ ಕಲ್ಪಿಸದ್ದವು. ಕೋರ್ಟ್ ವೃತ್ತದಿಂದ ಗೋವಾ ಹೋಟೆಲ್‌ವರೆಗೆ, ಲಾಲಗೇರಿ ಕ್ರಾಸ್, ಕೆರೆ ರಸ್ತೆಯಲ್ಲಿ ಶಾಮಿಯಾನ ಹಾಕಿ ಹುಗ್ಗಿ, ಪಲಾವ್, ಸಜ್ಜಕ, ಮಜ್ಜಿಗೆ, ಕುಡಿಯುವ ನೀರು ವಿತರಿಸಲಾಯಿತು. ಜಾತ್ರಾ ಮಹೋತ್ಸವ ಮತ್ತು ಶರಣಬಸವೇಶ್ವರರ ಹೆಸರಿನ ಮೇಲೆ ಉಪವಾಸವಿದ್ದ ಬಾಳೆಹಣ್ಣು, ದ್ರಾಕ್ಷಿ, ಕಲ್ಲಂಗಡಿ ಹಣ್ಣು-ಹಂಪಲು ನೀಡಲಾಯಿತು.
ಆರೋಗ್ಯ ತಪಾಸಣೆ: ಬಿರು ಬಿಸಿಲಲ್ಲಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ನಗರದ ಜಗತ್ ವೃತ್ತದ ಬಳಿ ಪಾಟೀಲ ನ್ಯೂರೋ ಕ್ಲಿನಿಕ್ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಡಾ| ಶರಣಗೌಡ ಪಾಟೀಲರು ಭಕ್ತರ ಕಾಲು ಪರೀಕ್ಷೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ತಲೆನೋವು ತಪಾಸಣೆ ನಡೆಸಿ, ಉಚಿತವಾಗಿ ಮಾತ್ರೆ, ಔಷಧಿ ವಿತರಿಸಿದರು.
ಮಹಾದಾಸೋಹಿ ಶರಣಬಸವೇಶ್ವರರ ದರ್ಶನ ಪಡೆಯಲೆಂದು ಸೋಮವಾರ ಬೆಳಗಿನ ಜಾವದಿಂದಲೇ
ಭಕ್ತರ ದಂಡು ಅಪ್ಪನ ದೇವಾಲಯಕ್ಕೆ ಆಗಮಿಸಿತು. ನಗರದ ಹಲವು ಬಡಾವಣೆಗಳಿಂದ ನೂರಾರು ಭಕ್ತರು ಸೇರಿದಂತೆ ರಾಜ್ಯದ ಬೀದರ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ಶಿವಮೊಗ್ಗ ಹಾಗೂ ವಿವಿಧ ಜಿಲ್ಲೆಗಳ ಭಕ್ತರು ತಂಡೋಪ ತಂಡವಾಗಿ ಧಾವಿಸಿದರು.