ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ
ನಂತರ ಎಚ್ಚೆತ್ತುಕೊಂಡ ಪಾಲಿಕೆ ಒಂದು ತಿಂಗಳಲ್ಲಿ 14,299 ಗುಂಡಿಗಳನ್ನು ಮುಚ್ಚಿದೆ. ಜತೆಗೆ ರಸ್ತೆ ಗುಂಡಿ ಬೀಳದಂತೆ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕಾರ್ಯಕ್ಕೂ ಚಾಲನೆ ನೀಡಿದೆ.
ಕಳೆದ ಜೂನ್ ತಿಂಗಳಲ್ಲಿ ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕರೇ ನೇರ ದೂರು ನೀಡಲು ಬಿಬಿಎಂಪಿ ಸಹಾಯವಾಣಿ ಸ್ಥಾಪಿಸಲಾಗಿತ್ತು. ಜತೆಗೆ ರಸ್ತೆ ಗುಂಡಿಗಳ ಚಿತ್ರ ತೆಗೆದು ವಾಟ್ಸ್ ಆ್ಯಪ್ ಸಂಖ್ಯೆಗೆ ಕಳುಹಿಸಲು ಮನವಿ ಮಾಡಲಾಗಿತ್ತು.
ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿ ಸಾರ್ವಜನಿಕರು ಸಾವಿರಾರು ರಸ್ತೆ ಗುಂಡಿಗಳ ಫೋಟೋ ತೆಗೆದು ವಾಟ್ಸ್ ಆ್ಯಪ್‌ನಲ್ಲಿ ಕಳುಹಿಸಿ ಸಹಾಯವಾಣಿ ಕೇಂದ್ರದಲ್ಲಿ ದೂರು ಸಹ ದಾಖಲಿಸಿದ್ದರು. ಇದಾದ ನಂತರ ಪಾಲಿಕೆ ರಸ್ತೆ ಗುಂಡಿ ಮುಚ್ಚಲು ಚಾಲನೆ ನೀಡಿತ್ತು.
ರಸ್ತೆ ಗುಂಡಿ ಮುಚ್ಚಿರುವ ಕುರಿತು ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದು, ನಗರದಲ್ಲಿ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಜೂ.15ರಿಂದ ಒಂದು ತಿಂಗಳ ಅವಧಿಯಲ್ಲಿ 14,299 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚುವುದು ಒಂದೆಡೆಯಾದರೆ, ಗುಂಡಿ ಬೀಳದಂತೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ. ಈಗಾಗಲೇ ಟೆಂಡರ್‌ಶ್ಯೂರ್ ಯೋಜನೆಯಡಿ 12 ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ನಗರದಲ್ಲಿ ರಸ್ತೆ ಗುಂಡಿಗಳು ಕಂಡು ಬಂದರೆ ಸಾರ್ವಜನಿಕರು ಅದರ ಫೋಟೋ ತೆಗೆದು ಬಿಬಿಎಂಪಿಯ ಗಮನಕ್ಕೆ ತರಬಹುದು ಹಾಗೂ ದೂರು ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.