Advertisement

ಮನೆ ಮನೆಗೆ ರಾಜ್ಯ ಸರ್ಕಾರದ ಸಾಧನೆ ತಲುಪಿಸಿ

12:23 PM Aug 08, 2017 | |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ, ಕಾಂಗ್ರೆಸ್‌ ಸರ್ಕಾರದ ಜನಪರ ಆಡಳಿತವನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆ ಎಐಸಿಸಿ ಕಾರ್ಯದರ್ಶಿ, ಮೈಸೂರು ವಿಭಾಗ ಕಾಂಗ್ರೆಸ್‌ ಉಸ್ತುವಾರಿ ವಿಷ್ಣುನಾಥ್‌ ಹೇಳಿದರು. ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಅಜೀಜ್‌ ಸೇಠ್ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಂಘಟನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಬರಗಾಲದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿ ರೈತಪರ ಸರ್ಕಾರ ಎಂಬುದನ್ನು ಸಾಬೀತು ಪಡಿಸಿದೆ. ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸೌಲಭ್ಯಗಳನ್ನು ನೀಡುವ ಹಲವು ಭಾಗ್ಯ ಯೋಜನೆಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಮೀಸಲಿಟ್ಟು ಖರ್ಚು ಮಾಡುತ್ತಿದೆ ಎಂದರು.

ಐದು ವರ್ಷಗಳ ಅವಧಿಯ ಸ್ಥಿರ ಸರ್ಕಾರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಕಾರ್ಯಕ್ರಮಗಳು ಜನರಿಗೆ ಮೆಚ್ಚುಗೆಯಾಗಿದ್ದು, 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಾರ್ಡ್‌ ಮತ್ತು ಬೂತ್‌ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವ ದೃಷ್ಟಿಯಿಂದ ದೇಶಾದ್ಯಂತ ಬ್ಲಾಕ್‌ ಕಾಂಗ್ರೆಸ್‌ ಸಂಘಟನಾ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ರಾಜ್ಯ ಸರ್ಕಾರದ ಸಾಧನೆ ಹಾಗೂ ಕೇಂದ್ರ ಸರ್ಕಾರದ ವೈಫ‌ಲ್ಯಗಳನ್ನು ಜನತೆಗೆ ತಿಳಿಸಬೇಕು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಭಾಷಣದಲ್ಲಿ ಅಧಿಕಾರಕ್ಕೆ ಬಂದರೆ ವಿದೇಶದಲ್ಲಿರುವ ಕಪ್ಪು$ಹಣ ತಂದು ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ ಮಾಡುವ ಭರವಸೆ ನೀಡಿದ್ದರು, ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಯಾರ ಖಾತೆಗೂ 15 ರೂಪಾಯಿಯನ್ನೂ ಜಮೆ ಮಾಡಲಿಲ್ಲ. ಭರವಸೆ ನೀಡಿದ್ದಂತೆ ತೈಲೋತ್ಪನ್ನಗಳ ದರ ಇಳಿಸಲಿಲ್ಲ ಎಂದು ಟೀಕಿಸಿದರು.

Advertisement

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು. ನರಸಿಂಹರಾಜ ಕ್ಷೇತ್ರದ ವಾರ್ಡ್‌ ಮತ್ತು ಬೂತ್‌ ಮಟ್ಟದಲ್ಲಿ ಮನೆ ಮನೆ ಸಮೀಕ್ಷೆ ನಡೆಸಬೇಕು.

ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವವರ ಹೆಸರು ಸೇರ್ಪಡೆ ಮಾಡುವ ಕೆಲಸವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡಬೇಕು. ಈ ಕಾರ್ಯವನ್ನು ತಮ್ಮ ಮನೆಗಳಿಂದಲೇ ಆರಂಭಿಸುವಂತೆ ಹೇಳಿದರು. ಮೈಸೂರು ನಗರದ ಮೂರು ವಿಧಾನಸಭಾ ಕ್ಷೇತ್ರಗಳಲ್ಲೂ ಮತ್ತೆ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಒಂದು ಪಕ್ಷದ ಮುಖಂಡರು ಕೋಮು ಭಾವನೆ ಕೆರಳಿಸಿ ಮತ ಯಾಚಿಸಿದರೆ, ಮತ್ತೂಂದು ಪಕ್ಷದ ಮುಖಂಡರು ಜಾತಿ ಆಧಾರದಲ್ಲಿ ಮತ ಕೇಳಲು ಬರುತ್ತಾರೆ, ಈ ಬಗ್ಗೆ ಎಚ್ಚರವಹಿಸಿ ಮತದಾರರು ಉತ್ತಮರನ್ನು ಆಯ್ಕೆ ಮಾಡಬೇಕಾಗಿದೆ ಎಂದು ಹೇಳಿದರು.

ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಅಜೀಜ್‌ಸೇಠ್ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ಖಾದರ್‌, ಕೆಪಿಸಿಸಿ ಕಾರ್ಯದರ್ಶಿಗಳಾದ ಲೋಕೇಶ್‌ರಾವ್‌, ರೆಹಾನಾ ಬಾಬು, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌, ಅಜೀಜ್‌ಸೇಠ್ ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಚಿನ್ನತಾಯಮ್ಮ, ಮಾಜಿ ಉಪಮೇಯರ್‌ ಶಾಂತಕುಮಾರಿ, ಆರೀಫ್ ಹುಸೇನ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಣ್ಣ ಮತ್ತಿತರರು ಸಮಾವೇಶದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next