Advertisement

ಭಾರತೀಯ ಭಾಷೆಯಲ್ಲಿ ಜನರಿಗೆ ವಿಜ್ಞಾನ ತಲುಪಿಸಿ

09:15 PM Sep 20, 2019 | Lakshmi GovindaRaju |

ಮೈಸೂರು: ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯ ಭಾಷೆಗಳನ್ನು ಹೆಚ್ಚು ಬಳಸಿಕೊಳ್ಳುವ ಮೂಲಕ ವಿಜ್ಞಾನವನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ನವದೆಹಲಿಯ ವಿಜ್ಞಾನ್‌ ಪ್ರಸಾರ್‌ನ ವಿಜ್ಞಾನಿ ಡಾ.ಟಿ.ವಿ.ವೆಂಕಟೇಶ್ವರನ್‌ ಹೇಳಿದರು.

Advertisement

ನಗರದ ಸಿಎಫ್ಟಿಆರ್‌ಐನ ಚೆಲುವಾಂಬ ಸಭಾಂಗಣದಲ್ಲಿ ಶುಕ್ರವಾರ ಸಿಎಸ್‌ಐಆರ್‌-ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ, ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಹಾಗೂ ವಿಜ್ಞಾನ್‌ ಪ್ರಸಾರ್‌ ಸಹಯೋಗದಲ್ಲಿ ಆಯೋಜಿಸಿದ್ದ “ಕನ್ನಡದಲ್ಲಿ ವಿಜ್ಞಾನ ಸಂವಹನ: ನಿನ್ನೆ, ಇಂದು ಹಾಗೂ ನಾಳಿನ ಹಾದಿಗಳು’ ಕುರಿತ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಅವಿಷ್ಕಾರ, ತಂತ್ರಜ್ಞಾನ: ಇಂದಿಗೂ ನಮ್ಮ ದೇಶದಲ್ಲಿ ಬಹುಪಾಲು ಜನರಿಗೆ ವಿಜ್ಞಾನ ತಲುಪುತ್ತಿಲ್ಲ. ವಿಜ್ಞಾನ ಕ್ಷೇತ್ರದಲ್ಲಿ ಆಗುವ ಹೊಸ ಹೊಸ ಆವಿಷ್ಕಾರ, ತಂತ್ರಜ್ಞಾನ ಮೊದಲಾದವುಗಳು ಎಲ್ಲಾ ಜನರಿಗೂ ತಿಳಿಯಬೇಕಾದರೆ ಅವು ಭಾರತೀಯ ಭಾಷೆಗಳನ್ನು ಒಳಗೊಳ್ಳಬೇಕು. ಪ್ರಾದೇಶಿಕ ಅಥವಾ ಅಧಿಕೃತ ಭಾಷೆಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ಭಾರತೀಯ ಭಾಷೆಗಳ ಬಗ್ಗೆ ಮಾತನಾಡುತ್ತಿದ್ದು, ವಿಜ್ಞಾನವನ್ನು ಹೆಚ್ಚಾಗಿ ಸಾರ್ವಜನಿಕರಿಗೆ ತಲುಪಿಸಲು ಭಾರತೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ವಿಜ್ಞಾನ ಸಂವಹನ: ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಬುಡಕಟ್ಟು ಜನರ ಸಂಖ್ಯೆಯೂ ಹೆಚ್ಚಿದ್ದು, ಈ ಸಮುದಾಯದವರೂ ತಮ್ಮದೇ ಆದ ಭಾಷೆ ಹೊಂದಿದ್ದಾರೆ. ಇವರಿಗೂ ಕೂಡ ವಿಜ್ಞಾನ ವಿಷಯಗಳನ್ನು ತಲುಪಿಸಬೇಕಿದೆ. ನಮ್ಮ ಸಂವಹನ ಪ್ರಾಚೀನ ಭಾಷೆಗಳಿಗೆ ಸೀಮಿತವಾಗದೇ ಭಾರತೀಯ ಭಾಷೆಗಳಿಗೆ ವಿಸ್ತರಿಸಬೇಕು. ಮಾನವ ಸಂಪನ್ಮೂಲ ಸಚಿವಾಲಯ ಶಿಕ್ಷಣಕ್ಕೂ, ಸಾಂಸ್ಕೃತಿಕ ಸಚಿವಾಲಯ ಸಂಸ್ಕೃತಿ ಹಾಗೂ ಅದಕ್ಕೆ ಸಂಬಂಧಿಸಿದ ಮ್ಯೂಸಿಯಂ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಈ ನಿಟ್ಟಿನಲ್ಲಿ ಅವುಗಳಂತೆಯೇ ವಿಜ್ಞಾನ ಸಂವಹನವು ಸಂಶೋಧನೆಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಹೇಳಿದರು.

1960ರಲ್ಲಿ ಮೂರರ ಒಂದು ಭಾಗ ರ್‍ಯಾಂಕಿಂಗ್‌ ವಿದ್ಯಾರ್ಥಿಗಳು ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. 1990ರ ಸಂದರ್ಭಕ್ಕೆ ವಿದ್ಯಾರ್ಥಿಗಳು ಮೂಲ ವಿಜ್ಞಾನ ವಿಷಯ ಆಯ್ದುಕೊಳ್ಳುತ್ತಿದ್ದರು. ಈಗಿನ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಬಗೆಗಿನ ಗ್ರಹಿಕೆಯೂ ಕಡಿಮೆಯಾಗಿದೆ ಎಂಬುದಾಗಿ ಎನ್‌ಸಿಆರ್‌ಟಿ ವಿಶ್ಲೇಷಿಸಿದೆ ಎಂದು ಮಾಹಿತಿ ನೀಡಿದರು.

Advertisement

ಯುವಜನರ ಸೆಳೆಯಿರಿ: ವಿದ್ಯಾಸಂಸ್ಥೆಗಳು ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಯ ಅಭಿವೃದ್ಧಿ ಹಾಗೂ ಪ್ರಚುರಪಡಿಸುವ ಕೆಲಸ ಮಾಡಬೇಕು. ಜನಸಾಮಾನ್ಯರೂ ವಿಜ್ಞಾನ ಕ್ಷೇತ್ರವನ್ನು ಪ್ರಶಂಸಿಸುವ ಮಟ್ಟಕ್ಕೆ ಪ್ರಚುರಪಡಿಸಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಯುವ ಸಮುದಾಯವನ್ನು ಸೆಳೆಯಬೇಕು. ವಿಜ್ಞಾನ ಸಂವಹನವನ್ನು ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕು.

ರಾಜ್ಯ ಸಭಾ ಟೀವಿಯಲ್ಲಿ ನಾವು ಪ್ರತಿ ವಾರ ಭಾರತದ ವಿಜ್ಞಾನ ಬೆಳವಣಿಗೆ ಕುರಿತು ಸುದ್ದಿ ಪ್ರಸಾರ ಮಾಡುತ್ತೇವೆ. ಭಾರತದ ಹಿರಿಯ ವಿಜ್ಞಾನಿಗಳೊಂದಿಗೆ ಸಂವಹನ ನಡೆಸುತ್ತೇವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ “ಕುತೂಹಲ’ ವಿಜ್ಞಾನ ಸುದ್ದಿ ಕೈಪಿಡಿ ಬಿಡುಗಡೆ ಮಾಡಲಾಯಿತು. ಸಿಎಫ್ಟಿಆರ್‌ಐನ ಪ್ರಧಾನ ವಿಜ್ಞಾನಿ ಶಮಾ, ಎಸ್‌ವಿವೈಎಂನ ಪ್ರವೀಣ್‌ಕುಮಾರ್‌ ಇದ್ದರು.

ಕನ್ನಡದಲ್ಲಿ “ಆಹಾರ ವಿಜ್ಞಾನ’ ಕೈಪಿಡಿ: ಸಿಎಫ್ಟಿಆರ್‌ಐನ ನಿರ್ದೇಶಕ ಕೆಎಸ್‌ಎಂಎಸ್‌ ರಾಘವರಾವ್‌ ಮಾತನಾಡಿ, ಸಿಎಸ್‌ಐಆರ್‌-ಸಿಎಫ್ಟಿಆರ್‌ಐ ಕನ್ನಡದಲ್ಲಿ ಆಹಾರ ತಂತ್ರಜ್ಞಾನದ ವಿಷಯಗಳನ್ನು ಪ್ರಸಾರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕನ್ನಡದಲ್ಲಿಯೇ “ಆಹಾರ ವಿಜ್ಞಾನ’ ಎಂಬ ಕೈಪಿಡಿ ಹೊರತಂದಿದ್ದೇವೆ. ಅಂತೆಯೇ “ಊಟ-ಪಾಠ’ ಹೆಸರಿನಲ್ಲಿ ಆಹಾರ ಕುರಿತು ಜನತೆಗೆ ಮಾಹಿತಿ ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next