Advertisement

ಯೋಜನಾ ನಿರಾಶ್ರಿತರಿಗೆ ತ್ವರಿತವಾಗಿ ಪರಿಹಾರ ವಿತರಿಸಿ

07:23 AM Jun 16, 2019 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಜಲಾನಯನ ಪ್ರದೇಶಗಳು ಸೇರಿದಂತೆ ಅಭಿವೃದ್ಧಿ ಯೋಜನೆಗಳಿಗಾಗಿ ಜಮೀನು ಕಳೆದು ಕೊಂಡವರಿಗೆ ದೀರ್ಘ‌ಕಾಲದಿಂದ ಬಾಕಿ ಇರುವ ಪರಿಹಾರಗಳನ್ನು ಶೀಘ್ರವೇ ವಿತರಣೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ. ರೇವಣ್ಣ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು 15-20 ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಸರ್ಕಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಬಾಕಿ ಪಾವತಿ ಬಗ್ಗೆ ಎಲ್ಲಾ ತಹಶೀಲ್ದಾರರು ಸಭೆ ನಡೆಸಿ ವಿವರ ಸಂಗ್ರಸಿ ಗ್ರಾಮಲೆಕ್ಕಿಗರ ಮೂಲಕ ಎಲ್ಲಾ ಗ್ರಾಮಗಳಲ್ಲಿ ಕರಪತ್ರಗಳನ್ನು ವಿತರಣೆ ಮಾಡಿ ಅರ್ಹ ಫ‌ಲಾನುಭಗಳನ್ನು ಗುರುತಿಸಿ ಆದಷ್ಟು ಬೇಗ ಪರಿಹಾರ ನೀಡಿ ಎಂದು ಹೇಳಿದರು.

ಸರ್ವೆಯರ್‌ ನಿಯೋಜಿಸಿ: ತಾಲೂಕುವಾರು ಹೆಚ್ಚುವರಿ ಇರುವ ಸರ್ವೆಯರ್‌ಗಳನ್ನು ಕಾರ್ಯ ಒತ್ತಡಗಳಿರುವ ಕಚೇರಿಗಳಿಗೆ ನಿಯೋಜನೆಗೊಳಿಸಬೇಕು. ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಕೆಳಹಂತದ ಹುದ್ದೆಗಳ ನೇಮಕಾತಿ, ಪದೋನ್ನತಿಗಳನ್ನು ಬೇಗನೆ ಮುಗಿಸಿ, ಅಗತ್ಯವಿರುವ ಹೆಚ್ಚುವರಿ ಖಾಸಗಿ ಸರ್ವೆಯರ್‌ಗಳನ್ನು ಬಾಹ್ಯ ಗುತ್ತಿಗೆ ಮೇರೆಗೆ ಪಡೆದು ಬಾಕಿ ಇರುವ ಎಲ್ಲಾ ಭೂಸ್ವಾಧೀನ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಸಚಿವರು ನಿರ್ದೇಶನ ನೀಡಿದರು.

ವೃದ್ಧರನ್ನು ಕಚೇರಿಗೆ ಅಲೆಸದಿರಿ: ವಯೋವೃದ್ಧರು, ದಿವ್ಯಾಂಗರು, ಬಡವರು, ನಿರ್ಗತಿಕರನ್ನು ಅಲೆಸಬೇಡಿ. ಜಿಲ್ಲೆಯಲ್ಲಿ ಸಾಮಾಜಿಕ ಭದ್ರತೆ, ಪಡಿತರ ಕಾರ್ಡ್‌ ವಿತರಣೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಿ. ಯಾವುದೇ ಅರ್ಹ ಫ‌ಲಾನುಭವಿ ಮಾಸಾಶನದಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಕಾರ್ಮಿಕರನ್ನು ನೇಮಿಸಿ: ಜಿಲ್ಲೆಯಲ್ಲಿರುವ ಎಲ್ಲಾ ಕಾರ್ಖಾನೆಗಳ ಮುಖ್ಯಸ್ಥರನ್ನು ಕರೆಸಿ ಅಲ್ಲಿ ಕೆಲಸಗಾರರ ನೇಮಕಾತಿಗಳಲ್ಲಿ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡುವಂತೆ ಸೂಕ್ತ ಸೂಚನೆ ನೀಡಲು ಜಿಲ್ಲಾಧಿಕಾರಿಯವರು ಕಾರ್ಮಿಕ ಇಲಾಖೆ ಹಾಗೂ ಕೈಗಾರಿಕಾ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

Advertisement

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರು, ಅಪರ ಜಿಲ್ಲಾಧಿಕಾರಿಯವರು, ಉಪಭಾಗಾಧಿಕಾರಿಗಳು, ತಹಶೀಲ್ದಾರರು ಪ್ರತ್ಯೇಕವಾಗಿ ತಿಂಗಳಿಗೆ ಕನಿಷ್ಠ ನಾಲ್ಕು ಗ್ರಾಮಗಳಿಗೆ ಎಲ್ಲಾ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಅರ್ಜಿ ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಅಕ್ರಂಪಾಷಾ, ಅಪರ ಜಿಲ್ಲಾಧಿಕಾರಿ ಎಂ.ಎಲ್‌. ವೈಶಾಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಉಪಭಾಗಾಧಿಕಾರಿಗಳಾದ ಎಚ್‌.ಎಲ್‌ ನಾಗರಾಜ್‌, ಕವಿತಾ ರಾಜಾರಾಂ, ವಿಶೇಷ ಭೂಸ್ವಾಧೀನಾಧಿಕಾರಿ ಗಿರೀಶ್‌ ನಂದನ್‌, ತಹಶೀಲ್ದಾರರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕಂಟ್ರೋಲ್‌ ರೂಂ ಸ್ಥಾಪಿಸಿ: ಮೊಸಳೆಹೊಸಳ್ಳಿ, ಹರಿಹರಪುರ, ಹೆರಗು, ಸೋಮನಹಳ್ಳಿ ಸೇರಿದಂತೆ ಕಡೆ ಅಗತ್ಯವಿರುವ ಸ್ಥಳಗಳಲ್ಲಿ ನಾಡ ಕಚೇರಿಗಳನ್ನು ತೆರೆಯಲು ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಜಿಲ್ಲೆಯಲ್ಲಿ ಒಂದು ಅತ್ಯಾಧುನಿಕ ವ್ಯವಸ್ಥಿತ ಕಂಟ್ರೋಲ್‌ ರೂಂ ಸ್ಥಾಪಿಸಿ ಜಿಲ್ಲೆಯ ಎಲ್ಲಾ ಆಗು ಹೋಗುಗಳ ಬಗ್ಗೆ ನಿಗಾವಹಿಸಬೇಕು. ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಿ ಇದೇ ರೀತಿ ಅಕ್ರಮ ಸಕ್ರಮ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಅದೇ ರೀತಿ ಸರ್ಕಾರಿ ಜಾಗಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ರೇವಣ್ಣ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next