Advertisement

ಸರ್ಕಾರಿ ಯೋಜನೆ ಜನರಿಗೆ ತಲುಪಿಸಿ

09:35 AM Oct 31, 2021 | Team Udayavani |

ಕಲಬುರಗಿ: ಬ್ಯಾಂಕ್‌ಗಳಲ್ಲಿ ರೈತರು ಸೇರಿದಂತೆ ಫಲಾನುಭವಿಗಳಿಗೆ ಸರಿಯಾಗಿ ಸಾಲ ವಿತರಣೆಯಾಗುವ ನಿಟ್ಟಿನಲ್ಲಿ ಮುಂಬರುವ ಸಂಸತ್‌ ಅಧಿವೇಶನದಲ್ಲಿ ಚರ್ಚಿಸುವುದಾಗಿ ಸಂಸದ ಡಾ| ಉಮೇಶ ಜಾಧವ ಹೇಳಿದರು.

Advertisement

ನಗರದ ನೂತನ ಮಹಾವಿದ್ಯಾಲಯದ ಸಂಗಮೇಶ್ವರ ಸಭಾಂಗಣದಲ್ಲಿ ಶನಿವಾರ ಕಲಬುರಗಿ ಲೀಡ್‌ ಬ್ಯಾಂಕ್‌ ವತಿಯಿಂದ ನಡೆದ ಸಾಲ ಸಂಪರ್ಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿಗಳ ಮುದ್ರಾ ಯೋಜನೆ, ಪಿಎಂ ಸ್ವನಿಧಿ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಸೇರಿದಂತೆ ಹಲವಾರು ಒಳ್ಳೊಳ್ಳೆ ಸಾಮಾಜಿಕ ಭದ್ರತೆ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇವುಗಳ ಬಗ್ಗೆ ಸರಿಯಾಗಿ ಜಾಗೃತಿಯಾಗುತ್ತಿಲ್ಲ. ಇಂತಹ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಗ್ರಾಹಕರು ಬ್ಯಾಂಕ್‌ಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಟ್ಟಿದ್ದಾರೆ. ಅದನ್ನು ಹುಸಿಗೊಳಿಸಬಾರದು. ಬ್ಯಾಂಕ್‌ಗೆ ಬರುವ ಸಾರ್ವಜನಿಕರಿಗೆ ಸರ್ಕಾರದ ಸಾಲ-ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು. ಹೊಸ ಯೋಜನೆಗಳ ಜಾರಿ ಮತ್ತು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಲಬುರಗಿ ವಾಣಿಜ್ಯ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಸರ್ಕಾರದ ವಿವಿಧ ಇಲಾಖೆಗಳನ್ನು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ| ಶಂಕರಣ್ಣ ವಣಿಕ್ಯಾಳ ಮಾತನಾಡಿ, ಗ್ರಾಹಕರು ಹಾಗೂ ಫಲಾನುಭವಿಗಳಿಗೆ ಯೋಜನೆಗಳ ಷರತ್ತು ಮತ್ತು ನಿಬಂಧನೆ ತಿಳಿಸುವ ನಿಟ್ಟಿನಲ್ಲಿ ಕನ್ನಡ ಭಾಷೆಯಲ್ಲಿಯೂ ಮಾಹಿತಿ ಒದಗಿಸಬೇಕು. ಈ ಬಗ್ಗೆ ಮಾಹಿತಿ ಕೇಂದ್ರ ಸ್ಥಾಪಿಸಬೇಕೆಂದು ಸಲಹೆ ನೀಡಿದರು. ಸಾಲ ಮತ್ತಿತರ ಯೋಜನೆಗಳನ್ನು ಬ್ಯಾಂಕ್‌ ಗಳು ಸರಿಯಾಗಿ ಜಾರಿ ಮಾಡಿದಲ್ಲಿ ಗ್ರಾಹಕರು ದೂರು ಹೊತ್ತು ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ ಕಚೇರಿಯತ್ತ ಅಲೆದಾಡುವುದು ತಪ್ಪುತ್ತದೆ. ದೂರುಗಳು ಬಾರದ ನಿಟ್ಟಿನಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

Advertisement

ಇದನ್ನೂ ಓದಿ: ಅಪ್ಪು ಅಂತಿಮಯಾತ್ರೆ ಶಾಂತಿಯುತ : ಗೃಹ ಸಚಿವರ ಧನ್ಯವಾದ

ಸಹಾಯಕ ಪ್ರಧಾನ ವ್ಯವಸ್ಥಾಪಕ ಗಿರೀಶ ಮಾತ ನಾಡಿ, ಪ್ರಧಾನ ಮಂತ್ರಿಗಳ ಸ್ವನಿಧಿ ಯೋಜನೆ ಸಾಧನೆಯಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಈ ಸಾಧನೆ ಹಿಂದೆ ಜನಪ್ರತಿನಿಧಿಗಳು, ಪಾಲಿಕೆ ಮತ್ತು ಬ್ಯಾಂಕ್‌ ಅಧಿಕಾರಿಗಳ ಶ್ರಮವಿದೆ ಎಂದರು.

ಬೆಂಗಳೂರಿನ ಭಾರತೀಯ ಸೇಟ್‌ ಬ್ಯಾಂಕ್‌ (ಎಲ್‌ಎಚ್‌ಓ-ನೆಟ್‌ವಕ್‌-1) ಪ್ರಧಾನ ವ್ಯವಸ್ಥಾಪಕ ಎಸ್‌.ರಾಧಾಕೃಷ್ಣನ್‌ ಮಾತನಾಡಿದರು. ಇದೇ ಸಂದರ್ಭದಲ್ಲಿ ಬ್ಯಾಂಕ್‌ಗಳ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ 17 ಮಳಿಗೆಗಳನ್ನು ಸಂಸದರು ಉದ್ಘಾಟಿಸಿದರು. ಅಲ್ಲದೇ, ವಿವಿಧ ಬ್ಯಾಂಕ್‌ಗಳ ಮೂಲಕ ಸಾಲ-ಸವಲತ್ತುಗಳನ್ನು ಗ್ರಾಹಕರಿಗೆ ವಿತರಿಸಲಾಯಿತು. ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಫಲಾನುಭವಿ ಕುಟುಂಬಕ್ಕೆ 2 ಲಕ್ಷ ರೂಪಾಯಿ ಮೊತ್ತದ ಚೆಕ್‌, ಆನಂದ ಜಿ. ಎಂಬುವರಿಗೆ ಯೂನಿಯನ್‌ ಬ್ಯಾಂಕ್‌ ವತಿಯಿಂದ 66 ಲಕ್ಷ ರೂ. ಗಳ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಿರ್ಮಾಣದ ಸಾಲ ವಿತರಿಸಲಾಯಿತು. ಕಮಲಾಪುರ ಕೆಜಿಬಿ ಬ್ಯಾಂಕ್‌ ವತಿಯಿಂದ ಡೈರಿ ಅಭಿವೃದ್ಧಿಗಾಗಿ 29 ಲಕ್ಷ ರೂ.ಗಳ ಚೆಕ್‌ನ್ನು ಫಲಾನುಭವಿಗೆ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಡಾ| ದಿಲೀಷ ಸಸಿ, ಎಸ್‌ಬಿಐ ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ಜೋಬಿ ಜೋಸ್‌, ಕಾರ್ಯದರ್ಶಿ ಶ್ರೀಧರ್‌ ನಬಾರ್ಡ್‌ ಡಿಡಿಎಂ ರಮೇಶ್‌ಭಟ್‌, ಎಸ್‌ಬಿಐನ ಜನರಲ್‌ ಮ್ಯಾನೇಜರ್‌ ಇಂತೇಸಾರ್‌ ಹುಸೇನ್‌, ಕೆಜಿಬಿ ಪ್ರಾದೇಶಿಕ ವ್ಯವಸ್ಥಾಪಕ ಗುರುರಾಜ್‌.ಎಸ್‌., ಕೆನರಾ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕಿ ನಳಿನಿ, ಬರೋಡಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಸುನೀಲ ಕುಮಾರ್‌, ಯೂನಿಯನ್‌ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಅರವಿಂದ ಹೆಗ್ಡೆ ಮತ್ತಿರರು ಪಾಲ್ಗೊಂಡಿದ್ದರು.

ಬ್ಯಾಂಕ್‌ಗೆ ಬರುವ ಪ್ರತಿಯೊಬ್ಬ ಗ್ರಾಹಕನ ಭಾವನೆಗಳನ್ನು ಅರ್ಥ ಮಾಡಿಕೊಂಡು ಸಿಬ್ಬಂದಿ ಕೆಲಸ ಮಾಡಬೇಕು. ಯಾವುದೇ ಗ್ರಾಹಕ ಅಥವಾ ಫಲಾನುಭವಿ ನಗುಹೊತ್ತು ಬ್ಯಾಂಕ್‌ನಿಂದ ಹೊರಹೊಗಬೇಕೇ ಹೊರತು ಬೇಸರ, ಅಸಮಾಧಾನಗಳನ್ನಲ್ಲ. -ಎಸ್‌.ರಾಧಾಕೃಷ್ಣನ್‌, ಪ್ರಧಾನ ವ್ಯವಸ್ಥಾಪಕ, ಭಾರತೀಯ ಸೇಟ್‌ ಬ್ಯಾಂಕ್‌

Advertisement

Udayavani is now on Telegram. Click here to join our channel and stay updated with the latest news.

Next