ಹಾಸನ: ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ರಾಜ್ಯ ಸರ್ಕಾರ ಘೋಷಿಸಿರುವ ಆರ್ಥಿಕ ನೆರವು ಪ್ಯಾಕೇಜ್ ಸಕಾಲದಲ್ಲಿ ಅರ್ಹ ಫಲಾನುಭವಿ ಗಳಿಗೆ ತಲುಪುವಂತೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೂವು ಹಣ್ಣು, ತರಕಾರಿ ಬೆಳೆಗಾರರಿಗೆ ಘೋಷಿಸಿದ ಪರಿಹಾರದ ಪ್ಯಾಕೇಜ್ ಹಾಗೂ ಕಟ್ಟಡ ಕಾರ್ಮಿಕರು, ಅಗಸ ಮತ್ತು ಸವಿತಾ ಸಮಾಜಕ್ಕೆ ಬಿಡುಗಡೆ ಮಾಡಿರುವ ಆರ್ಥಿಕ ನೆರವು ಎಲ್ಲ ಅರ್ಹರಿಗೆ ತಲುಪಬೇಕು ಎಂದು ಹೇಳಿದರು.
ಇಲಾಖೆಗಳ ಸಮನ್ಯಯ ಅಗತ್ಯ: ವಿಧವಾ, ವದ್ಧ್ಯಾಪ್ಯ, ದಿವ್ಯಾಂಗರೂ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಪ್ರತಿ ತಿಂಗಳು ಮಾಸಿಕ ಪಿಂಚಣಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲ ಇಲಾಖೆಗಳು ಪರಸ್ಪರ ಪೂರಕವಾಗಿ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಮುಂಗಾರು ಹಂಗಾಮಿನಲ್ಲಿ ಕೃಷಿ ತೋಟಗಾರಿಕೆ ಬೆಳೆಗಳ ಬಿತ್ತನೆ ಬೀಜ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಾಗ ಬಾರದು. ಅತಿವೃಷ್ಟಿ ಹಾನಿ, ಪ್ರಕೃತಿ ವಿಕೋಪ ನಿಯಂತ್ರಣಗಳ ಬಗ್ಗೆ ಎಲ್ಲ ರೀತಿಯ ಅಗತ್ಯ ಮುಂಜಾಗ್ರತೆ ವಹಿಸಬೇಕು ಎಂದರು.
ಕೋವಿಡ್ 19 ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ: ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಇತರೆ ರೋಗಿಗಳಿಗೂ ಹೆಚ್ಚಿನ ಚಿಕಿತ್ಸೆ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. 108 ಆ್ಯಂಬುಲೆನ್ಸ್ ವಾಹನಗಳು ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯದಂತೆ ನಿಯಂತ್ರಿಸಿ ಎಂದು ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಆರ್. ಗಿರೀಶ್, ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಪಂ ಸಿಇಒ ಬಿ.ಎ. ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ತೋಟಗಾರಿಕೆ ಕಾಲೇಜು ಪ್ರಾರಂಭಿಸಿ..: ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಹೆಚ್ಚಿನ ಸಹಕಾರ ನಿರೀಕ್ಷಿಸಿದ್ದೇವೆ. ಜಲ್ಲೆಯಲ್ಲಿರುವ ಕೈಗಾರಿಕೆಗಳ ಸಿ.ಎಸ್.ಆರ್. ನಿಧಿಯನ್ನು ಆಶಾ ಕಾರ್ಯಕರ್ತರ ಪ್ರೋತ್ಸಾಹ ವಿತರಣೆಗೆ ಬಳಸಬೇಕು.
ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಆಲೂಗಡ್ಡೆ ಬೆಳೆಗಾರರಿಗೆ ಹಾಗೂ ಲಾಕ್‌ಡೌನ್ ವೇಳೆ ನಷ್ಟ ಅನುಭವಿಸಿರುವ ಕೃಷಿ ತೋಟಗಾರಿಕಾ ಬೆಳೆಗಾರರಿಗೆ ಆರ್ಥಿಕ ನೆರವು ಒದಗಿಸಬೇಕು ಒತ್ತಾಯಿಸಿದರು. ಜಿಲ್ಲೆಯಲ್ಲಿ ಕುಡಿವ ನೀರಿನ ಯೋಜನೆಗಳು ಪರಿಣಾಮಕಾರಿ ಅನುಷ್ಠಾನ ಅಗಬೇಕು. ಜಿಲ್ಲಾ ಪಂಚಾ ಯಿತಿಗೆ ಕುಡಿಯುವ ನೀರಿಗಾಗಿ ಬಿಡುಗಡೆ ಅಗಿರುವ 6ಕೋಟಿ ರೂ. ಅನುದಾನವನ್ನು ಎಲ್ಲ ತಾಲೂಕಿಗೆ ಸಮಾನವಾಗಿ ಹಂಚಿಕೆ ಮಾಡಿ ಕಾಮಗಾರಿ ಪ್ರಾರಂಭ ಮಾಡಬೇಕು.
ಸೋಮನಹಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಪ್ರಾರಂಭ ಅಗಬೇಕಿದ್ದ ತೋಟಗಾರಿಕಾ ಕಾಲೇಜು ಮಂಜೂರಾತಿ ಮಂದುವರಿಸಿ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು. ಜಿಲ್ಲೆಯ ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಬೆಂಗಳೂರಿಗೆ ಸ್ಥಳಾಂತರ ಸ್ಥಳಾಂತರ ಮಾಡುವ ನಿರ್ಧಾರ ಕೈ ಬಿಟ್ಟು ಅವುಗಳನ್ನು ಬಲ ಪಡಿಸಬೇಕು ಎಂದು ಆಗ್ರಸಿದರು.